ಅಕ್ಷಯ ಕಾಲೇಜಿನಲ್ಲಿ ” ಗ್ಲಿಟ್ಟರ್ಸ್ ” ಫ್ರೆಶರ್ಸ್ ಡೇ

0

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2025- 2026ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ “ಗ್ಲಿಟ್ಟರ್ಸ್ “ನ್ನು ಸಂಸ್ಥೆಯ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಮೂಲಕ ಮತ್ತು
ಐ.ಕ್ಯೂ.ಎ.ಸಿ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಿದರು.

ಕಾರ್ಯಕ್ರಮವನ್ನು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೊಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ನಗರ ಪ್ರದೇಶದಲ್ಲಿ ಪ್ರಚಲಿತವಿರುವ ವಿಭಿನ್ನವಾದ ವೃತ್ತಿಪರ ಕೋರ್ಸ್ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಚಯಸಿದ ಅಕ್ಷಯ ವಿದ್ಯಾಸಂಸ್ಥೆ, ನಗರೀಕರಣದ ಸಮಸ್ಯೆ ಮತ್ತು ಸವಾಲುಗಳಿಗೆ ಉತ್ತರವೆಂಬಂತೆ ಕಾರ್ಯ ನಿರ್ವಹಿಸುವುದು ಸ್ವಾಗತಾರ್ಹ. ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಮೌಲ್ಯಗಳೊಂದಿಗೆ ವಿದ್ಯಾರ್ಥಿ ಜೀವನಕ್ಕೆ ಭದ್ರ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಸಮಾಜ ಬಾಹಿರ ಚಟುವಟಿಕೆಗಳು ಸಾಮಾಜಿಕ ಮೌಲ್ಯಗಳನ್ನು ಕುಗ್ಗಿಸಿ ಜೀವನದ ಗತಿಯನ್ನು ಬದಲಾಯಿಸುತ್ತವೆ .ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಹಳ ಎಚ್ಚರದಿಂದ ಇರಬೇಕು ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇಬ್ರಾಹಿಂ ಎಂ, ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಮಾತನಾಡಿ, ಸೈದ್ಧಾಂತಿಕವಾಗಿ ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ವಂಶ ಪಾರಂಪರ್ಯವಾಗಿ ಜೀನ್ ಗಳ ಪ್ರಭಾವ ಮತ್ತು ಮಗುವು ಬೆಳೆದು ಬರುವ ಪರಿಸರ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ಮನೆ, ಸಮಾಜ ಮತ್ತು ವಿದ್ಯಾ ಸಂಸ್ಥೆಗಳು ಮಗುವಿನ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದರೆ ಮಾತ್ರ ಅರ್ಥಪೂರ್ಣ ವ್ಯಕ್ತಿತ್ವವನ್ನು ಬೆಳೆಸ ಬಹುದು. ಪ್ರಸ್ತುತ ವಿದ್ಯಾರ್ಥಿಗಳು ಯಾಂತ್ರೀಕೃತ ಜೀವನ ಶೈಲಿಯನ್ನು ಅನುಭವಿ ಸುತ್ತಾರೆ. ಹಿಂದಿನ ತಲೆಮಾರಿನ ಜನತೆ ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳ ವಿಸ್ಮಯಕಾರಿ ಬದುಕಿನಿಂದ ಅದೆಷ್ಟೋ ವಿಷಯಗಳನ್ನು ಮನದಟ್ಟು ಮಾಡಿ ವಿಜ್ಞಾನಕ್ಕೂ ಬೆರಗು ಮೂಡಿಸಿದ ಜ್ಞಾನವನ್ನು ಸಂಪಾದಿಸಿದ್ದಾರೆ .ಆಧುನಿಕತೆ ಮತ್ತು ನಗರೀಕರಣ ಜೊತೆಗೆ ಪಾಶ್ಚಿಮಾತ್ಯ ಜೀವನ ಶೈಲಿಯ ಋಣಾತ್ಮಕ ಪ್ರಭಾವಗಳು ಸಮಾಜದಲ್ಲಿ ಸಂಬಂಧವನ್ನು, ಬಂಧುತ್ವವನ್ನು ಕಡಿದು ಹಾಕಿ ಪೈಶಾಚಿಕ ವರ್ತನೆಯ ಈ ಕಾಲಘಟ್ಟ ಮಾನವ ಕುಲಕ್ಕೆ ಕಂಟಕ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜ ಬಾಹಿರ ಚಟುವಟಿಕೆಗಳಿಂದ ದೂರವಿದ್ದು ಗ್ರಾಮೀಣ ಪ್ರದೇಶದಲ್ಲಿ ಸುಸಂಸ್ಕೃತ ಜೀವನವನ್ನು ನಡೆಸುವಲ್ಲಿ ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಮನ ಮುಟ್ಟುವoತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲ್, ನಮ್ಮ ಸಮಾಜದಲ್ಲಿನ ಸಾಧಕರನ್ನು, ಜ್ಞಾನಿಗಳನ್ನು ,ಅನುಭವಿ ವ್ಯಕ್ತಿಗಳನ್ನು ವೈವಿಧ್ಯಮಯ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಮೂಲಕ ಸಾರ್ಥಕ ಬದುಕಿನ ರಹಸ್ಯವನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಳ್ಳುವ ವೇದಿಕೆಗಳನ್ನು ಸೃಷ್ಟಿಸುವದರ ಉದ್ದೇಶ ನಮ್ಮ ವಿದ್ಯಾರ್ಥಿಗಳಿಗೆ ಧನಾತ್ಮಕ ಮತ್ತು ಸ್ಪೂರ್ತಿದಾಯಕ ಜೀವನ ಮೌಲ್ಯಗಳನ್ನು ಹಾಗೂ ಆದರ್ಶ ಯುವ ಸಮೂಹವನ್ನು ಕಟ್ಟಬಹುದು. ವಿದ್ಯಾರ್ಥಿಗಳಿಗೆ ತಮ್ಮ ಗೊಂದಲದ ಪ್ರಾಯ ಘಟ್ಟದಲ್ಲಿ ವಿಚಾರಧಾರೆಗಳು ಮಾನಸಿಕ ಸ್ವಾಸ್ಥ್ಯ ನೀಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪರಿಸರವನ್ನು ಒದಗಿಸುತ್ತೇವೆ .ಹಿರಿಯರ ಮಾರ್ಗದರ್ಶನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲೆ ಗಂಗಾ ರತ್ನ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ ಉಪಸ್ಥಿತರಿದ್ದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ವರ್ಷಿಣಿ ಸ್ವಾಗತಿಸಿ , ವಿದ್ಯಾರ್ಥಿ ಒಕ್ಕೂಟದ ನಾಯಕ ರಾಕೇಶ್. ಕೆ ವಂದಿಸಿದರು. ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಗಳಾದ ಮೋಕ್ಷ, ಸ್ವರ್ಣಶ್ರೀ ಮತ್ತು ದೇವಿಕ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ವಿಂಧುಶ್ರೀ ಕಾರ್ಯಕ್ರಮವನ್ನು
ನಿರೂಪಿಸಿದರು.

LEAVE A REPLY

Please enter your comment!
Please enter your name here