ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ಬೃಹತ್ ಮಿಲಾದ್ ಕಾನ್ಫರೆನ್ಸ್, ಸೌಹಾರ್ದ ಸಂಗಮ, ಕಥಾ ಪ್ರಸಂಗ

0

ಆದಂ ಹಾಜಿ ಕಮ್ಮಾಡಿ, ಝೈನುಲ್ ಆಬಿದ್ ಲಕ್ಷ್ಮೇಶ್ವರಗೆ ಸನ್ಮಾನ

ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ‘ಜಲ್ಸೇ ರಬೀಹ್’ ಗ್ರ್ಯಾಂಡ್ ಮಿಲಾದ್ ಕಾನ್ಫರೆನ್ಸ್ ಸೆ.21 ಮತ್ತು 22ರಂದು ರೆಂಜಲಾಡಿ ಆರ್.ಐ.ಸಿ ಕ್ಯಾಂಪಸ್‌ನಲ್ಲಿ ನಡೆಯಿತು.


ಸೆ.21ರಂದು ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಂ ಹಾಜಿ ಕಮ್ಮಾಡಿ ವಹಿಸಿದ್ದರು. ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ನಾಸಿರ್ ಫೈಝಿ ದುವಾ ನೆರವೇರಿಸಿ ಉದ್ಘಾಟಿಸಿದರು. ಆರ್‌ಐಸಿ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಆರ್‌ಐಸಿ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಭವಿಷ್ಯದಲ್ಲಿ ನಾಡಿನ ಸತ್ಪ್ರಜೆಗಳನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದ್ದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ಅವರನ್ನು ಮಾದರಿ ಮಕ್ಕಳಾಗಿ ರೂಪಿಸುವುದು ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.


ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮುಹಮ್ಮದ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಇಬ್ರಾಹಿಂ ಮಾಸ್ಟರ್, ಹುಸೈನ್ ದಾರಿಮಿಯವರ ಶಿಷ್ಯ ನೌಫಲ್ ಕೌಸರಿ ಮಾತನಾಡಿ ಶುಭ ಹಾರೈಸಿದರು.

ಸೌಹಾರ್ದ ಸಂದೇಶ ಭಾಷಣ ಮಾಡಿದ ಪತ್ರಕರ್ತ ಸಿಶೇ ಕಜೆಮಾರ್ ಮಾತನಾಡಿ ಸೌಹಾರ್ದತೆ ಎನ್ನುವುದು ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು, ಸೌಹಾರ್ದತೆ ಈ ನೆಲದ ಉಸಿರಾಗಿದ್ದು ಎಲ್ಲರೂ ಪರಸ್ಪರ ಅರಿತು, ಪ್ರೀತಿ ವಿಶ್ವಾಸದಿಂದ ಬಾಳಬೇಕು, ಸೌಹಾರ್ದತೆ ಇದ್ದಲ್ಲಿ ಶಾಂತಿ, ನೆಮ್ಮದಿ ಇರುತ್ತದೆ ಎಂದು ಹೇಳಿದರು.


ಆರ್‌ಐಸಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಸೌಹಾರ್ದತೆಯ ಪಾಠವನ್ನೂ ಬೋಧಿಸುತ್ತಿರುವ ಕೆ.ಆರ್ ಹುಸೈನ್ ದಾರಿಮಿಯವರ ನಡೆ ಮಾದರಿಯಾಗಿದ್ದು ಇಲ್ಲಿ ಸೌಹಾರ್ದತೆಯ ಪಾಠ ಕಲಿತ ಮಕ್ಕಳು ನಾಳಿನ ದಿನ ಸೌಹಾರ್ದತೆಯನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಲಿದ್ದಾರೆ ಎಂದು ಅವರು ಶ್ಲಾಘಿಸಿದರು.


ವೇದಿಕೆಯಲ್ಲಿ ಉದ್ಯಮಿಗಳಾದ ಇಬ್ರಾಹಿಂ ಮುಂಡಿತ್ತಡ್ಕ, ಪುತ್ತುಬಾವ ಹಾಜಿ ಸವಣೂರು, ಬಶೀರ್ ಹಾಜಿ ಚೆಡವು, ರಝಾಕ್ ಕೆನರಾ, ಖಾದರ್ ಹಾಜಿ ಚೆಡವು, ರೆಂಜಲಾಡಿ ಮಸೀದಿ ಅಧ್ಯಕ್ಷ ಆರ್.ಎಂ ಅಲೀ ಹಾಜಿ ರೆಂಜಲಾಡಿ, ಪ್ರ.ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್, ಉದ್ಯಮಿಗಳಾದ ಇಬ್ರಾಹಿಂ ಅಜ್ಜಿಕಲ್ಲು, ಮಜೀದ್ ಮಿಸ್ಮಾ, ನೌಫಲ್ ಅಜ್ಜಿಕಲ್ಲು, ಪುರಂದರ ರೈ ರೆಂಜಲಾಡಿ, ರಾಧಾಕೃಷ್ಣ ರೈ ರೆಂಜಲಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೌಲೀದ್ ಮಜ್ಲಿಸ್, ದಫ್ ಪ್ರದರ್ಶನ, ಪ್ರವಾದಿ ಸಂದೇಶ, ಆರ್‌ಐಸಿ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ, ಬುರ್ದಾ ಮಜ್ಲಿಸ್ ಮತ್ತಿತರ ಕಾರ್ಯಕ್ರಮ ನಡೆಯಿತು.

