12% ಡಿವಿಡೆಂಡ್ | 2025-26ರ ಅಂತ್ಯಕ್ಕೆ ರೂ.100 ಕೋಟಿಯ ವ್ಯವಹಾರದ ಗುರಿ
ಪುತ್ತೂರು: ಮಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ 15ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ಸೆ.7 ರಂದು ಸಂಘದ ಅಧ್ಯಕ್ಷರಾದ ಎಸ್ ಸತೀಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಮಹಾಸಭೆಯನ್ನು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಮಹಾಸಭೆಯ ಉದ್ಘಾಟನೆ ನೆರವೇರಿತು. ಸಹಕಾರಿಯ ಉಪಾಧ್ಯಕ್ಷರಾದ ಎಂ.ಎಮ್ ಜಗನ್ನಾಥ ಕಾಮತ್ ರವರು ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. 2024-25ನೇ ಸಾಲಿನ ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಅಧ್ಯಕ್ಷ ಎಸ್.ಸತೀಶ್ ನಾಯಕ್ ರವರು ಮಂಡಿಸಿ, ಒಟ್ಟು 5095 ಸದಸ್ಯರುಗಳಿಂದ ರೂ.72.69 ಲಕ್ಷ ಪಾಲು ಬಂಡವಾಳ ಹಾಗೂ ಆರ್ಥಿಕ ವರ್ಷದಲ್ಲಿ ರೂ.49 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದ್ದು ಸುಮಾರು ರೂ.31 ಕೋಟಿ ಸಾಲ ನೀಡಿದ್ದು, ರೂ.28.98 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಗತ ವರ್ಷದ ಲಾಭಾಂಶದಲ್ಲಿ ಎಲ್ಲಾ ಸದಸ್ಯರಿಗೆ 12% ಡಿವಿಡೆಂಡ್ ಕೊಡಲು ಮಹಾಸಭೆಯಲ್ಲಿ ಸರ್ವಾನುಮತದ ಅನುಮೋದನೆ ಪಡೆಯಲಾಯಿತು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ಕಮಲಾಕ್ಷ ಎಚ್.ಎಲ್.ರವರು 2025-26ರ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಭುವನೇಂದ್ರ ಸಹಕಾರಿಯ ಕಳೆದ 15 ವರ್ಷಗಳ ಪ್ರಗತಿಯನ್ನು ಅಂಕಿ ಅಂಶಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಸಹಕಾರಿಯು ಜಿಲ್ಲೆಯಲ್ಲೇ ಒಂದು ಮಾದರಿ ಸಹಕಾರಿಯಾಗಿ 2025-26ರ ಅಂತ್ಯಕ್ಕೆ ರೂ.100 ಕೋಟಿಯ ಒಟ್ಟು ವ್ಯವಹಾರ ಮಾಡಲು ಸದಸ್ಯರೆಲ್ಲರ ತುಂಬು ಹೃದಯದ ಪ್ರೋತ್ಸಾಹ ನೀಡಿ ಸಹಕರಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಹಕಾರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭೆಯಲ್ಲಿ ಉಪಸ್ಥಿತರಿದ್ದು, ಮುಂದಿನ ದಿನಗಳಲ್ಲಿ ಸಹಕಾರಿಯ ಸರ್ವತೋಮುಖ ವ್ಯವಹಾರದ ಅಭಿವೃದ್ಧಿಗೋಸ್ಕರ ಉತ್ತಮ ಸಲಹೆ ಸೂಚನೆಯನ್ನು ನೀಡಿದರು. ಮಹಿಳಾ ನಿರ್ದೇಶಕಿ ಶ್ರೀಮತಿ ನಿವೇದಿತಾ ಜಿ ಪ್ರಭು ವಂದಿಸಿದರು.
ಸನ್ಮಾನ..
ಈ ಸಂದರ್ಭದಲ್ಲಿ ಶ್ರೀ ಭುವನೇಂದ್ರ ಸೇವಾ ಪತ್ತಿನ, ಪ್ರವರ್ತಕರು, ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಂಗಳೂರು ಇವರ ವತಿಯಿಂದ ಜಿ ಎಸ್ ಬಿ ಸಮಾಜದ ಓರ್ವ ಅತ್ಯಂತ ಹಿರಿಯ ವೈದಿಕರಾದ ವೇದಮೂರ್ತಿ ಶ್ರೀ ಸುಧಾಕರ ಭಟ್ ಎಸ್.ವೈ ದಂಪತಿಗಳನ್ನು ಅವರು ನೀಡಿದ ಧಾರ್ಮಿಕ ಸೇವೆಗೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಈ ಸನ್ಮಾನವನ್ನು ಸಹಕಾರಿಯ ಅಧ್ಯಕ್ಷರು, ನಿರ್ದೇಶಕರು ಮತ್ತು ಸ್ಥಾಪಕ ನಿರ್ದೇಶಕರಲ್ಲೋರ್ವರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರು ನಡೆಸಿಕೊಟ್ಟರು.