15 ಸಾ. ರೂ. ಗೌರವಧನದಿಂದ 27 ಸಾ.ರೂ. ಗೆ ಹೆಚ್ಚಿಸುವ ಕುರಿತು ಸಲಹೆ
ಬೆಂಗಳೂರು: ರಾಜ್ಯದ ಗ್ರಾಮ ಸಹಾಯಕರಿಗೆ ನಿವೃತ್ತಿ ಬಳಿಕ ಅಥವಾ ಸೇವೆಯಲ್ಲಿರುವಾಗಲೇ ಮೃತರಾದರೆ 5 ಲಕ್ಷ ರೂ. ಇಡುಗಂಟು ನೀಡುವ ಮಹತ್ವದ ನಿರ್ಣಯವನ್ನು ಸರಕಾರ ತೆಗೆದುಕೊಂಡಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆದಿದ್ದು, ಕೊನೆಗೆ ಇಡುಗಂಟು ಮೀಸಲಿಡುವ ನಿರ್ಣಯಕ್ಕೆ ಬರಲಾಯಿತು. ಸಭೆ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು 10,450 ಗ್ರಾಮ ಸಹಾಯಕರಿದ್ದು, ತಮ್ಮ ಸೇವೆಯನ್ನು ಸಕ್ರಮಗೊಳಿಸಬೇಕು, ಗೌರವಧನ ಹೆಚ್ಚಿಸಬೇಕು ಮುಂತಾದ ಬೇಡಿಕೆಗಳನ್ನು ಸರಕಾರದ ಮುಂದಿ ಟ್ಟಿದ್ದರು. ಇದಕ್ಕಾಗಿ ಸಾಕಷ್ಟು ಹೋರಾಟಗಳನ್ನೂ ನಡೆಸಿದ್ದರು.
ಗ್ರಾಮ ಸಹಾಯಕರ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆದಿದ್ದು, ಗ್ರೂಪ್ ಡಿ ಹುದ್ದೆಯಲ್ಲಿ ಸಕ್ರಮಗೊಳಿಸಿದರೆ ಹೇಗೆ ಎಂಬ ಚರ್ಚೆ ನಡೆದಿದೆ. ಪ್ರಸ್ತುತ ನೀಡುತ್ತಿರುವ 15 ಸಾ. ರೂ. ಗೌರವಧನವನ್ನು 27 ಸಾ.ರೂ. ಗೆ ಹೆಚ್ಚಿಸುವ ಕುರಿತೂ ಸಲಹೆಗಳು ಕೇಳಿಬಂದವು. ರಾಜ್ಯದಲ್ಲಿ 10,450 ಗ್ರಾಮ ಸಹಾಯಕರಿದ್ದಾರೆ.
ಭಡ್ತಿಗೆ ತರಬೇತಿ ಕಡ್ಡಾಯ
ಸರಕಾರದ ಯೋಜನೆ, ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿ ಸಾರ್ವಜನಿಕರ ಬಳಿಕ ಕೊಂಡೊಯ್ಯುವ ಸರಕಾರಿ ಅಧಿಕಾರಿಗಳು ಮತ್ತು ನೌಕರರ ಸಾಮರ್ಥ್ಯ, ಕಾರ್ಯಕ್ಷಮತೆ ಹಾಗೂ ನೈಪುಣ ವೃದ್ಧಿಗಾಗಿ ಮುಂಭಡ್ತಿ ಪಡೆಯಲು ರಾಷ್ಟ್ರೀಯ ಮಟ್ಟದ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವುದನ್ನು ಕಡ್ಡಾಯ ಗೊಳಿಸಲಾಗಿದೆ. ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ಮುಂಭಡ್ತಿ ಗಾಗಿ ತರಬೇತಿ ಕಡ್ಡಾಯ) ನಿಯಮ- 2025ಕ್ಕೆ ಅನುಮೋದನೆ ನೀಡಿದೆ.
ತಾಂತ್ರಿಕ/ ತಾಂತ್ರಿಕೇತರ, ಲಿಪಿಕ/ಲಿಪಿಕೇತರ ಹುದ್ದೆಗಳೆಂದು ವರ್ಗೀಕರಿಸಿ ಅದಕ್ಕೆ ಪೂರಕವಾಗಿ ತರಬೇತಿ ನೀಡಲಾಗುತ್ತದೆ. ಆನ್ಲೈನ್ ಅಥವಾ ಆಫ್ಲೈನ್ ಎರಡು ರೀತಿಯಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಬುನಾದಿ (ದೀರ್ಘಾವಧಿ) ಹಂತ ತರಬೇತಿ ಪಡೆದವರಿಗೆ ಪುನರ್ಮನನ (ಅಲ್ಪಾವಧಿ) ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ.