





ಧರ್ಮದ ಮೂಲವನ್ನು ಕಲಿತುಕೊಳ್ಳುವ ಕೆಲಸ ಆಗಬೇಕು: ಮುಳಿಯ ಕೇಶವ ಪ್ರಸಾದ್


ಪುತ್ತೂರು: ಹಿಂದೂ ಧರ್ಮ ಅನ್ನೋದು ಒಂದು ಸಾಗರವಿದ್ದಂತೆ ಇಂತಹ ಧರ್ಮದ ಮೂಲವನ್ನು ಕಲಿತುಕೊಳ್ಳುವ ಕೆಲಸ ಆಗಬೇಕು ಈ ನಿಟ್ಟಿನಲ್ಲಿ ಕುಂಬ್ರದ ಸ್ಪಂದನಾ ಸೇವಾ ಬಳಗದಿಂದ ಒಳ್ಳೆಯ ಪ್ರಯತ್ನ, ಅನುಸರಣೀಯ ಕಾರ್ಯ ಆಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹೇಳಿದರು.





ಧರ್ಮ ಜಾಗೃತಿಗಾಗಿ ಸ್ಪಂದನಾ ಸೇವಾ ಬಳಗ ಕುಂಬ್ರ ಹಮ್ಮಿಕೊಂಡಿದ್ದ ‘ಸುಜ್ಞಾನ ದೀಪಿಕೆ-1’ ಪುಸ್ತಕದ ಮೌಲ್ಯಮಾಪನ ಮತ್ತು ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನ.16 ರಂದು ಕುಂಬ್ರ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಉಪನ್ಯಾಸಕರಾಗಿ ಆಗಮಿಸಿದ್ದ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕೀರಿ ಮಾತನಾಡಿ, ಕೋಟಿ ಕೋಟಿ ಹಣ ಸುರಿದು ಮಂದಿರ, ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ ಮಾಡಬಹುದು ಆದರೆ ಧರ್ಮ ಜಾಗೃತಿ ಎನ್ನುವುದು ಮಕ್ಕಳ ಮನಸ್ಸಿನಲ್ಲಿ ಹುಟ್ಟಿಕೊಳ್ಳಬೇಕು, ದೇವರಿಗೆ ಚಿನ್ನದ ಕಿರೀಟ ಕೊಟ್ಟರೂ ಅಲ್ಲಿ ಧರ್ಮವಿಲ್ಲ ಬದಲಾಗಿ ಮಕ್ಕಳ ಮನಸ್ಸಿನಲ್ಲಿದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣ ಕೊಡಲು ಮುಂದಾಗಿರುವ ಸ್ಪಂದನಾ ಸೇವಾ ಬಳಗ ಒಂದು ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ, ಸ್ಪಂದನಾ ಸೇವಾ ಬಳಗದ ಸುಜ್ಞಾನ ದೀಪಿಕೆಯ ಪ್ರಾಯೋಜಕರಾದ ಕಡಮಜಲು ಸುಭಾಷ್ ರೈಯವರು ಮಾತನಾಡಿ, ಧರ್ಮ ಜಾಗೃತಿಗಾಗಿ ಗ್ರಾಮೀಣ ಭಾಗದ ಒಂದು ಸಂಘಟನೆಯಾಗಿರುವ ಸ್ಪಂದನಾ ಸೇವಾ ಬಳಗ ಒಳ್ಳೆಯ ಕೆಲಸ ಮಾಡುತ್ತಿದೆ ಇದು ತಾಲೂಕಿಗೆ ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಧರ್ಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡಿಸಬೇಕು ಎಂಬ ಆಲೋಚನೆ ಇತ್ತು ಅದಕ್ಕೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿರುವುದು ಖುಷಿ ತಂದಿದೆ. ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ಕುಂಬ್ರ ಶ್ರೀರಾಮ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಪ್ರಾಥಮಿಕ ಕೃಷಿ ಪತತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಮುಳಿಯ ಸಂಸ್ಥೆಯ ಕೃಷ್ಣವೇಣಿ ಮುಳಿಯ ಸೇರಿದಂತೆ ಸ್ಪಂದನಾ ಸೇವಾ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿದರು. ಸ್ಪಂದನಾ ಸೇವಾ ಬಳಗದ ಗೌರವ ಸಲಹೆಗಾರ ಸುಧಾಕರ ರೈ ಕುಂಬ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉದಯ ಕುಂಬ್ರ, ಪದ್ಮನಾಭ ಮುಡಾಲ, ಅರುಣ್ ರೈ ಬಿಜಳ, ನೇಮಿರಾಜ್ ರೈ, ಹರಿಪ್ರಸಾದ್, ಹರೀಶ್ ರೈ ಮುಗೇರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಹರೀಶ್ ರೈ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು.

79 ಮಂದಿಯಿಂದ ಮೌಲ್ಯಮಾಪನ
ಸುಜ್ಞಾನ ದೀಪಿಕೆ-1 ಪುಸ್ತಕವನ್ನು ಕೆದಂಬಾಡಿ, ಒಳಮೊಗ್ರು ಮತ್ತು ಅರಿಯಡ್ಕ ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ 129 ಮಂದಿಗೆ ವಿತರಿಸಲಾಗಿದ್ದು ಇದರ ಮೌಲ್ಯಮಾಪನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸೇರಿ ಒಟ್ಟು ೭೯ ಮಂದಿ ಭಾಗವಹಿಸಿದ್ದರು. ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ, ಪುಸ್ತಕ ನೀಡಿ ಗೌರವಿಸಲಾಯಿತು. ಕಡಮಜಲು ಸುಭಾಷ್ ರೈ, ಚಂದ್ರಶೇಖರ ಪಟ್ಲಕಾನ, ಬಿ.ಆರ್ ಭವಾನಿ ಜಯರಾಮ್ ಬೊಳ್ಳಾಡಿ, ಸುಧಾಕರ ರೈ ಕುಂಬ್ರರವರುಗಳು ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದರು.
ಅರಬ್ಬೀ ಸಮುದ್ರವಲ್ಲ ಅದು ಸಿಂಧೂ ಸಮುದ್ರ…!?
ಯಾರಿಗೂ ತೊಂದರೆ ಕೊಡದ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ, ಇಂತಹ ಹಿಂದೂ ಧರ್ಮದ ಸಿಂಧೂ ನದಿಯು ಅರಬ್ಬೀ ಸಮುದ್ರವಾಗಿದೆ ಆದರೆ ಇದು ಅರಬ್ಬೀ ಸಮುದ್ರವಲ್ಲ ಸಿಂಧೂ ಸಮುದ್ರ ಎಂದ ಅವಿನಾಶ್ ಕೊಡಂಕೀರಿಯವರು ಸಿಂಧೂ ಸಮುದ್ರ ಅರಬ್ಬೀ ಸಮುದ್ರವಾಗಿರುವುದು ಬೇಸರ ತಂದಿದೆ ಎಂದರು.
ಪಂಚಾಂಗ ಅಧ್ಯಾಯನ ತರಬೇತಿ ಉದ್ಘಾಟನೆ
ಈಗಾಗಲೇ ಸುಜ್ಞಾನ ದೀಪಿಕೆ-1 ಪುಸ್ತಕ ಪಠಣ ಮತ್ತು ಮೌಲ್ಯಮಾಪನ ಮುಗಿದಿದ್ದು ಮುಂದಿನ ಹಂತವಾಗಿ ಪಂಚಾಂಗ ಅಧ್ಯಾಯನ ತರಬೇತಿ ನಡೆಯಲಿದ್ದು ಇದರ ಉದ್ಘಾಟನೆಯನ್ನು ಜಮದಗ್ನಿ ನಾಟಿ ವೈದ್ಯಾಲಯದ ನಾಟಿ ವೈದ್ಯರು, ಅರ್ಚಕರು ಆಗಿರುವ ರವಿರಾಮ ಭಟ್ರವರು ನೆರವೇರಿಸಿ ಮಾತನಾಡಿ, ಪಂಚಾಂಗ ಅಧ್ಯಾಯನ ಒಂದು ಒಳ್ಳೆಯ ಕಾರ್ಯವಾಗಿದ್ದು ಒಂದು ಒಳ್ಳೆಯ ದಿನದಿಂದ ಈ ಅಧ್ಯಾಯನವನ್ನು ಆರಂಭಿಸಲಾಗುವುದು ಎಂದು ತಿಳಿಸಿ ಶುಭ ಹಾರೈಸಿದರು.
‘ ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣ ಕೊಡಬೇಕು ಎಂಬ ಆಲೋಚನೆ ಇತ್ತು ಇದಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಒಳ್ಳೆಯ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಮೊದಲ ಹಂತದ ಕಾರ್ಯಕ್ರಮ ಮುಗಿದಿದ್ದು ಮುಂದಿನ ಹಂತದಲ್ಲಿ ಪಂಚಾಂಗ ಅಧ್ಯಾಯನ ಹಮ್ಮಿಕೊಂಡಿದ್ದೇವೆ. ನಿಮ್ಮೆಲ್ಲರ ಸಹಕಾರ ಇರಲಿ.’
ರತನ್ ರೈ ಕುಂಬ್ರ, ಅಧ್ಯಕ್ಷರು ಸ್ಪಂದನಾ ಸೇವಾ ಬಳಗ ಕುಂಬ್ರ










