ಇಂದಿನಿಂದ ಜಿಎಸ್‌ಟಿ ದರ ಇಳಿಕೆ

0

ಅಗತ್ಯ ವಸ್ತುಗಳ ಟ್ಯಾಕ್ಸ್ ಇಳಿಕೆ | ಹಾನಿಕಾರಕ ವಸ್ತುಗಳ ಟ್ಯಾಕ್ಸ್ ಹೆಚ್ಚಳ


ಪುತ್ತೂರು; ಸೆ.22ರಿಂದ ಹೊಸ ಜಿಎಸ್‌ಟಿ ಸುಧಾರಣಾ ಕ್ರಮ ಜಾರಿಗೆ ಬರಲಿದೆ. ನಾಲ್ಕು ಇದ್ದ ಜಿಎಸ್‌ಟಿ ಸ್ಲ್ಯಾಬ್ ದರಗಳನ್ನು ಎರಡು ಸ್ಲ್ಯಾಬ್‌ಗೆ ಇಳಿಸಲಾಗಿದೆ. ಶೇ. 5 ಮತ್ತು ಶೇ.18 ಟ್ಯಾಕ್ಸ್ ಸ್ಲ್ಯಾಬ್ ಇರಲಿದೆ. ಇವುಗಳ ಜೊತೆಗೆ ಐಷಾರಾಮಿ ಮತ್ತು ಹಾನಿಕಾರ ವಸ್ತುಗಳಿಗೆ ವಿಶೇಷವಾದ ಶೇ.40 ಟ್ಯಾಕ್ಸ್ ಕೂಡ ಇರುತ್ತದೆ.


ಅಗತ್ಯವಸ್ತುಗಳ ಟ್ಯಾಕ್ಸ್ ಇಳಿಕೆ;
ಹೊಸ ಜಿಎಸ್‌ಟಿ ಸುಧಾರಣೆಯಿಂದ ಬಹಳಷ್ಟು ವಸ್ತುಗಳ ಬೆಲೆ ಕಡಿಮೆ ಆಗಲಿದೆ. ಶೇ.12ರ ಸ್ಲ್ಯಾಬ್‌ನಲ್ಲಿದ್ದ ವಸ್ತುಗಳ ಮೇಲಿನ ಟ್ಯಾಕ್ಸ್ ಶೇ.5ಕ್ಕೆ ಇಳಿಯಲಿವೆ. ಶೇ.28ರಷ್ಟಿದ್ದ ಟ್ಯಾಕ್ಸ್ ದರಗಳು ಶೇ.18ಕ್ಕೆ ಇಳಿಯುತ್ತಿವೆ. ಇದರಿಂದ ಹೆಚ್ಚಿನ ವಸ್ತುಗಳ ಬೆಲೆ ಇಳಿಕೆ ಆಗಲಿದೆ. ಜನಜೀವನಕ್ಕೆ ಅಗತ್ಯವಾಗಿರುವ ಸರಕುಗಳಲ್ಲಿ ಹೆಚ್ಚಿನವು ಶೇ.5ರ ಜಿಎಸ್‌ಟಿ ಸ್ಲ್ಯಾಬ್‌ಗೆ ಸೇರುತ್ತವೆ. ಅತ್ಯಗತ್ಯ ಅಲ್ಲದ ವಸ್ತುಗಳು ಶೇ.18ರ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತವೆ.


