ಸೈನಿಕರಿಗಾಗಿ ಒಂದು ಕ್ಷಣ ಪ್ರಾರ್ಥಿಸಿ – ಕ್ಯಾ. ನವೀನ್ ನಾಗಪ್ಪ
ನನ್ನ ಜೀವನದ ನಿಜವಾದ ನವರಾತ್ರಿ ಆಚರಣೆಯಿದು – ನಳಿನ್ ಕುಮಾರ್
ಬೆಟ್ಟಂಪಾಡಿ: ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ – ಪೂಜಾ ಸಮಿತಿ ವತಿಯಿಂದ 13 ನೇ ವರ್ಷದ ಸಾಮೂಹಿಕ ದುರ್ಗಾಪೂಜೆಯು ಶರನ್ನವರಾತ್ರಿಯ ಶುಭದಿನ ಸೆ. 23 ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದು, ಬಳಿಕ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರ ನೇತೃತ್ವದಲ್ಲಿ ದುರ್ಗಾಪೂಜೆ ನೆರವೇರಿತು.
ಧಾರ್ಮಿಕ ಸಭಾ ಕಾರ್ಯಕ್ರಮ
ನಾವೂ ದೇಶ ಸೇವೆ ಮಾಡುವವರಾಗಬೇಕು – ವಿನೋದ್ ರೈ
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದುರ್ಗಾಪೂಜಾ ಸಮಿತಿಯ ಅಧ್ಯಕ್ಷ, ಶ್ರೀ ಕ್ಷೇತ್ರದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ಸಭಾಧ್ಯಕ್ಷತೆ ವಹಿಸಿ ಹಿಂದು ಸಮಾಜಕ್ಕೆ ದುರ್ಗಾಪೂಜೆಯ ಮೂಲಕ ನೀಡಬಹುದಾದ ಸಂದೇಶವನ್ನು ಹೇಳಿದರು. ʻಸೈನಿಕರು ಪ್ರತ್ಯಕ್ಷವಾಗಿ ದೇಶ ಸೇವೆ ಮಾಡುತ್ತಿದ್ದಾರೆ. ನಾವು ಕೊನೇಪಕ್ಷ ಸೈನನಿಕರಿಗೆ ಗೌರವ ಸಲ್ಲಿಸುವ ಮೂಲಕವಾದರೂ ದೇಶಸೇವೆ ಮಾಡುವ ಪ್ರಯತ್ನ ಪಡೋಣʼ ಎಂದರು.

ಸೈನಿಕರಿಗಾಗಿ ಒಂದು ಕ್ಷಣ ಪ್ರಾರ್ಥಿಸಿ – ಕ್ಯಾ. ನವೀನ್ ನಾಗಪ್ಪ
ಕಾರ್ಗಿಲ್ ಯೋಧ ಕ್ಯಾ. ನವೀನ್ ನಾಗಪ್ಪ ರವರು ಮಾತನಾಡಿ ಕಾರ್ಗಿಲ್ ಕದನ ಮತ್ತು ಭಾರತದ ವಿಜಯದ ಕಥೆಯನ್ನು ಸಭೆಯ ಮುಂದಿಟ್ಟರು. ಯುದ್ದದಂತಹ ಸಂದರ್ಭದಲ್ಲಿ ಸೈನಿಕನು ಎದುರಿಸುವ ಅನೇಕ ಮಾನಸಿಕ ಸನ್ನಿವೇಶಗಳನ್ನು ವಿವರಿಸಿದ ಅವರು ʻನಿಮ್ಮೆಲ್ಲರಲ್ಲಿ ವಿನಂತಿ ಏನೆಂದರೆ ನೀವೆಲ್ಲರೂ ಪ್ರತಿದಿನ ದೇವರ ಮುಂದೆ ಕೈಮುಗಿದು ನಿಮಗಾಗಿ ಪ್ರಾರ್ಥಿಸುತ್ತಿದ್ದೀರಿ. ಇನ್ನು ಮುಂದೆ ನಿಮ್ಮ ಪ್ರಾರ್ಥನೆಯ ಜೊತೆಗೆ ಒಂದು ಕ್ಷಣ ನಮ್ಮ ದೇಶ ಕಾಯುವ ಸೈನಿಕರಿಗೂ ಶಕ್ತಿ ನೀಡಿʼ ಎಂಬುದಾಗಿ ಪ್ರಾರ್ಥಿಸಿʼ ಎಂದರು.