ಆದಂ ಹಾಜಿಗೆ ಸನ್ಮಾನ:
ಉದ್ಯಮಿ ಆದಂ ಹಾಜಿ ಕಮ್ಮಾಡಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಲಾಯಿತು.

ಗೌರವಾರ್ಪಣೆ:
ಆರ್.ಐ.ಸಿ ಸಂಸ್ಥೆಯ ಶಿಕ್ಷಕ ಉಮ್ಮರ್ ಮುಸ್ಲಿಯಾರ್, ಶಾಹುಲ್ ಹಮೀದ್ ಮಾಡನ್ನೂರುರವರನ್ನು ಗೌರವಿಸಲಾಯಿತು.

ಕಥಾ ಪ್ರಸಂಗ, ಸನ್ಮಾನ ಕಾರ್ಯಕ್ರಮ:
ಸೆ.22ರಂದು ಖ್ಯಾತ ಕಥಾ ಪ್ರಸಂಗ ತಂಡವಾಗಿರುವ ಎಂಎಚ್‌ಆರ್ ಹಂಝ ಮುಸ್ಲಿಯಾರ್ ಮತ್ತು ಸಂಗಡಿಗರಿಂದ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು. ದುವಾಶೀರ್ವಚನ ನೀಡಿದ ಸಯ್ಯದ್ ಸಫ್ವಾನ್ ತಂಙಳ್ ಏಝ್‌ಮಲ ಮಾತನಾಡಿ ತಂದೆ-ತಾಯಿಯನ್ನು ಗೌರವಿಸಬೇಕು, ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯನ್ನು ನಿರ್ಲಕ್ಷ್ಯ ಮಾಡುವ ಮಕ್ಕಳು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ, ತಾಯಿಯ ಮನಸ್ಸನ್ನು ಯಾರೂ ನೋಯಿಸಬೇಡಿ, ಜೀವನಪೂರ್ತಿ ಮಕ್ಕಳು ತಾಯಿಯ ಸೇವೆ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ, ತಾಯಿಯನ್ನು ನೋಯಿಸಿದ ಮಕ್ಕಳು ಸ್ವರ್ಗ ಪ್ರವೇಶಿಸಲಾರರು ಎಂದು ಅವರು ಹೇಳಿದರು.


ಆರ್‌ಐಸಿ ಯೂತ್ ವಿಂಗ್ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ ಅಧ್ಯಕ್ಷತೆ ವಹಿಸಿದ್ದರು. ಆರ್.ಐ.ಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ಬಾಸ್ ಮದನಿ, ಮುಕ್ವೆ ಖತೀಬ್ ಇರ್ಷಾದ್ ಫೈಝಿ, ಯಾಕೂಬ್ ದಾರಿಮಿ ಶುಭ ಹಾರೈಸಿದರು.
ವೇದಿಕೆಯಲ್ಲಿ ರೆಂಜಲಾಡಿ ಖತೀಬ್ ನಾಸಿರ್ ಫೈಝಿ, ರೆಂಜಲಾಡಿ ಮಸೀದಿಯ ಪ್ರ.ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್, ಮುಹಮ್ಮದ್ ಅಮಾನಿ ರೆಂಜಲಾಡಿ ಉಪಸ್ಥಿತರಿದ್ದರು.

ಝೈನುಲ್ ಆಬಿದ್‌ಗೆ ಸನ್ಮಾನ:
ಸಮಾಜರತ್ನ ಪ್ರಶಸ್ತಿ ಪುರಸ್ಕೃತ ಬಿ.ಕೆ ಝೈನುಲ್ ಆಬಿದ್ ಲಕ್ಷ್ಮೇಶ್ವರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ಸಫ್ವಾನ್ ತಂಙಳ್, ಸ್ವಾಗತ ಸಮಿತಿ ಅಧ್ಯಕ್ಷರು, ಕುಂಬ್ರ ವರ್ತಕರ ಸಂಘದ ಅಧ್ಯಕ್ಷರೂ ಆದ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಗುತ್ತಿಗೆದಾರ ಲೋಕೇಶ್, ಉದ್ಯಮಿ ಅಝೀಝ್ ಸೊರಕೆ, ಪತ್ರಕರ್ತ ಯೂಸುಫ್ ರೆಂಜಲಾಡಿ, ಎಂಎಚ್‌ಆರ್ ಹಂಝ ಮುಸ್ಲಿಯಾರ್ ಮತ್ತು ಸಂಗಡಿಗರು, ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ ಹಾಗೂ ಕೊಶಾಧಿಕಾರಿ ಉಮ್ಮರ್ ಸುಲ್ತಾನ್ ಮೊದಲಾದವರನ್ನು ಗೌರವಿಸಲಾಯಿತು.


ಸ್ವಾಗತ ಸಮಿತಿಯ ಕೋಶಾಧಿಕಾರಿ ಉಮ್ಮರ್ ಸುಲ್ತಾನ್ ರೆಂಜಲಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here