ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗಗಳು ಒಂದೊಂದೇ ಮರಳಿ ದೇವಸ್ಥಾನದ ಆಡಳಿತಕ್ಕೆ ಬರುತ್ತಿದ್ದು, ಹಸ್ತಾಂತರ ಕಾರ್ಯಕ್ರಮ ನಿರಂತರ ನಡೆಯುತ್ತಿದೆ. ಇದೀಗ ನೆಲ್ಲಿಕಟ್ಟೆಯಲ್ಲಿ ಸುಸಜ್ಜಿತ ಟಾರಸಿ ಮನೆಯೊಂದನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಗಿದೆ.
ಸೆ.14ರಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸಮಿತಿ ಸದಸ್ಯರು ಹಾಗು ಕಚೇರಿ ಸಿಬ್ಬಂದಿಗಳು ನೆಲ್ಲಿಕಟ್ಟೆಯಲ್ಲಿ ದೇವಸ್ಥಾನದ ಜಾಗದಲ್ಲಿರುವ ಮನೆಗೆ ತೆರಳಿ ದೇವಳದ ಸುಪರ್ದಿಗೆ ಪಡೆದು ಕೊಂಡಿದ್ದಾರೆ. ಆ ಮನೆಯಲ್ಲಿ ವಾಸ್ತವ್ಯ ಇದ್ದವರು ಇತ್ತೀಚೆಗೆ ದೇವಸ್ಥಾನಕ್ಕೆ ಬಂದು ಮನೆಯ ಬೀಗದ ಕೀ ಅನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ. ಈ ನಿಟ್ಟಿನಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ಪದ್ಮನಾಭ ಅವರು ನೆಲ್ಲಿಕಟ್ಟೆ ಮನೆಗೆ ತೆರಳಿ ಪರಿಶೀಲನೆ ಮಾಡಿದ್ದಾರೆ..

ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 10 ಸೆಂಟ್ಸ್ ಜಾಗವನ್ನು ವ್ಯಕ್ತಿಯೊಬ್ಬರು ದೇವಸ್ಥಾನಕ್ಕೆ ಮರಳಿಸಿದ್ದಾರೆ. ಈ ಹಿಂದೆ ಅವರು ಶಾಸಕರಲ್ಲಿ 2 ತಿಂಗಳು ಕಾಲಾವಕಾಶ ಕೇಳಿದ್ದರು. 2 ತಿಂಗಳು ಅವರಿಗೆ ಕಾಲಾವಕಾಶ ನೀಡಿದ್ದೆವು. ಇದೀಗ ಅವರು ನಿನ್ನೆ ಬೀಗವನ್ನು ಹಸ್ತಾಂತರಿಸಿದ್ದಾರೆ. ಇಲ್ಲಿ ಸುಮರು 800 ಚದರ ಅಡಿಯ ಮನೆಯೂ ಇದೆ. ಮುಂದಿನ ದಿನ ಇಲ್ಲಿ ದೇವಳಕ್ಕೆ ಯಾವ ರೀತಿ ಉಪಯೋಗಿಸಬಹುದೆಂದು ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದೇವೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು