ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಕಾರ್ಯ ನಮ್ಮಿಂದಲೇ ಆರಂಭ ಆಗಬೇಕು – ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್
ನೆಲ್ಯಾಡಿ: ಸಮಾಜದಲ್ಲಿ ಇಂದು ನಡೆಯುತ್ತಿರುವ ಅವ್ಯವಹಾರ, ವಿದ್ಯಾರ್ಥಿಗಳಲ್ಲಿ ಮೂಡಿಸುವ ಕೆಟ್ಟ ಚಟಗಳ ಪರಿಣಾಮ ವಿದ್ಯಾರ್ಥಿಗಳ ಜೀವನದ ಮೇಲೆ ಮಾನಸಿಕವಾಗಿ ಆರೋಗ್ಯಕರವಾಗಿ ಅನಾಹುತ ಆಗುವುದನ್ನು ನೆನಪಿಸಿ, ನಮ್ಮ ಜೀವನದಲ್ಲಿ ನಾವು ಯಾವ ರೀತಿ ಹೆಜ್ಜೆಯನ್ನು ಇಡಬೇಕು ಮತ್ತು ಕೆಟ್ಟವರಿಂದ ಹೇಗೆ ದೂರ ಇದ್ದು, ಈ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು ಎಂಬುದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಾಗರಿಕ ಶಿಷ್ಟಾಚಾರವನ್ನು ಪಾಲಿಸುವ ಮುಖಾಂತರ ಎಲ್ಲಾ ರೀತಿಯ ಕೆಟ್ಟ ವ್ಯವಹಾರದಿಂದ ದೂರವಿದ್ದು, ಆಚಾರ ವಿಚಾರಗಳಲ್ಲಿ ಪಾವಿತ್ರ್ಯತೆ ತಂದು ಜೀವನವನ್ನು ಸಾರ್ಥಕಗೊಳಿಸುವಲ್ಲಿ ಪ್ರಯತ್ನಿಸಬೇಕು. ಆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಉಪ್ಪಿನಂಗಡಿ ವಲಯದ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್ ಇವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ, ನೆಲ್ಯಾಡಿ ಮತ್ತು SCI ಹಾಗೂ ಆರಕ್ಷಕ ಠಾಣೆ ಉಪ್ಪಿನಂಗಡಿ ವಲಯ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ನಡೆಸಿದ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇದರ ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ ವಹಿಸಿದ್ದರು. ವೇದಿಕೆಯಲ್ಲಿ ಬೆಥನಿ ಐಟಿಐ ನೆಲ್ಯಾಡಿ ಇದರ ನಿರ್ದೇಶಕರಾದ ರೆ.ಫಾ.ಜಾರ್ಜ್ ಸಾಮುವೆಲ್ ಒಐಸಿ, ಪ್ರಾಂಶುಪಾಲರಾದ ಸಜಿ ಕೆ ತೋಮಸ್, ನೆಲ್ಯಾಡಿ ಪೋಲಿಸ್ ಹೊರಠಾಣಾ ಸಿಬ್ಬಂದಿಗಳಾದ ಪ್ರವೀಣ್, ಸಾಗರ್. ರವಿ ಉಪಸ್ಥಿತರಿದ್ದು, ಶುಭಹಾರೈಸಿದರು.

ಕಿರಿಯ ತರಬೇತಿದಾರರಾದ ವರ್ಗೀಸ್ ಎನ್ ಟಿ ಎಲ್ಲರನ್ನು ವೇದಿಕೆಗೆ ಆಹ್ವಾನಿಸಿದರು. ಕಿರಿಯ ತರಬೇತಿದಾರರಾದ ಸುಬ್ರಾಯ ಸಾಯಕ್ ಮುಖ್ಯ ಅಭ್ಯಾಗತರನ್ನು ಪರಿಚಯಿಸಿ Sci ನಲ್ಯಾಡಿ ಕಾರ್ಯದರ್ಶಿ ಸೀನಿಯರ್ ಪಿ ಪಿ ಎಫ್ ಉಲಹನ್ನಾನ್ ಪಿ ಎಂ ವಂದಿಸಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಅವಿನಾಶ್ ರವರನ್ನು ಗೌರವಿಸಲಾಯಿತು.