ಪುತ್ತೂರು: ವಿಶ್ವ ರೇಬಸ್ ದಿನದ ಪ್ರಯುಕ್ತ ಪುತ್ತೂರು ಪಶು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ರೋಗದ ವಿರುದ್ದ ಉಚಿತ ಲಸಿಕಾ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಕರಪತ್ರ ಬಿಡುಗಡೆ ಮಾಡುವ ಮೂಲಕ ಸೆ.28ರಂದು ನಡೆಸಿದರು. ತಾಲೂಕಿನ ಮುಖ್ಯಪಶುವೈದ್ಯಾದಿಕಾರಿ ಡಾ ಧರ್ಮಪಾಲ್ ರವರು ಹುಚ್ಚುನಾಯಿ ರೋಗದ ಬಗ್ಗೆ ಸವಿವರವಾಗಿ ತಿಳಿಸಿ ಲಸಿಕೆ ಹಾಕುವುದರ ಮಹತ್ವವನ್ನು ತಿಳಿಸುತ್ತಾ ಮುಂದಿನ ಒಂದು ತಿಂಗಳು ನಗರ ಪಾಲಿಕೆ ವ್ಯಾಪ್ತಿ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ತು ವ್ಯಾಪ್ತಿಯಲ್ಲಿ ನಗರ ಸಭೆ ಹಾಗೂ ಗ್ರಾಮ ಪಂಚಾಯತ್ ಗಳ ಸಹಕಾರಗಳೊಂದಿಗೆ ಎಲ್ಲಾ ಸಾಕು ನಾಯಿಗಳಿಗೆ ಹಾಗೂ ಬೆಕ್ಕುಗಳಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ನಗರಸಭಾ ಸದಸ್ಯರಾದ ದಿನೇಶ್ ಶೇವಿರೆ ಮಾತನಾಡಿ, ಇದೊಂದು ಬಹಳ ಉತ್ತಮ ಕಾರ್ಯಕ್ರಮ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಸರಕಾರದಿಂದ ಸಿಗುವ ಈ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಿ, ನಗರ ಸಭೆಯಿಂದ ಇದಕ್ಕೆ ಬೇಕಾದಂತಹ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.ಪುತ್ತೂರು ಪಶು ಆಸ್ಪತ್ರೆ ಜಾನುವಾರು ಅಭಿವೃದ್ದಿ ಅಧಿಕಾರಿ ಪುಷ್ಪರಾಜ ಶೆಟ್ಟಿ ಸ್ವಾಗತಿಸಿದರು.
ಮುಖ್ಯ ಅತಿಥಿ ಸಂಜೀವ ಬೆಳ್ಳಿಪ್ಪಾಡಿ ಶುಭಹಾರೈಸಿದರು. ನಾಯಿಗಳಿಗೆ ಲಸಿಕೆ ನೀಡಲಾಯಿತು. ತಾಲೂಕಿನ ಎಲ್ಲಾ ಸಂಸ್ಥೆಗಳಲ್ಲೂ ಮುಂದಿನ 1 ತಿಂಗಳು ಉಚಿತ ಲಸಿಕಾ ಕಾರ್ಯ ನಡೆಯಲಿದೆ.