ನಾಗರಹಾವು ಕಡಿತದಿಂದ ತೀವ್ರ ಅಸ್ವಸ್ಥ : 90 ಇಂಜೆಕ್ಷನ್ ಪಡೆದು ಬದುಕಿದ ವ್ಯಕ್ತಿ

0

ಪುತ್ತೂರು: ವಿಷದ ಹಾವೊಂದು ಕಚ್ಚಿ ತೀವ್ರ ಅಸ್ವಸ್ಥಗೊಂಡು ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸತತ 90 ಇಂಜೆಕ್ಷನ್ ನೀಡಿ ಬದುಕಿಸಿದ ಅಪರೂಪದ ಘಟನೆ ಸೆ.21ರಂದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ನಡೆದಿದೆ.


ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ನಿವಾಸಿ ಶೀನಪ್ಪ ಗೌಡ(63ವ.) ವಿಷದ ಹಾವು ಕಡಿದು ಸಾವಿನಂಚಿನಿಂದ ಬದುಕಿದವರು. ಶೀನಪ್ಪ ಗೌಡ ಅವರು ಬೆಳಿಗ್ಗೆ ತೋಟಕ್ಕೆ ಹೋಗಿ ಬಾಳೆಗೊನೆ ಕಡಿದು ಬರುತ್ತಿದ್ದ ಸಂದರ್ಭ ನಾಗರ ಹಾವೊಂದು ಅವರ ಎಡಕಾಲಿನ ಹಿಂಭಾಗಕ್ಕೆ ಕಚ್ಚಿದೆ. ಇದರಿಂದ ಅಸ್ವಸ್ಥಗೊಂಡ ಶೀನಪ್ಪ ಗೌಡರನ್ನು ಮನೆಯವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಾಹ್ನ 3.30ಕ್ಕೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆಗಾಗಲೇ ವಿಷದ ಪ್ರಮಾಣದಿಂದಾಗಿ ಶೀನಪ್ಪ ಗೌಡರು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿ ಅವರಿಗೆ ಸತತ 90 ಇಂಜೆಕ್ಷನ್ ನೀಡಿದಾಗ ಶೀನಪ್ಪ ಗೌಡರಿಗೆ ಪ್ರಜ್ಞೆ ಬಂದು ಚೇತರಿಸಿಕೊಂಡು ಸಾವಿನಂಚಿನಿಂದ ಹೊರ ಬಂದಿದ್ದಾರೆ. ಸದ್ಯ ಶೀನಪ್ಪ ಗೌಡರು ತುರ್ತು ಚಿಕಿತ್ಸೆಯಲ್ಲಿದ್ದಾರೆ.


ವಿಷದ ಹಾವು ಕಡಿತದ ವ್ಯಕ್ತಿಯನ್ನು ನಮ್ಮಲ್ಲಿಗೆ ಕರೆತರುವಾಗ ತೀರಾ ತಡವಾಗಿದೆ. ಆಗಲೇ ವಿಷದ ಪ್ರಮಾಣವೂ ದೇಹದ ಭಾಗಕ್ಕೆ ಹರಡಿತ್ತು. ಹಾಗಾಗಿ ಅವರು ಸಾವಿನ ಅಂಚಿನಲ್ಲಿದ್ದರು. ಎಎಸ್‌ವಿ 90 ಇಂಜೆಕ್ಷನ್ ನೀಡಲಾಯಿತು. ಇದರಿಂದ ಅವರಿಗೆ ಪ್ರಜ್ಞೆ ಬಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here