ಸೆ.27,28: ರಾಮಕುಂಜದಲ್ಲಿ ಮೈಸೂರು ವಿಭಾಗ ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

0


ಆಹಾರ, ಕೃಷಿ, ಶೈಕ್ಷಣಿಕ, ವಾಣಿಜ್ಯ ಮೇಳ | ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ

ಪುತ್ತೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದ.ಕ., ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವರ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧೀನದಲ್ಲಿರುವ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ’ಕಬಡ್ಡಿ ಪಂದ್ಯಾಟ-2025’ ಸೆ.27 ಮತ್ತು 28ರಂದು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರು ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ, ಸಂಸದ ಕ್ಯಾ| ಬ್ರಿಜೇಶ್ ಚೌಟ ಸಹಿತ ದ.ಕ.ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಳಿಕ ಕಬಡ್ಡಿ ಪಂದ್ಯಾಟ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.


ಅಭಿನಂದನಾ ಸಮಾರಂಭ, ಸಾಂಸ್ಕೃತಿಕ ವೈಭವ:
ಆಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ ಅವರು ಮಾತನಾಡಿ ಕಬಡ್ಡಿ ಪಂದ್ಯಾಟದ ಜೊತೆಯಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಅವರ ಅಭಿನಂದನಾ ಸಮಾರಂಭವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ನೆರವೇರಿಸಲಿದ್ದೇವೆ. ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಖ್ಯಾತಿಯ ಆಳ್ವಾಸ್ ಸಾಂಸ್ಕೃತಿಕ ವೈಭವ, ಆಹಾರ, ಕೃಷಿ, ವಾಣಿಜ್ಯ, ಶೈಕ್ಷಣಿಕ, ವಿಜ್ಞಾನ ಮೇಳ ಹಾಗೂ ಹಾಸ್ಯ-ನೃತ್ಯ-ಸಂಗೀತ ಕಾರ್ಯಕ್ರಮ ನಡೆಯಲಿದೆ ಸತೀಶ್ ಭಟ್ ಅವರಿಗೆ ಬಿಳಿನೆಲೆ ಹಾಗೂ ರಾಮಕುಂಜದ ಅವರ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ ನಡೆಯಲಿದೆ. ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ಖ್ಯಾತ ವಾಗ್ಮಿಗಳೂ ಆದ ರಾಜೇಂದ್ರ ಭಟ್ ಕೆ.ಅಭಿನಂದನಾ ಭಾಷಣ ಮಾಡಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶಶಿಧರ ಜಿ.ಎಸ್. ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಕನ್ನಡ-ತುಳು ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ಸು ಫ್ರಂ ಸೋ ಚಲನಚಿತ್ರದ ನಾಯಕ ನಟ ಜೆ.ಪಿ.ತುಮಿನಾಡು ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಕ್ರೀಡಾಪುಟಗಳಿಗೆ ಸ್ವಾಗತ ಮೆರವಣಿಗೆ
ಸೆ.27ರಂದು ಪೂರ್ವಾಹ್ನ 9ಕ್ಕೆ ಆತೂರು ಸಿ.ಎ.ಬ್ಯಾಂಕ್ ಬಳಿಯಿಂದ ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ. ಪೂರ್ವಾಹ್ನ 10ಕ್ಕೆ ಪ್ರವೇಶದ್ವಾರ, ಮಳಿಗೆ, ಸಭಾಂಗಣದ ಉದ್ಘಾಟನೆ ನಡೆಯಲಿದೆ. ಪೂರ್ವಾಹ್ನ 10.30ರಿಂದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಕೇಶವ ಅಮೈ ಅವರು ತಿಳಿಸಿದರು.


