ವ್ಯವಹಾರ ರೂ.77 ಲಕ್ಷದ 78 ಸಾವಿರ, ನಿವ್ವಳ ಲಾಭ ರೂ.62 ಸಾವಿರ, ಡಿವಿಡೆಂಡ್ ಶೇ.10, ಬೋನಸ್ ಶೇ.65
ಪುತ್ತೂರು: ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಪ್ರಸಾದ್ ರೈರವರ ಅಧ್ಯಕ್ಷತೆಯಲ್ಲಿ ಸೆ.22 ರಂದು ತೆಗ್ಗು ಶಾಲಾ ಸಭಾಂಗಣದಲ್ಲಿ ಜರಗಿತು. ಸಂಘದ ಅಧ್ಯಕ್ಷ ಪ್ರಸಾದ್ ರೈಯವರು ಮಾತನಾಡಿ, ಸಂಘವು ವರದಿ ವರ್ಷದಲ್ಲಿ 77 ಲಕ್ಷದ 95 ಸಾವಿರದ 827 ರೂಪಾಯಿ ವ್ಯವಹಾರ ನಡೆಸಿ ರೂ.2,72,983 ವ್ಯಾಪಾರ ಲಾಭವನ್ನು ಪಡೆದುಕೊಂಡಿದ್ದು ರೂ.62 ಸಾವಿರದ 127 ರೂಪಾಯಿಗಳ ನಿವ್ವಳ ಲಾಭವನ್ನು ಪಡೆದುಕೊಂಡಿದೆ. ಇದರಿಂದ ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೇ ಶೇ.65 ಬೋನಸ್ ನೀಡುವುದಾಗಿ ತಿಳಿಸಿದರು. ಸಂಘದ ಕಾರ್ಯದರ್ಶಿ ಅರ್ಪಣಾ ಎ.ರವರು ಸಂಘದ 2024-25 ನೇ ಸಾಲಿನ ವರದಿ ಹಾಗೇ ಗತ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರು.
ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಸಂಘದ ಸದಸ್ಯರ ಮಕ್ಕಳು ಕಲಿಕೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಹೆತ್ತವರನ್ನು ಗುರುತಿಸಿ ಗೌರವಿಸಲಾಯಿತು. ಹರಿಕೃಷ್ಣ ಮತ್ತು ವಿಜಯರವರ ಪುತ್ರಿ ತೀಕ್ಷಾ, ಗಂಗಾಧರ ಗೌಡ ಮತ್ತು ವಸಂತಿರವರ ಪುತ್ರಿ ದೇಪಿಕಾ, ರುಕ್ಮಯ್ಯ ಗೌಡ ಮತ್ತು ಗೀತಾರವರ ಪುತ್ರ ನಿಶ್ಚಿತ್ ಮತ್ತು ದೀಪ್ತಿರವರುಗಳು ಅತೀ ಹೆಚ್ಚು ಅಂಕ ಗಳಿಸಿದ್ದು ಅವರುಗಳ ಪರವಾಗಿ ಅವರ ಹೆತ್ತವರನ್ನು ಗೌರವಿಸಲಾಯಿತು.

