ಅಪಘಾತಕ್ಕೆ ಕಾರಣವಾಗುತ್ತಿದ್ದ ಕುಂಬ್ರ ಅವೈಜ್ಞಾನಿಕ ತಿರುವು ರಸ್ತೆಗೆ ಒಳಮೊಗ್ರು ಗ್ರಾ.ಪಂನಿಂದ ಸೇಪ್ಟೀ ಕೋನ್ ಅಳವಡಿಕೆ

0

ಪುತ್ತೂರು: ಅಪಘಾತಕ್ಕೆ ಕಾರಣವಾಗುತ್ತಿದ್ದ ಕುಂಬ್ರ ಜಂಕ್ಷನ್‌ನಲ್ಲಿದ್ದ ಅವೈಜ್ಞಾನಿಕ ತಿರುವು ರಸ್ತೆಗೆ ಸಂಚಾರ ಸುರಕ್ಷತಾ ಶಂಕುಗಳನ್ನು ಅಳವಡಿಸುವ ಮೂಲಕ ಒಳಮೊಗ್ರು ಗ್ರಾಮ ಪಂಚಾಯತ್ ಅಪಘಾತಕ್ಕೆ ಬ್ರೇಕ್ ಹಾಕಿದೆ. ಬೆಳ್ಳಾರೆ ರಸ್ತೆಯಿಂದ ಬರುವ ವಾಹನಗಳು ಬಂಟ್ವಾಳ ಮೈಸೂರು ರಾ.ಹೆದ್ದಾರಿಗೆ ತಿರುವು ಪಡೆದುಕೊಳ್ಳಬೇಕಾದರೆ ಕುಂಬ್ರ ಜಂಕ್ಷನ್‌ಗೆ ಸುತ್ತು ಹೊಡೆದು ಬರಬೇಕು ಆದರೆ ಕೆಲವೊಂದು ವಾಹನ ಚಾಲಕರು ರಿಕ್ಷಾ ಪಾರ್ಕಿಂಗ್‌ನ ಬದಿಯಿಂದ ಸದಾಶಿವರವರ ಹೂವಿನ ಅಂಗಡಿ ಪಕ್ಕದಲ್ಲೇ ತಿರುವು ಪಡೆದುಕೊಳ್ಳುತ್ತಿದ್ದರು. ಅದೇ ರೀತಿ ರಾ.ಹೆದ್ದಾರಿಯಿಂದ ಬೆಳ್ಳಾರೆ ರಸ್ತೆಗೆ ಬರುವವರು ಕೂಡ ಇದೇ ತಿರುವು ಜಾಗದಲ್ಲಿ ವಾಹನಗಳನ್ನು ನುಗ್ಗಿಸುತ್ತಿದ್ದರು. ಇದರಿಂದ ಪ್ರತಿದಿನ ಇಲ್ಲಿ ಅಪಘಾತಗಳು ಸಂಭವಿಸುತ್ತಿತ್ತು. ಈ ಬಗ್ಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಇಲ್ಲಿಗೆ ತಡೆಬೇಲಿ ಹಾಕುವಂತೆ ಕೇಳಿಕೊಂಡಿದ್ದರು. ಅದರಂತೆ ಇದೀಗ ಒಳಮೊಗ್ರು ಗ್ರಾಮ ಪಂಚಾಯತ್ ಟ್ರಾಫಿಕ್ ಸೇಪ್ಟೀ ಕೋನ್‌ಗಳನ್ನು ಅಳವಡಿಸುವ ಮೂಲಕ ಅವೈಜ್ಞಾನಿಕ ತಿರುವಿಗೆ ಬ್ರೇಕ್ ಹಾಕಿದೆ.


ಪ್ರತಿದಿನ ಅಪಘಾತಗಳು ಸಂಭವಿಸುತ್ತಿತ್ತು
ಸದಾಶಿವರವರ ಹೂವಿನ ಅಂಗಡಿ ಪಕ್ಕದಲ್ಲಿದ್ದ ಅಡ್ಡ ರಸ್ತೆಯಿಂದ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗೆ ಎಂಟ್ರಿ ಮಾಡುತ್ತಿದ್ದುದರಿಂದ ಇಲ್ಲಿ ಪ್ರತಿ ದಿನ ಅಪಘಾತಗಳು ಸಂಭವಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತೀ ವೇಗವಾಗಿ ಹೋಗುತ್ತಿರುವುದರಿಂದ ಇಲ್ಲಿ ವಾಹನಗಳು ಬೆಳ್ಳಾರೆ ರಸ್ತೆಗೆ ತಿರುವು ಪಡೆದುಕೊಳ್ಳುತ್ತಿರುವುದು ಗೊತ್ತಾಗದೇ ಇರುವುದು ಕೂಡ ಅಪಘಾತಕ್ಕೆ ಕಾರಣವಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೂ ಮನವಿ ಮಾಡಿಕೊಂಡಿದ್ದರು. ಇಲ್ಲಿಗೆ ಸೇಪ್ಟೀ ಕೋನ್ ಅಳವಡಿಸುವಂತೆ ಗ್ರಾಮಸಭೆಯಲ್ಲೂ ಕೇಳಿಕೊಂಡಿದ್ದರು.


ಪಂಚಾಯತ್‌ನಿಂದ ಸಂಚಾರ ಸುರಕ್ಷತಾ ಶಂಕುಗಳ ಅಳವಡಿಕೆ
ರಸ್ತೆಗೆ ಸಂಚಾರ ಸುರಕ್ಷತಾ ಶಂಕುಗಳನ್ನು ಅಳವಡಿಸುವುದು ಯಾರು ಎಂಬುದೇ ಪ್ರಶ್ನೆಯಾಗಿತ್ತು. ಪೊಲೀಸ್ ಇಲಾಖೆಯಾ? ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಾ? ಎಂಬುದಾಗಿತ್ತು. ಆದರೆ ಕೊನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರ ಮುತುವರ್ಜಿಯಿಂದ ಸಂಚಾರ ಸುರಕ್ಷತಾ ಶಂಕುಗಳ ಅಳವಡಿಕೆಯನ್ನು ಸೆ.17ರಂದು ರಾತ್ರಿ ಮಾಡಲಾಗಿದೆ. ಈ ಮೂಲಕ ಇಲ್ಲಿ ನಿರಂತರವಾಗಿ ಸಂಭವಿಸುತ್ತಿದ್ದ ವಾಹನ ಅಪಘಾತಕ್ಕೆ ಬ್ರೇಕ್ ನೀಡಿದಂತಾಗಿದೆ. ಪಂಚಾಯತ್‌ನವರ ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

‘ಇಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡಿದ್ದರು ಅದರಂತೆ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ಗ್ರಾಪಂ ವತಿಯಿಂದ ಟ್ರಾಫಿಕ್ ಸೇಫ್ಟೀ ಕೋನ್‌ಗಳನ್ನು ಅಳವಡಿಸುವ ಕೆಲಸ ಮಾಡಿದ್ದೇವೆ. ವಾಹನ ಚಾಲಕರು ಸುರಕ್ಷತೆಯ ದೃಷ್ಟಿಯಿಂದ ಸಂಚಾರ ನಿಯಮಗಳನ್ನು ಪಾಲಿಸಿಕೊಂಡು ಪಂಚಾಯತ್‌ನೊಂದಿಗೆ ಸಹಕಾರ ನೀಡಬೇಕಾಗಿ ವಿನಂತಿ.’
ತ್ರಿವೇಣಿ ಪಲ್ಲತ್ತಾರು,
ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here