ಬಹುತೇಕ ಗೃಹ ಬಳಕೆ ವಸ್ತುಗಳ ಬೆಲೆ ಕಡಿಮೆ ಆಗಲಿದೆ. ಟೂತ್‌ಪೇಸ್ಟ್, ಸೋಪ್, ಶಾಂಪೂ, ಬಿಸ್ಕತ್, ಜ್ಯೂಸ್, ತುಪ್ಪ, ಸೈಕಲ್, ಸ್ಟೇಷನರಿ, ಬಟ್ಟೆ, ಪಾದರಕ್ಷೆ ಇತ್ಯಾದಿ ವಸ್ತುಗಳ ಮೇಲಿನ ಟ್ಯಾಕ್ಸ್ ಶೇ. 12ರಿಂದ ಶೇ. 5ಕ್ಕೆ ಇಳಿದಿದೆ. ಇದರಿಂದಾಗಿ ಇವುಗಳ ಮಾರಾಟ ಬೆಲೆ ಶೇ.7ರಿಂದ 8ರಷ್ಟು ಕಡಿಮೆ ಆಗಲಿದೆ. ಎಸಿ, ಫ್ರಿಡ್ಜ್, ಡಿಶ್ ವಾಶರ್, ದೊಡ್ಡ ಪರದೆಯ ಟಿವಿ, ಸಿಮೆಂಟ್ ಇತ್ಯಾದಿಗಳ ಮೇಲಿನ ಜಿಎಸ್‌ಟಿ ಶೇ. 28ರಿಂದ ಶೇ.18ಕ್ಕೆ ಇಳಿದಿದೆ. ಇವುಗಳ ಬೆಲೆ ಶೇ.7-8ರಷ್ಟು ಕಡಿಮೆ ಆಗಲಿದೆ. ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದೆ. ಇವುಗಳ ಬೆಲೆಯೂ ಸಾಕಷ್ಟು ಕಡಿಮೆ ಆಗಲಿದೆ. ಇನ್ಸೂರೆನ್ಸ್ ಪ್ರೀಮಿಯಮ್ ದರವೂ ಕಡಿಮೆ ಆಗಲಿದೆ. ಇನ್ಸೂರೆನ್ಸ್ ಪ್ರೀಮಿಯಮ್‌ಗೆ ಶೇ.18 ಜಿಎಸ್‌ಟಿ ಇತ್ತು. ಈಗ ಅದನ್ನು ಶೇ. 5ಕ್ಕೆ ಇಳಿಸಲಾಗಿದೆ. ಕೆಲವಕ್ಕೆ ಟ್ಯಾಕ್ಸ್ ವಿನಾಯಿತಿಯನ್ನೂ ನೀಡಲಾಗಿದೆ.

ಹಾನಿಕಾರಕ ವಸ್ತುಗಳ ಟ್ಯಾಕ್ಸ್ ಹೆಚ್ಚಳ
ಐಷಾರಾಮಿ ಮತ್ತು ಹಾನಿಕಾರಕ ವಸ್ತುಗಳು ಮತ್ತು ಸೇವೆಗಳು ಶೇ.40 ಟ್ಯಾಕ್ಸ್ ಆಕರ್ಷಿಸುತ್ತವೆ. ಸಿಗರೇಟ್ ಇತ್ಯಾದಿ ತಂಬಾಕು ಉತ್ಪನ್ನಗಳು, ಆಲ್ಕೋಹಾಲ್, ಪಾನ್ ಮಸಾಲ ಇತ್ಯಾದಿ ಆರೋಗ್ಯ ಹಾನಿಕಾರಕ ವಸ್ತುಗಳು ಶೇ. 40ರ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತವೆ. ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್ ಇತ್ಯಾದಿ ಚಟದ ಸೇವೆಗಳೂ ಕೂಡ ಶೇ.40ರ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತವೆ. ಲಕ್ಷುರಿ ವಸ್ತುಗಳಾದ ಡೈಮಂಡ್, ಹವಳ ಇತ್ಯಾದಿಗಳೂ ಕೂಡ ಹೆಚ್ಚಿನ ಟ್ಯಾಕ್ಸ್‌ಗೆ ಒಳಪಡಲಿದೆ.


ಉಳಿತಾಯ ಹಬ್ಬ
ನೂತನ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಜಾರಿಯು ಭಾರತವು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವದೇಶಿ ಸಾಮಾಗ್ರಿಗಳ ಉತ್ಪಾದನೆ ಹಾಗೂ ಬಳಕೆಯನ್ನು ಉತ್ತೇಜಿಸುವಂತೆ ಅವರು ದೇಶದ ಜನತೆಗೆ ಕರೆ ನೀಡಿದರು. ಸೆ.21ರಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ನೂತನ ಸುಂಕ ಸುಧಾರಣೆಗಳನ್ನು ಉಳಿತಾಯ (ಬಚತ್)ಗಳ ಹಬ್ಬವೆಂದು ಬಣ್ಣಿಸಿದರು.

LEAVE A REPLY

Please enter your comment!
Please enter your name here