ಪುತ್ತೂರು: ಇತ್ತೀಚೆಗೆ ನಿಧನರಾದ “ಜಯಣ್ಣ” ಎಂದೇ ಚಿರಪರಿಚಿತರಾಗಿರುವ ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್, ಕುರಿಯ ಗ್ರಾಮದ ಪಾಲಿಂಜೆ ಅಮ್ಮುಂಜ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಥಮ ಅಧ್ಯಕ್ಷ, ಸಂಪ್ಯ ನುಳಿಯಾಲು ಫಾರ್ಮ್ಸ್ ನಿವಾಸಿ ಪುತ್ತೂರಿನ ನುಳಿಯಾಲು ಮನೆತನದ ಅಪ್ಪಯ್ಯ ರೈ ಮತ್ತು ಕಮಲಾ ರೈ ದಂಪತಿ ಪುತ್ರ ಜಯರಾಮ್ ರೈ ನುಳಿಯಾಲುರವರ ಶ್ರದ್ಧಾಂಜಲಿ ಸಭೆಯು ಸೆ.21ರಂದು ಕೊಂಬೆಟ್ಟು ಬಂಟರಭವನದಲ್ಲಿ ಮಧ್ಯಾಹ್ನ ಜರಗಿತು.
ಸಿಬ್ಬಂದಿ, ಗ್ರಾಹಕರೊಂದಿಗೆ ಜನಾನುರಾಗಿಯಾಗಿದ್ದರು ಜಯರಾಮ್ ರೈರವರು-ಎ.ಜೆ ರೈ
ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಎ.ಜೆ ರೈ ಮಾತನಾಡಿ, ವಿಜಯಾ ಬ್ಯಾಂಕ್ ನಲ್ಲಿನ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿರುವ ಸಂದರ್ಭದಲ್ಲಿ ಜಯರಾಮ ರೈರವರು ಬ್ಯಾಂಕ್ ಸಿಬ್ಬಂದಿಗಳೊಂದಿಗೆ, ಗ್ರಾಹಕರೊಂದಿಗೆ ಜನಾನುರಾಗಿಯಾಗಿ ಒಳ್ಳೆಯ ಸಂಬಂಧ ಹೊಂದಿದ್ದರು. ವೃತ್ತಿಯಲ್ಲಿ ನಿಷ್ಠೆ, ಆತ್ಮೀಯತೆಯೊಂದಿಗೆ ತಾನು ಮಾಡಬೇಕಾದ ಕೆಲಸವನ್ನು ಸಾಧಿಸಬೇಕು ಎನ್ನುವ ಹಠಮಾರಿತನ ಸ್ವಭಾವ ಅವರಲ್ಲಿತ್ತು ಮಾತ್ರವಲ್ಲ ಅವರು ಬ್ಯಾಕಿಂಗ್ ಕ್ಷೇತ್ರದಂತೆ ಕೃಷಿಯಲ್ಲೂ ಅವರ ಕೊಡುಗೆ ಅಪಾರ ಎಂದು ಹೇಳಿ ವಿಜಯಾ ಬ್ಯಾಂಕ್ ಹಾಗೂ ಸಿಬ್ಬಂದಿ ಪರ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಅವರದ್ದು-ಪುರಂದರ ರೈ
ಅಗಲಿದ ಜಯರಾಮ ರೈ ನುಳಿಯಾಲುರವರ ಸಂಬಂಧಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಬ್ಯಾಂಕ್ ನಲ್ಲಿ ವಿವಿಧ ಕಡೆ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಯಾವುದೇ ಕಪ್ಪುಚುಕ್ಕೆ ಇಲ್ಲದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಿದವರು ಜಯರಾಮ್ ರೈರವರು. ಯಾವುದೇ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ತನಗೆ ವಹಿಸಿಕೊಟ್ಟ ಕಾರ್ಯವನ್ನು ನ್ಯಾಯ, ನಿಷ್ಠೆಯಿಂದ ಮಾಡುವವರು. ಓರ್ವ ಕುಟುಂಬ ಪ್ರೇಮಿಯಾಗಿದ್ದು ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿನ ಅವರ ಅಭಿವೃದ್ಧಿ ತುಡಿತದೊಂದಿಗೆ ಸಮಾಜಕ್ಕೆ ಬೇಕಾದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಹೇಳಿ ಅಗಲಿದ ಜಯರಾಮ ರೈರವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಶ್ರದ್ಧಾಂಜಲಿ ಕಾರ್ಯದಲ್ಲಿ ಅಗಲಿದ ಜಯರಾಮ ರೈ ನುಳಿಯಾಲುರವರ ಪುತ್ರ ಹರ್ಷಿತ್ ರೈ, ಸೊಸೆ ದೀಪಾಲಿ ರೈ, ಮೊಮ್ಮಗಳು ನವಮಿ ರೈ ಸಹಿತ ನುಳಿಯಾಲು ಹಾಗೂ ಎಡಮೊಗರುಗುತ್ತು ಕುಟುಂಬಸ್ಥರು, ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಗಲಿದ ಜಯರಾಮ ರೈ ನುಳಿಯಾಲುರವರು 1976ರ ಜನವರಿಯಲ್ಲಿ ವಿಜಯಾ ಬ್ಯಾಂಕ್ ಕೆ.ಜಿ.ರೋಡ್ ಶಾಖೆಯಲ್ಲಿ ಸೇವೆ ಪ್ರಾರಂಭಿಸಿ ಬಳಿಕ ಅಮೃತಸರ, ಸಕಲೇಶಪುರ, ಹಾಸನ, ಮುಂಬೈ, ನೀವರ್ಗಿ (ಬಿಜಾಪುರ), ಗೌಹಾಟಿ, ಪುತ್ತೂರು ದರ್ಬೆ ಮತ್ತು ಸುಳ್ಯ ಸೇರಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ಜಬ್ಬಲ್ಪುರ (ಮಧ್ಯಪ್ರದೇಶ)ದಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ವರ್ಗಾವಣೆಯಾಗಿ 2009ರಲ್ಲಿ ಸ್ವಯಂ ನಿವೃತ್ತಿ ಪಡೆದರು. ನಿವೃತ್ತಿ ಬಳಿಕ ಪುತ್ತೂರು(ಸಂಪ್ಯ)ದಲ್ಲಿ ಕೃಷಿ ಕ್ಷೇತ್ರವನ್ನು ಆರಂಭಿಸಿ ಪತ್ನಿ ಶ್ರೀಮತಿ ಗಾಯತ್ರಿಯವರೊಂದಿಗೆ ‘ನುಳಿಯಾಲು ಫಾರ್ಮ್ಸ್’ ಸ್ಥಾಪಿಸಿ ಅಡಿಕೆ, ಕಾಳು ಮೆಣಸು, ತೆಂಗಿನಕಾಯಿ ಸಮೃದ್ಧಿಯಾಗಿಸಿ ಬೆಳೆಸಿದರು ಮಾತ್ರವಲ್ಲ ಕೃಷಿಯ ಕುರಿತ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ. ದೈವಭಕ್ತ, ಮರ್ಯಾದಸ್ಥ, ಶ್ರದ್ಧಾಶೀಲರಾಗಿದ್ದ ಅವರು ತಮ್ಮ ಸಾಕು ನಾಯಿಗಳತ್ತವೂ ಮೃದು ಮನಸ್ಸು ಹೊಂದಿದ್ದರು. ಸಮಾಜಸೇವೆ ಮತ್ತು ನಾಯಕತ್ವವನ್ನು ಮೈಗೂಡಿಸಿ 2013–14ರಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷರಾಗಿ ಗೌರವಯುತ ಪಿ.ಎಚ್.ಎಫ್ ಪದವಿ, ಕುರಿಯ ಪಾಲಿಂಜೆ ಅಮ್ಮುಂಜ ಶ್ರೀ ಮಹಾ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಪ್ರಥಮ ಅಧ್ಯಕ್ಷರಾಗಿ, ಬಂಟಸಿರಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಶ್ರೀರಾಮಕೃಷ್ಣ ಕ್ರೆಡಿಟ್ ಸಹಕಾರಿ ಸೊಸೈಟಿ ಲಿಮಿಟೆಡ್ ಪುತ್ತೂರು ಇದರ ಸಲಹೆಗಾರರಾಗಿ, ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್ನ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ಮೌನ ಪ್ರಾರ್ಥನೆ..
ಈ ಸಂದರ್ಭದಲ್ಲಿ ಅಗಲಿದ ಜಯರಾಮ ರೈ ನುಳಿಯಾಲುರವರ ಭಾವಚಿತ್ರಕ್ಕೆ ಆಗಮಿಸಿದ ಮೃತ ಜಯರಾಮ ರೈ ನುಳಿಯಾಲುರವರ ಕುಟುಂಬಿಕರು, ಹಿತೈಷಿಗಳು ಪುಷ್ಪಾರ್ಚನೆ ಸಲ್ಲಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.