ಸೆ.20ರಂದು ವಾರ್ಷಿಕ ಮಹಾಸಭೆ
ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ 165 ಕೋಟಿ 56 ಲಕ್ಷ ರೂ. ವ್ಯವಹಾರ ನಡೆಸಿ 64 ಲಕ್ಷದ 53 ಸಾವಿರ ರೂಪಾಯಿ ನಿವ್ವಳ ಲಾಭಗಳಿಸಿದೆ. ನಮ್ಮ ಸಂಘವು ಅಡಿಟ್ ವರ್ಗೀಕರಣದಲ್ಲಿ ಸತತ ಎ ಗ್ರೇಡನ್ನು ಪಡೆಯುತ್ತಾ ಬಂದಿದೆ ಎಂದು ಸಂಘದ ಅಧ್ಯಕ್ಷ ಎಸ್. ತೋಯಜಾಕ್ಷ ಶೆಟ್ಟಿ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ವಿವಿಧ ರಸಗೊಬ್ಬರ ಮಾರಾಟದಲ್ಲಿ 7 ಲಕ್ಷ 12 ಸಾವಿರ ಲಾಭಗಳಿಸುವಲ್ಲಿ ಯಶಸ್ವಿಯಾಗಿದೆ. ಬಂದ ಲಾಭಂಶದಲ್ಲಿ ಶೇ.20 ಡಿವಿಡೆಂಟ್ ಅನ್ನು ಸದಸ್ಯರಿಗೆ ನೀಡಲು ಮಹಾಸಭೆಗೆ ಶಿಪಾರಸ್ಸು ಮಾಡಲಾಗುವುದು. ಸಂಘದಲ್ಲಿ ವರ್ಷಾಂತಕ್ಕೆ 5,461 ಸದಸ್ಯರಿದ್ದು 26 ಕೋಟಿ 70 ಲಕ್ಷ ರೂ. ಠೇವಣಿ ಇದೆ.ಸಂಘದಲ್ಲಿ ಯಾವುದೇ ವಾಯಿದೆ ದಾಟಿದ ಸಾಲ ಬಾಕಿ ಇರುವುದಿಲ್ಲ. ಸತತ 19 ವರ್ಷದಿಂದ ಶೇ.100 ರಷ್ಟು ಸಾಲ ವಸೂಲಾತಿ ಮಾಡಿದ ಕೀರ್ತಿ ನಮ್ಮ ಸಂಘಕ್ಕಿದೆ ಎಂದರು.
ಸಂಘದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹಿರಿಯ ಕೃಷಿಕ ಬಂಧುಗಳನ್ನು ಗುರುತಿಸಿ ಸನ್ಮಾನಿಸಲಿದ್ದು, ಸಂಘದ ವ್ಯಾಪ್ತಿಗೊಳಪಟ್ಟ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುವುದು. ಅಲ್ಲದೇ, ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪೆನಿಯಿಂದ ಗೊಬ್ಬರವನ್ನು ರೈತರಿಗೆ ಸೇವಾ ನೆಲೆಯಲ್ಲಿ ವಿತರಿಸುವಲ್ಲಿ ಸಂಘ ಮನ್ನಣೆಯನ್ನು ನೀಡಿದೆ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ತನಿಯಪ್ಪ ಪೂಜಾರಿ, ನಿರ್ದೇಶಕರಾದ ಸುನಿಲ್ ನೆಲ್ಸನ್ ಪಿಂಟೋ, ನೀಲಪ್ಪ ಗೌಡ ಹಾಗೂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀಮತಿ ಪುಷ್ಪ ಡಿ. ಉಪಸ್ಥಿತರಿದ್ದರು.
ಸೆ.20ರಂದು ವಾರ್ಷಿಕ ಮಹಾಸಭೆ
ಸಂಘದ 2024-25ರ ಸಾಲಿನ ವಾರ್ಷಿಕ ಮಹಾಸಭೆಯು ಸೆ.20 ರಂದು ಬೆಳಗ್ಗೆ 10ಕ್ಕೆ ಸಂಘದ ಕಛೇರಿಯ 2ನೇ ಯ ಮಹಡಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್. ತೋಯಜಾಕ್ಷ ಶೆಟ್ಟಿ ತಿಳಿಸಿದರು.