100ಕ್ಕೂ ಹೆಚ್ಚು ಮಳಿಗೆಗಳು
ಕಾರ್ಯಕ್ರಮದಲ್ಲಿ ಕೃಷಿ, ವಾಣಿಜ್ಯ, ಶೈಕ್ಷಣಿಕ, ವಿಜ್ಞಾನ ಹಾಗೂ ಆಹಾರ ಮೇಳ ನಡೆಯಲಿದ್ದು 100ಕ್ಕಿಂತಲೂ ಹೆಚ್ಚು ಮಳಿಗೆಗಳಿರಲಿವೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ, ಪೊಲೀಸ್ ಇಲಾಖೆಯ ಸಹಕಾರವೂ ಪಡೆಯಲಾಗುವುದು. ಒಟ್ಟಿನಲ್ಲಿ ಕುಟುಂಬದ ಎಲ್ಲರೂ ಜೊತೆಯಾಗಿ ಬಂದು ನೋಡಬಹುದಾದ ಕಾರ್ಯಕ್ರಮ ಇದಾಗಿದೆ ಎಂದು ಎಂದು ಕೇಶವ ಅಮೈ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮತ್ತು ರಾಜ್ಯ ಪ್ರಶಸ್ತಿಪುರಸ್ಕೃತ ಸತೀಶ್ ಭಟ್, ಕಾರ್ಯಕ್ರಮದ ಸ್ವಾಗತ ಸಮಿತಿ ಸದಸ್ಯ ಪ್ರಮೋದ್ ಕುಮಾರ್ ಕೆ.ಕೆ ಅವರು ಉಪಸ್ಥಿತರಿದ್ದರು.


ಸಮಾರೋಪ/ಸಾಂಸ್ಕೃತಿಕ ರಸಸಂಜೆ:
ಸೆ.28ರಂದು ಬೆಳಿಗ್ಗೆ ಉಪಾಂತ್ಯ ಹಾಗೂ ಅಂತಿಮ ಪಂದ್ಯಗಳು ನಡೆಯಲಿದೆ. ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 4ರಿಂದ ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ರಸಸಂಜೆ ’ಚುರುಮುರಿ’ ಹಾಸ್ಯ-ನೃತ್ಯ-ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಹಾಸ್ಯ ಕಲಾವಿದರಾದ ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಅರುಣ್‌ಚಂದ್ರ ಬಿ.ಸಿ.ರೋಡ್, ರಂಜನ್ ಬೋಳೂರು, ಸೋಮನಾಥ್ ಮಂಗಲ್ಪಾಡಿ, ಸುರೇಶ್ ಸರಪಾಡಿ, ರವಿ ಸುಂಕದಕಟ್ಟೆ ಭಾಗವಹಿಸಲಿದ್ದಾರೆ ಎಂದು ಕೇಶವ ಅಮೈ ತಿಳಿಸಿದರು.


480ಸ್ಪರ್ಧಿಗಳು
ಕಬಡ್ಡಿ ಪಂದ್ಯಾಟದಲ್ಲಿ ದ.ಕ., ಉಡುಪಿ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಯ 14ರ ಹಾಗೂ 17ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ತಂಡ ಭಾಗವಹಿಸಲಿದೆ. ಪ್ರತಿ ಜಿಲ್ಲೆಯಿಂದ 4 ತಂಡಗಳಂತೆ ಒಟ್ಟು 32 ತಂಡಗಳಲ್ಲಿ 480 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಪಂದ್ಯಾಟ ಮ್ಯಾಟ್ ಅಂಕಣದಲ್ಲಿ ನಡೆಯಲಿದೆ. 8 ಜಿಲ್ಲೆಗಳ ಆಟಗಾರರು, ಅವರ ತರಬೇತುದಾರರು, ಅಧಿಕಾರಿಗಳು ಭಾಗವಹಿಸಲಿದ್ದು, ಅವರಿಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವಸತಿ ನಿಲಯ ಹಾಗೂ ಶ್ರೀ ರಾಮಕುಂಜೇಶ್ವರ ಸಿಬಿಎಸ್‌ಇ ವಿದ್ಯಾಲಯದಲ್ಲಿ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ವಿ.ಎ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here