ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ವಳಾಲ್, ಬಜತೂರು ಗ್ರಾಮದ ಪಟ್ಟೆ ಮನೆ ಅಮಿಷ ಆನಂದ್ ಸೆ.27 ರಿಂದ ಅ.4ರವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ ಅಂಡರ್ 22ವಯೋ ವಿಭಾಗದ ಹುಡುಗಿಯರ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಯು.ಎ.ಇ ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಶ್ರೀಲಂಕಾ ಹಾಗೂ ಭಾರತದ ಮಹಿಳಾ ತಂಡಗಳು ಭಾಗವಹಿಸಲಿದೆ.
14 ವಯಸ್ಸಿನ ಅಮಿಷ ಯು.ಎ.ಇಯ ಅಂತಾರಾಷ್ಟ್ರೀಯ ಇಂಡೋರ್ ಕ್ರಿಕೆಟ್ ತಂಡದ ಕಿರಿಯ ಆಟಗಾರ್ತಿಯಾಗಿದ್ದು, ಕರ್ನಾಟಕ ಮೂಲದ ಆಟಗಾರ್ತಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ದುಬೈ ಜೆ.ಎಸ್.ಎಸ್ ಪ್ರೈವೇಟ್ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಅಮಿಷ ಆನಂದ್, ದುಬೈಯಲ್ಲಿ ನೆಲೆಸಿರುವ ಆನಂದ್ ಪಟ್ಟೆ ಮತ್ತು ವಿನುತಾ ಆನಂದ್ ದಂಪತಿಯ ಪುತ್ರಿ.
ಸೀಸನ್(ಹಾರ್ಡ್)ಬಾಲ್ ನಲ್ಲಿ ಯು.ಎ.ಇ ಕ್ರಿಕೆಟ್ ಬೋರ್ಡ್ ನ ಅಂಡರ್ 15,16 ಮತ್ತು ಅಂಡರ್ 19ರ ಹುಡುಗಿಯರ ವಿಭಾಗದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಅತಿಥಿ ತಂಡಗಳಾದ ಇಂಗ್ಲೆಂಡ್ ನ್ಯೂಜಿಲ್ಯಾಂಡ್ , ಅಮೇರಿಕಾ ಹಾಗು ಓಮನ್ ತಂಡಗಳೆದುರು ಯು.ಎ.ಇ ಪರವಾಗಿ ಆಡಿದ ಅನುಭವವಿದೆ.
ಇಂಗ್ಲೆಂಡ್ ನ ಕ್ರಿಕೆಟ್ ಆಟಗಾರ ಜೋ ರೂಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆಯಲ್ಪಡುವ ರೂಟ್ ಕಪ್ ಅಂಡರ್ 16 ಹುಡುಗಿಯರ ವಿಭಾದಲ್ಲಿ ಸತತ ಎರಡನೇ ಬಾರಿ ದುಬೈ ತಂಡವನ್ನು ಪ್ರತಿನಿಧಿಸಿ, ಅತಿಥಿ ತಂಡಗಳಾದ ಇಂಗ್ಲೆಂಡ್ ನ್ಯೂಜಿಲ್ಯಾಂಡ್ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಸೋಲಿಸಿ ಯು.ಎ.ಇ ತಂಡವು ರೂಟ್ ಕಪ್ ನ್ನು ಗೆದ್ದುಕೊಂಡಿತ್ತು.
ಬಹುಮುಖ ಪ್ರತಿಭೆಯಾಗಿರುವ ಅಮಿಷ ಕ್ರಿಕೆಟಿನೊಂದಿಗೆ ವಾಲಿಬಾಲ್, ಅಥ್ಲೆಟಿಕ್ , ಈಜುಗಾರಿಕೆ, ಹಾಡುಗಾರಿಕೆ ಹಾಗೂ ನೃತ್ಯದಲ್ಲೂ ಮುಂಚೂಣಿಯಲ್ಲಿದ್ದಾಳೆ. ಯು.ಎ.ಇಯ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ನಿಶಾ ಆಲಿ ಗರಡಿಯಲ್ಲಿ ತರಬೇತಿ ಪಡೆಯುತಿದ್ದು , ಯು.ಎ.ಇಯ ಮಾಜಿ ನಾಯಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ನ ಅಧಿಕಾರಿಯಾಗಿರುವ ಛಾಯ ಮುದ್ದ್ಗಲ್ ಮಾರ್ಗದರ್ಶನದೊಂದಿಗೆ ಅಂತಾರಾಷ್ಟ್ರೀಯಯ ಕ್ರಿಕೆಟ್ ಗೆ ತಯಾರಾಗುತ್ತಿದ್ದಾರೆ.