ಪುತ್ತೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಬೆಂಗಳೂರು ಪುತ್ತೂರು ತಾಲೂಕು ಘಟಕ ಇದರ ಆಶ್ರಯದಲ್ಲಿ ಹಿಂದಿ ದಿವಸ್ ಆಚರಣೆ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆಯಿತು.

ಮಾಯ್ ದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನಸ್ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾಷೆಯು ಸಂವಾದದ ಮಾಧ್ಯಮ. ಮಾತೃಭಾಷೆಯ ಜೊತೆಗೆ ದೇಶದ ಭಾಷೆಯನ್ನು ಅರಿತು ಅದನ್ನು ಶ್ರೀಮಂತ ಭಾಷೆಯನ್ನಾಗಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ, ನಿವೃತ್ತ ಪ್ರಾಧ್ಯಾಪಕರು ಮತ್ತು ಉಡುಪಿ ಜಿಲ್ಲಾ ಹಿಂದಿ ಅಧಿಕಾರಿ ಟಿ.ಎ ಚಾಕೋರವರು ಮಾತನಾಡಿ ಹಿಂದಿಯ ಇತಿಹಾಸ ರಾಷ್ಟ್ರೀಯ ಮಹತ್ವ ಮತ್ತು ಪ್ರಸ್ತುತ ಸಮಾಜದಲ್ಲಿ ಹಿಂದಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ದ.ಕ. ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ ಕುಮಾರಿ ಎನ್.ವಿ., ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಂದರ್ಭೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಉದಯ್ ಎಸ್. ಮಾತನಾಡಿ ಮುಂದಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಅಂಕ ಪಡೆಯುವಲ್ಲಿ ನಾವೆಲ್ಲರೂ ಶ್ರಮಿಸುತ್ತೇವೆ ಎಂದರು. ಪುತ್ತೂರು ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್. ಹಾಗೂ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಾಲಾ ಶಿಕ್ಷಣ ಇಲಾಖೆಯ ಮಂಗಳೂರು ಉಪನಿರ್ದೇಶಕ ಶಶಿಧರ ಜಿ.ಎಸ್.ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಧರ ಜಿ.ಎಸ್. ಸಂಪನ್ಮೂಲ ವ್ಯಕ್ತಿ, ನಿವೃತ್ತ ಪ್ರಾಧ್ಯಾಪಕರು ಮತ್ತು ಉಡುಪಿ ಜಿಲ್ಲಾ ಹಿಂದಿ ಅಧಿಕಾರಿಗಳಾದ ಟಿ.ಎ ಚಾಕೋ ಹಾಗೂ ಸೇವಾ ನಿವೃತ್ತಿಗೊಂಡ ರೊನಾಲ್ಡ್ ಮೊನೀಸ್ರವರನ್ನು ಸನ್ಮಾನಿಸಲಾಯಿತು.
2024-25ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಶೇ.100 ಫಲಿತಾಂಶ ಪಡೆದಿರುವ ಶಾಲೆಗಳನ್ನು ಗುರುತಿಸಿ ಆ ಶಾಲಾ ಹಿಂದಿ ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸಂಧ್ಯಾ ರಾವ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳ ವಿವರ ವಾಚಿಸಿದರು. ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕಿ ಪಲ್ಲವಿ ಭಟ್, ಕೊಂಬೆಟ್ಟು ಶಾಲೆಯ ಶಿಕ್ಷಕಿ ರೆನಿಟ ಸುಷ್ಮಾ ಡಿಸೋಜಾ ಸನ್ಮಾನಿತರ ಪರಿಚಯ ಮಾಡಿದರು. ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಲೋಕೇಶ್ ಎಸ್. ಸ್ವಾಗತಿಸಿ ವಳಾಲು ಸರಕಾರಿ ಪ್ರೌಢಶಾಲೆಯ ಶೈಲಾಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಸಂಘದ ಕೋಶಾಧಿಕಾರಿ ವಿಜಯ ಕುಮಾರಿ ವಂದಿಸಿದರು. ತಾಲೂಕು ಮಟ್ಟದ ಪ್ರೌಢಶಾಲೆಯ ಶಿಕ್ಷಕರು ಹಾಗೂ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.