ಶಸ್ತ್ರ ಮತ್ತು ಶಾಸ್ತ್ರದ ನಿಜವಾದ ನವರಾತ್ರಿ ಆಚರಣೆ – ನಳಿನ್ ಕುಮಾರ್
ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ʻನನ್ನ ಜೀವನದ ನಿಜವಾದ ನವರಾತ್ರಿ ಆಚರಣೆ ಇಂದು ಆಗಿದೆ. ಕಾರ್ಗಿಲ್ ಯೋಧ ಸೇರಿದಂತೆ ಈರ್ವರು ಯೋಧರಿಗೆ ಸನ್ಮಾನ ಮಾಡುವ ಸುಯೋಗ ಈ ವೇದಿಕೆಯಲ್ಲಿ ದೊರೆತಿದೆ. ನವರಾತ್ರಿಯಲ್ಲಿ ಶಸ್ತ್ರ ಮತ್ತು ಶಾಸ್ತ್ರದ ಪೂಜೆ ನಡೆಯುತ್ತದೆ. ಬಹುಶಃ ಬೆಟ್ಟಂಪಾಡಿಯಲ್ಲಿ ಯೋಧರಿಗೆ ಸನ್ಮಾನ ಮಾಡುವ ಮೂಲಕ ಶಸ್ತ್ರದ ಆರಾಧನೆ ನಡೆದರೆ, ಸೈನಿಕರಿಗೆ ಶಕ್ತಿ ತುಂಬುವ ದುರ್ಗೆಗೆ ಶಾಸ್ತ್ರದ ಪ್ರಕಾರ ಪೂಜೆ ನಡೆದಿದೆ. ಈ ಮೂಲಕ ಬೆಟ್ಟಂಪಾಡಿಯ ವಿಶ್ವಹಿಂದು ಪರಿಷದ್ ಬಜರಂಗದಳ ಕಾರ್ಯಕರ್ತರು ನಿಜವಾದ ನವರಾತ್ರಿ ಆಚರಿಸಿದ್ದಾರೆʼ ಎಂದರು.
ದೇಶಭಕ್ತಿಯ ಉದ್ದೀಪನವಾಗಲಿ – ಡಾ. ಪ್ರಮೋದ್ ಎಂ.ಜಿ.
ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕ ಡಾ| ಪ್ರಮೋದ್ ಎಮ್.ಜಿ. ಮಾತನಾಡಿ ʻಕ್ಯಾ. ನವೀನ್ ನಾಗಪ್ಪ ಜೀಯವರ ಮಾತುಗಳು ನಮ್ಮಲ್ಲಿ ಇನ್ನಷ್ಟು ದೇಶಭಕ್ತಿಯ ಉದ್ದೀಪನಗೊಳಿಸಲಿ. ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಎಂಬ ಸಂದೇಶ ಈ ದುರ್ಗಾಪೂಜೆಯ ಮೂಲಕ ಸಮಾಜಕ್ಕೆ ಸಾರುವಂತಾಗಬೇಕುʼ ಎಂದರು.
ಪ್ರಗತಿಪರ ಕೃಷಿಕರಾದ ಗಣೇಶ್ ರೈ ಆನಡ್ಕ, ಶಂಕರ ಪಾಟಾಳಿ ಕಕ್ಕೂರು, ಮಂಗಳೂರಿನ ಶ್ರೀನಿಧಿ ಕನ್‌ಸ್ಟ್ರಕ್ಷನ್ ಮತ್ತು ಜೆರಾಕ್ಸ್ ಸೆಂಟರ್ ಮ್ಹಾಲಕ ವಾಸಪ್ಪ ಪೂಜಾರಿ ಮಿತ್ತಡ್ಕ, ಪುತ್ತೂರು ಪಾಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪ್ರವೀಣಾ ಸದಾಶಿವ ರೈ ಸೂರಂಬೈಲು, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಬಿ. ಲಿಂಗಪ್ಪ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

ಮಾಜಿ ಯೋಧರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಕ್ಯಾ. ನವೀನ್ ನಾಗಪ್ಪ ಹಾಗೂ ಮಾಜಿ ಯೋಧ ಸುಬೇದಾರ್ ಮೇಜರ್ ಗಣೇಶ್ ಎಂ. ರವರಿಗೆ ಸನ್ಮಾನ ನೆರವೇರಿತು. ನಳಿನಾಕ್ಷಿ ಗಣೇಶ್, ದಮಿತ್ ಜೊತೆಗಿದ್ದರು. ಶಿವಪ್ರಸಾದ್ ತಲೆಪ್ಪಾಡಿ ಹಾಗೂ ಉಮೇಶ್ ಮಿತ್ತಡ್ಕ ಸನ್ಮಾನ ಪತ್ರ ವಾಚಿಸಿದರು.
