ಪುತ್ತೂರು: ಪುತ್ತೂರಿನ ಬೆಥನಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕುರಿತು ಮಾಹಿತಿ ನೀಡುವ ವಿಶೇಷ ಪುನಶ್ಚೇತನ ತರಬೇತಿ ಕಾರ್ಯಾಗಾರವು ಸೆ.26ರಂದು ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಕಾರ್ಯಾಗಾರ ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರಿನ ಹಿರಿಯ ಮನಃಶಾಸ್ತ್ರಜ್ಞ ಜೊಯಲ್ ಕೆ. ಟೋಮ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡ ಮತ್ತು ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ ಅವರು, ಮಕ್ಕಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ಮಾಡುವ ಮತ್ತು ಸೂಕ್ತ ವಿಧಾನದ ಮೂಲಕ ಸಮಾಲೋಚನೆ ನಡೆಸಿ ಅವರನ್ನು ಶಿಕ್ಷಣದತ್ತ ಸೆಳೆಯುವ ಮಾರ್ಗೋಪಾಯಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ವಸಂತ್, ಬೆಥನಿ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್., ಲಿಟ್ಲ್ ಫ್ಲವರ್ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವೆನಿಶಾ ಬಿ.ಎಸ್., ಹಾಗೂ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಅನಿತಾ ಟ್ರೆಸ್ಸಿ ಬಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಥನಿ ಆಂಗ್ಲ ಮಾಧ್ಯಮ ಶಾಲಾ ಸಹಶಿಕ್ಷಕಿ ಅನಿತಾ ಸಿ ಎ ಮತ್ತು ಬಳಗದವರು ಪ್ರಾರ್ಥಿಸಿದರು. ಸಹಶಿಕ್ಷಕಿ ಭಗಿನಿ ರೀನಾ ಬಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ಲಿಟ್ಲ್ ಫ್ಲವರ್ ಅನುದಾನಿತ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಜೊಸ್ಲಿನ್ ಪಾಯ್ಸ್ ವಂದಿಸಿದರು. ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.