ಶಾಸಕರ ಪ್ರಯತ್ನದಿಂದ 60 ಲಕ್ಷ ರೂ. ಅನುದಾನ: ಧನ್ಯಕುಮಾರ್ ರೈ
ಉಪ್ಪಿನಂಗಡಿ: ಶತಮಾನಗಳ ಇತಿಹಾಸವನ್ನು ಹೊಂದಿದ್ದ ಉಪ್ಪಿನಂಗಡಿಯ ಕದಿಕ್ಕಾರು ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರವರ ಪ್ರಯತ್ನದಿಂದಾಗಿ 60 ಲಕ್ಷದಷ್ಟು ಸರಕಾರಿ ಅನುದಾನ ಪ್ರಾಪ್ತವಾಗಿದೆ ಎಂದು ಬಸದಿ ಆಡಳಿತ ಮಂಡಳಿಯ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ತಿಳಿಸಿದ್ದಾರೆ.
ಉಪ್ಪಿನಂಗಡಿ , ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯಲ್ಲಿನ ಈ ಬಸದಿಗೆ ಹತ್ತಕ್ಕೂ ಕಡಿಮೆ ಸಂಖ್ಯೆಯಲ್ಲಿ ಜೈನ ಕುಟುಂಬಗಳಿದ್ದು, ಸರಕಾರದ ಮತ್ತು ಭಕ್ತ ಸಮೂಹದ ಸಹಕಾರ ಪಡೆದು ಬಸದಿ ಪುನರ್ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಈ ಹಿಂದಿನ ಸರಕಾರದ ಅವಧಿಯಲ್ಲಿ ಒದಗಿಸಿದ 50 ಲಕ್ಷ ರೂ ಅನುದಾನದಲ್ಲಿ ತಡೆಗೋಡೆಯ ನಿರ್ಮಾಣ ಕಾರ್ಯ ನಡೆದಿದ್ದು, ಪ್ರಸಕ್ತ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಈಗಾಗಲೇ 2023 ರಲ್ಲಿ 8 ಲಕ್ಷ ರೂ, 2024 ರಲ್ಲಿ 21 ಲಕ್ಷ ರೂ, 2025 ರಲ್ಲಿ 21 ಲಕ್ಷ ರೂ ಹಣವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ಒದಗಿಸಿರುವುದು ಮಾತ್ರವಲ್ಲದೆ, ಶಾಸಕರ ಸ್ವಂತ ನಿಧಿಯಿಂದಲೂ 10 ಲಕ್ಷ ರೂ. ಹಣವನ್ನು ಬಸದಿಯ ಪುನರ್ ನಿರ್ಮಾಣ ಕಾರ್ಯಕ್ಕೆ ಒದಗಿಸಿ ಸಹಕರಿಸಿದ್ದಾರೆ. ಮಾತ್ರವಲ್ಲದೆ ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನವನ್ನು ನೀಡಲು ನಾವು ಶಾಸಕರಲ್ಲಿ ಬೇಡಿಕೆಯಿಟ್ಟಿದ್ದು, ಅವರು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ ಎಂದವರು ವಿವರಿಸಿದರು. ಎಂದು ಅವರು ತಿಳಿಸಿದರು.
ಮೂರು ವರ್ಷದ ಹಿಂದೆ ಪ್ರಾರಂಭಗೊಂಡ ಬಸದಿಯ ನಿರ್ಮಾಣ ಕಾರ್ಯ ಒಂದಷ್ಟು ಮಂದಗತಿಯಿಂದ ನಡೆದಿದ್ದರೂ, ಉತ್ತಮ ಶೈಲಿಯಲ್ಲಿ ಆಕರ್ಷಕವಾಗಿ ನಿರ್ಮಾಣವಾಗುತ್ತಿದೆ. ಆಡಳಿತ ಸಮಿತಿ ಸದಸ್ಯರು ಮುಂದಿನ ದಿನಗಳಲ್ಲಿ ಸಭೆ ಸೇರಿ ಬಸದಿಯ ಲೋಕಾರ್ಪಣೆ ಕಾರ್ಯದ ಬಗ್ಗೆ ನಿರ್ಣಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.