ಕೊಯಿಲ: ರಾಮಕುಂಜ ಪ.ಪೂ.ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿರುವ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2025ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಪುತ್ತೂರು ಎಸ್.ಆರ್.ಕೆ ಲ್ಯಾಡರ್ಸ್ ಮಾಲಕರಾದ ಕೇಶವ ಅಮೈ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಕೇಶವ ಅಮೈ ಅವರು, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ತನ್ನ ಚಟುವಟಿಕೆಗಳ ಮೂಲಕ ಮಾಡುತ್ತದೆ. ಒಂದು ವಾರದ ಈ ಶಿಬಿರದಲ್ಲಿ ವಿದ್ಯಾರ್ಥಿಗಳೆಲ್ಲರೂ ವಿವಿಧ ರೀತಿಯ ಜೀವನ ಕೌಶಲಗಳನ್ನ ಕಲಿತುಕೊಂಡು ಭಾರತದ ಸತ್ಪ್ರಜೆಗಳಾಗಿ ಮೂಡಿ ಬರುವಂತಾಗಬೇಕು. ಇಲ್ಲಿ ಸಿಗುವ ವಿವಿಧ ಅವಕಾಶಗಳನ್ನ ಬಳಸಿಕೊಂಡು ನೀವೆಲ್ಲರೂ ಯಶಸ್ಸನ್ನ ಕಾಣುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ.ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಶಿಕ್ಷಣ ಇಲಾಖೆಯ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡ ಉನ್ನತ ಸಾಧನೆಯನ್ನ ಮಾಡಬೇಕು. ವ್ಯಕ್ತಿಗಳೊಂದಿಗೆ ಬೆರೆಯುವ ಮತ್ತು ಆ ಮೂಲಕ ಸಮಾಜವನ್ನು ಮುನ್ನಡೆಸುವ ಗುಣ ಅವರಲ್ಲಿ ಬರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಶ್ರಮದಾನ, ವಿವಿಧ ತರಬೇತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗ, ಕ್ರೀಡೆ ಇವೆಲ್ಲವೂ ಇರುತ್ತದೆ. ಶಿಬಿರಾರ್ಥಿಯು ಇವೆಲ್ಲದರಲ್ಲಿಯೂ ಕೂಡ ಭಾಗವಹಿಸಬೇಕಾಗುತ್ತದೆ. ಇದರಿಂದ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಹಮ್ಮಿಕೊಂಡಂತಹ ಈ ಈ ಶಿಬಿರ ಇಲಾಖೆಯ, ಶಾಲಾ ಅಭಿವೃದ್ಧಿ ಸಮಿತಿಯ, ಅಧ್ಯಾಪಕ ವರ್ಗದವರ ಮತ್ತು ಸಮಾಜದವರ ಸಹಕಾರದಿಂದ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಕೊಯಿಲ ಗ್ರಾಮ ಪಂಚಾಯತಿನ ಅಧ್ಯಕ್ಷೆ ಪುಷ್ಪ ಸುಭಾಷ್ ಶೆಟ್ಟಿ ಆರುವಾರ, ಪ್ರಭಾರ ಮುಖ್ಯ ಶಿಕ್ಷಕಿ ಅನುಪಮಾ ಕೆ.ಎಂ, ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ, ಪ್ರಗತಿಪರ ಕೃಷಿಕ ವೀರಪ್ಪ ದಾಸಯ್ಯ, ಆತೂರು ಸದಾಶಿವ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಶಾಲೆಯ ಶತಮಾನೋತ್ಸವ ಸಮಿತಿಯ ಸದಸ್ಯ ಬಶೀರ್ ಆತೂರು, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಎಂ. ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗೌಡ ಪುತ್ಯೆ ಮಾತನಾಡಿ, ಎನ್‌ಎಸ್‌ಎಸ್ ಸ್ವಯಂ ಸೇವಕರಾದ ನೀವೆಲ್ಲರೂ ಈ ಸೇವಾ ಶಿಬಿರದಲ್ಲಿ ಸಮಾಜ ಕಾರ್ಯದ ಸಂಕಲ್ಪ ಮಾಡಿಕೊಂಡಿದ್ದೀರಿ. ಶ್ರಮದಾನವನ್ನು ಮಾಡುವುದರ ಮೂಲಕ ಈ ಶಾಲೆಯ ಅಭಿವೃದ್ಧಿಗೂ ನಿಮ್ಮ ಸಹಕಾರ ಅತ್ಯಗತ್ಯ. ಶಾಲೆಯ ಅಭಿವೃದ್ಧಿಯೊಂದಿಗೆ, ವಿವಿಧ ತರಬೇತಿಗಳ ಮೂಲಕ ನಿಮ್ಮ ವ್ಯಕ್ತಿತ್ವದ ಅಭಿವೃದ್ಧಿಯು ಆಗುವಂತಾಗಲಿ ಎಂದು ಹೇಳಿದರು.


ಕಾಲೇಜಿನ ಪ್ರಾಚಾರ್ಯರು ಶಿಬಿರದ ಧ್ವಜ ಮತ್ತು ಸಿಟಿಯನ್ನು ಘಟಕದ ನಾಯಕ-ನಾಯಕಿಗೆ ಹಸ್ತಾಂತರಿಸಿದರು. ಸಹ ಶಿಬಿರ ಅಧಿಕಾರಿ ಅಕ್ಷತಾ ಸ್ವಾಗತಿಸಿದರು. ಶಿಬಿರ ಅಧಿಕಾರಿ ಕೀರ್ತನ್ ವಂದಿಸಿದರು. ಸಹಶಿಬಿರಾಧಿಕಾರಿ ಶಿವಪ್ರಸಾದ್ ಹೊಳ್ಳ ಮತ್ತು ಉಪನ್ಯಾಸಕ ಚೇತನ್ ಮೊಗ್ರಾಲ್ ಸಹಕರಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶಹನಿ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು.

LEAVE A REPLY

Please enter your comment!
Please enter your name here