ಅತೀ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ ವಿತರಣೆ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಥಮ ಬಹುಮಾನವನ್ನು ಡೊಂಬಯ್ಯ ಗೌಡರವರ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ನಯನ ಶೆಟ್ಟಿ ಹಾಗೇ ತೃತೀಯ ಬಹುಮಾನವನ್ನು ಪ್ರಮೋದ್ ಕುಮಾರ್ ಪಡೆದುಕೊಂಡರು. ಉಳಿದಂತೆ ಹಾಲು ಹಾಕುತ್ತಿರುವ ಸದಸ್ಯರುಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಮುಂದಿನ ವಾರ್ಷಿಕ ಸಾಮಾನ್ಯ ಸಭೆಗೆ ಪ್ರತಿಯೊಬ್ಬ ಸದಸ್ಯರು ಕೂಡ ಹಾಜರಾಗಬೇಕು ಹಾಜರಾದ ಸದಸ್ಯರಿಗೆ ಮಾತ್ರ ಸಭೆಯಲ್ಲೇ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷ ಪ್ರಸಾದ್ ರೈಯವರು ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಕೆಎಂಎಫ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜರವರು ಮಾತನಾಡಿ, ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿರುವುದು ಖುಷಿ ತಂದಿದೆ. ಸದಸ್ಯರುಗಳು ಇನ್ನೂ ಹೆಚ್ಚಿನ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು, ಒಕ್ಕೂಟವು ಹೈನುಗಾರಿಕಾ ರೈತರಿಗೆ ಎಲ್ಲಾ ವಿಧದಲ್ಲೂ ಸಹಕಾರ ನೀಡುತ್ತಿದ್ದು ಒಕ್ಕೂಟದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಂತೆ ತಿಳಿಸಿದರು. ಸುಮಾರು ೫೫ ಸಾವಿರ ಮಂದಿ ರೈತರು ಸಂಘಗಳ ಮೂಲಕ ಒಕ್ಕೂಟಕ್ಕೆ ಹಾಲು ಹಾಕುತ್ತಿದ್ದು ಅವರಿಗೆ ಕಲ್ಯಾಣ ಅಭಿವೃದ್ಧಿಗಾಗಿ ಒಕ್ಕೂಟವು ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿಯವರು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭವನ್ನು ಹೇಗೆ ಗಳಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾ ಪ್ರತಿಯೊಬ್ಬರು ತಮ್ಮ ಹಸುವಿನ ದಪ್ಪ ಹಾಲನ್ನೇ ಸಂಘಕ್ಕೆ ಹಾಕಬೇಕು ಅದಕ್ಕೆ ನೀರು ಬೆರೆಸಿ ಹೆಚ್ಚು ಹಾಲು ಮಾಡಿ ಹಾಕಿದರೆ ಹೆಚ್ಚು ಹಣ ಸಿಗುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು ಗ್ರಹಿಕೆ, ದಪ್ಪ ಹಾಲಿಗೆ ಮಾತ್ರ ಸಂಘ ಹೆಚ್ಚು ಹಣವನ್ನು ಕೊಡುತ್ತದೆ ಎಂದರು. ಒಕ್ಕೂಟದಿಂದ ರೈತರಿಗೆ ಹಸಿರು ಹುಲ್ಲು, ರಬ್ಬರ್ ಮ್ಯಾಟ್, ಹುಲ್ಲು ಕತ್ತರಿಸುವ ಯಂತ್ರ, ಹಟ್ಟಿ ತೊಳೆಯುವ ಯಂತ್ರ ಇತ್ಯಾದಿಗಳಿಗೆ ಒಕ್ಕೂಟದಿಂದ ಸಹಾಯಧನ ದೊರೆಯುತ್ತಿದ್ದು ಇವುಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು ಮಾತನಾಡಿ, ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘವು ಒಳ್ಳೆಯ ರೀತಿಯಲ್ಲಿ ವ್ವವಹಾರ ನಡೆಸುತ್ತಿರುವುದು ಶ್ಲಾಘನೀಯ, ಹೈನುಗಾರಿಕೆಗೆ ಗ್ರಾಮ ಪಂಚಾಯತ್ ಕೂಡ ಸಹಕಾರ ನೀಡುತ್ತಿದ್ದು ಹಟ್ಟಿ ನಿರ್ಮಾಣ ಸೇರಿದಂತೆ ರೈತರಿಗೆ ಅನುದಾನಗಳನ್ನು ನೀಡುತ್ತಿದೆ. ಪಂಚಾಯತ್ ಅನುದಾನಗಳನ್ನು ಕೂಡ ಬಳಸಿಕೊಂಡು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳುವಂತೆ ತಿಳಿಸಿ ಶುಭ ಹಾರೈಸಿದರು.
ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸಾದ್ ರೈಯವರು ಮಾತನಾಡಿ, ಸಂಘವು ಒಳ್ಳೆಯ ರೀತಿಯಲ್ಲಿ ವ್ಯವಹಾರ ಮಾಡಿಕೊಂಡು ಹೋಗುತ್ತಿರುವುದಕ್ಕೆ ಸಂಘದ ಸದಸ್ಯರುಗಳು,ನಿರ್ದೇಶಕರುಗಳೇ ಕಾರಣರಾಗಿದ್ದಾರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದಿನ ದಿನಗಳಲ್ಲೂ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡುತ್ತಾ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಕೇಳಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಹಾಲು ಪರೀಕ್ಷಕಿ ಸುವಾಸಿನಿ ಪ್ರಾರ್ಥಿಸಿದರು. ನಿರ್ದೇಶಕಿ ಶಾಲಿನಿ ಎಸ್.ರೈ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೊಂಬಯ್ಯ ಗೌಡ, ನಿರ್ದೇಶಕರುಗಳಾದ ಗಂಗಾಧರ ಗೌಡ, ತಾರಾನಾಥ ಎ, ಲೀಲಾವತಿ ರೈ, ಹರಿಕೃಷ್ಣ ಜೆ, ವಿಶ್ವನಾಥ ಶೆಟ್ಟಿ ಸಾಗು, ಪ್ರಮೋದ್ ಕುಮಾರ್, ಚಂದ್ರಶೇಖರ್ ಸೊರಕೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಅರ್ಪಣಾ, ಹಾಲು ಪರೀಕ್ಷಕಿ ಸುವಾಸಿನಿ ಸಹಕರಿಸಿದ್ದರು.
ದ.ಕ ಜಿಲ್ಲೆಗೆ 359 ಈರೋಡ್ ದನ
ತಮಿಳುನಾಡಿನ ಈರೋಡ್ ದನಗಳನ್ನು ಸಾಕುವುದರಿಂದ ಹೆಚ್ಚು ಹಾಲನ್ನು ಪಡೆಯಬಹುದಾಗಿದ್ದು ಈ ನಿಟ್ಟಿನಲ್ಲಿ ಈರೋಡ್ ದನಗಳನ್ನು ಸಾಕಾಣಿಕೆ ಮಾಡಲು ಒಕ್ಕೂಟ ಕೂಡ ವಿಶೇಷ ಪ್ರೋತ್ಸಾಹವನ್ನು ನೀಡುತ್ತಿದ್ದು ಈಗಗಲೇ 359 ಈರೋಡ್ ದನಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ತರಿಸುವ ಕೆಲಸ ಕೂಡ ಆಗಿದೆ ಎಂದು ಕೆಎಂಎಪ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ತಿಳಿಸಿದರು. ಈರೋಡ್ ದನ ಸಾಕಲು ಮನಸ್ಸು ಇದ್ದವರಿಗೆ ಒಕ್ಕೂಟದಿಂದ ದನ ತರಿಸಲು ಸುಮಾರು 15 ಸಾವಿರ ರೂಪಾಯಿಗಳ ಅನುದಾನ ಕೂಡ ಕೊಡಲಾಗುತ್ತಿದೆ ಎಂದರು.
ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣ ಜಾಸ್ತಿಯಾಗಿದೆ
ಜಿಲ್ಲೆಯಲ್ಲಿ 750 ಹಾಲು ಉತ್ಪಾದಕರ ಸಂಘಗಳಿದ್ದು ಇದರಲ್ಲಿ 225 ಮಹಿಳಾ ಸಂಘಗಳಿವೆ ಎಂದ ಎಸ್.ಬಿ.ಜಯರಾಮ ರೈಯವರು ಕಳೆದ ವರ್ಷ ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣದಲ್ಲಿ ಬಹಳಷ್ಟು ಕಡಿಮೆಯಾಗಿತ್ತು ಬೇರೆ ಬೇರೆ ಕಡೆಗಳಿಂದ ಹಾಲನ್ನು ತರಿಸಿಕೊಳ್ಳಬೇಕಾದ ಪ್ರಸಂಗ ಬಂದಿತ್ತು ಆದರೆ ಈ ವರ್ಷ 4 ಲಕ್ಷದ 1 ಸಾವಿರ ಲೀಟರ್ ಹಾಲು ಜಾಸ್ತಿ ಆಗಿದೆ ಎಂದರು. ಹಾಲಿನ ಪ್ರಮಾಣ ಜಾಸ್ತಿಯಾದಂತೆ ಒಕ್ಕೂಟದಿಂದ ರೈತರಿಗೆ ಸಿಗುವ ಪ್ರಯೋಜನಗಳು ಕೂಡ ಜಾಸ್ತಿಯಾಗುತ್ತದೆ ಎಂದು ಅವರು ತಿಳಿಸಿದರು.