ಯಶಸ್ವಿಯಾದರೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಿಂಚು ಬಂಧಕ-ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಬಿರುಮಲೆ ಬೆಟ್ಟದಲ್ಲಿ ಮಿಂಚು ಬಂಧಕ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದ.ಕ ಜಿಲ್ಲೆಯ ಹಲವು ಕಡೆಗಳಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಎಲ್ಲೆಲ್ಲಿ ಮಿಂಚಿನ ಹೊಡೆತ ಬಿದ್ದಿದೆ. ಎಷ್ಟು ಪ್ರಮಾಣದಲ್ಲಿ ಆಗಿದೆ ಎನ್ನುವ ಮಾಹಿತಿಯು ಮಿಂಚು ಬಂಧಕದಲ್ಲಿ ದಾಖಲಾಗುತ್ತಿದ್ದು, ಅದರ ಆಧಾರದಲ್ಲಿ ಮಿಂಚಿನಿಂದ ಹೆಚ್ಚು ಹೊಡೆತ ಬೀಳುವಲ್ಲಿ, ಜನಸಂದಣಿ ಅಧಿಕವಿರುವಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬಿರುಮಲೆ ಬೆಟ್ಟದಲ್ಲಿ ಅಳವಡಿಸಲಾಗಿರುವ ಪುತ್ತೂರಿನ ಪ್ರಥಮ ಮಿಂಚು ಬಂಧಕವನ್ನು ಸೆ.28ರಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪ್ರತಿ ವರ್ಷ ಮಳೆಗಾಲದಲ್ಲಿ ಸಿಡಿಲು ಮಿಂಚಿಗೆ ಹಲವು ಜೀವಗಳು ಬಲಿಯಗುತ್ತಿದೆ. ಕಳೆದ ವರ್ಷವೂ ಸಿಡಿಲು, ಮಿಂಚಿನಿಂದ ನವ ವಿವಾಹಿತ ಸೇರಿದಂತೆ 7 ಮಂದಿ ಜೀವ ಕಳೆದುಕೊಂಡಿದ್ದಾರೆ. ಮಿಂಚು ಬಂಧಕ ಅಳವಡಿಸುವಂತೆ ಮಾಧ್ಯಮದವರು ನಿರಂತರ ವರದಿ ಮಾಡಿ ಒತ್ತಾಯಿಸಿದ್ದರು. ನಾನು ವಿಧಾನ ಅಧಿವೇಶನದಲ್ಲೂ ಒತ್ತಡ ಹಾಕಿದ್ದೆ. ಸರಕಾರವು ಭರವಸೆ ನೀಡಿತ್ತು. ಅಲ್ಲದೆ ಈ ಹಿಂದೆ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರು ಸರಕಾರೇತರ ಸಂಸ್ಥೆಯ ಅನುದಾನ ಮೂಲಕ 5 ಕಡೆ ಮಿಂಚು ಬಂಧಕ ಅಳವಡಿಸಲು ಪ್ರಯತ್ನಿಸಿದ್ದರು. ಈಗ ಪುತ್ತೂರಿನ ಅತೀ ಎತ್ತರದ ಪ್ರದೇಶ ಬಿರುಮಲೆಯಲ್ಲಿ ಅಳವಡಿಸಲಾಗಿದೆ. ಇದು ಸರಿಯಾಗಿ ಕೆಲಸ ಮಾಡಿದರೆ ಸರಕಾರದ ಮೂಲಕ ನಾನಾ ಕಡೆಗಳಲ್ಲಿ ಮಿಂಚು ಬಂಧಕ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ ಶಾಸಕರು, ಮಿಂಚು ಬಂಧಕ ಅಳವಡಿಸಲು ಬಿರುಮಲೆ ಅಭಿವೃದ್ಧಿ ಸಮಿತಿಯವರು ಸಹಕಾರ ನೀಡಿದ್ದಾರೆ. ಬಿರುಮಲೆ ಸುರಕ್ಷಿತವಾಗಿರುವ ಪ್ರವಾಸೋಸ್ಯಮ ತಾಣವಾಗಿ ಬೆಳೆಯಲು ಮಿಂಚು ಬಂಧಕ ಪೂರಕವಾಗಲಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪೂಡಾ ಸದಸ್ಯ ನಿಹಾಲ್ ಶೆಟ್ಟಿ, ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗಜ್ಜೀವನ್‌ದಾಸ್ ರೈ ಚಿಲ್ಮೆತ್ತಾರು, ಸಮಿತಿಯ ನಿತಿನ್ ಪಕ್ಕಳ, ದತ್ತಾತ್ರೇಯ ರಾವ್, ಶಾಂತಾರಾಮ್, ಸಂದೀಪ್ ರೈ ಚಿಲ್ಮೆತ್ತಾರು, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಸಂತೋಷ್ ಭಂಡಾರಿ ಚಿಲ್ಮೆತ್ತಾರಯ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುತ್ತೂರಿನ ಮಾಧ್ಯಮದವರಿಗೆ ಅಭಿನಂದನೆ
ಮಿಂಚು ಬಂಧಕ ಅಳವಡಿಸುವಲ್ಲಿ ಪುತ್ತೂರಿನ ಮಾಧ್ಯಮದವರ ಪಾತ್ರ ಪ್ರಮುಖವಾಗಿದೆ. ಮಾಧ್ಯಮದವರು ಸದಾ ನಮ್ಮನ್ನು ಎಚ್ಚರಿಸುತ್ತಿದ್ದರು. ಮಿಂಚಿನಿಂದ ಆಗುವ ಹಾನಿಗೆ ಕಡಿವಾಣ ಹಾಕಲು ವರದಿಯ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದು, ಪುತ್ತೂರಿನ ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.