ಪ್ರಸ್ತಾವನೆಗೈದು ಸ್ವಾಗತಿಸಿದ ಸಾಮೂಹಿಕ ದುರ್ಗಾಪೂಜಾ ಸಮಿತಿಯ ಪ್ರಮುಖ್ ರಾಜೇಶ್ ನೆಲ್ಲಿತ್ತಡ್ಕರವರು ಮಾತನಾಡಿ ʻದೈವ ಭಕ್ತಿಯ ಜೊತೆಗೆ ದೇಶಭಕ್ತಿಯಿಂದ ನಮ್ಮ ದೇಶದ ರಕ್ಷಣೆ ಸಾಧ್ಯʼ ಎಂಬ ಮಾತಿನಂತೆ ದುರ್ಗೆಯ ಶಕ್ತಿಯಿಂದ ಇಡೀ ರಾಷ್ಟ್ರಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕೆಂಬ ಆಶಯದಿಂದ ಕಳೆದ 12 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆʼ ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಸಾಮೂಹಿಕ ದುರ್ಗಾಪೂಜಾ ಸಮಿತಿ ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ಪ್ರಧಾನ ಕಾರ್ಯದರ್ಶಿ ಜತ್ತಪ್ಪ ಗೌಡ ಬಳ್ಳಿತ್ತಡ್ಡ, ಕೋಶಾಧಿಕಾರಿ ಸಾಂತಪ್ಪ ಕುಲಾಲ್ ಕೌಡಿಚ್ಚಾರು ಉಪಸ್ಥಿತರಿದ್ದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಿತಿಯ ಜೊತೆ ಕಾರ್ಯದರ್ಶಿ ಸನತ್ ಕುಮಾರ್ ರೈ ಕುಂಜಾಡಿ ವಂದಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಸಹಶಿಕ್ಷಕಿ ಕು. ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನ್ನಸಂತರ್ಪಣೆ ಜರಗಿತು.

ಕಾರ್ಗಿಲ್ ಯೋಧನ ಕಥೆಗೆ ಮರುಗಿದ ಸಭೆ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧ ಕ್ಯಾ. ನವೀನ್ ನಾಗಪ್ಪ ರವರು ಕಾರ್ಗಿಲ್ ಕದನ ಆರಂಭ ಮತ್ತು ಮುನ್ನಡೆ, ವಿಜಯದ ಕಥೆಯನ್ನು ಸಭೆಯನ್ನು ಮುಂದಿಟ್ಟರು. ತಾನು ಎರಡು ಕಾಲುಗಳು ಗಾಯಗೊಂಡಿದ್ದರೂ ಯುದ್ದವನ್ನು ಮುನ್ನಡೆಸಿದ ರೀತಿಯನ್ನು ಮನೋಜ್ಞವಾಗಿ ವಿವರಿಸಿದರು. ಯುದ್ದದಂತಹ ಭೀಕರ ಪರಿಸ್ಥಿತಿಯಲ್ಲಿ ಸೈನಿಕರೋರ್ವನಿಗೆ ಎದುರಾಗುವ ಮನಃಸ್ಥಿತಿಯನ್ನು ಸ್ವ-ಅನುಭವದೊಂದಿಗೆ ಹೇಳಿದರು. ನವೀನ್ ನಾಗಪ್ಪರವರ ಒಂದು ಗಂಟೆಯ ಭಾಷಣಕ್ಕೆ ಸಭಿಕರು ಮರುಗಿ ಕರತಾಡನದ ಮೂಲಕ ಗೌರವ ಸಲ್ಲಿಸಿದರು.