ಪುಣಚ ಪಾಲಸ್ತಡ್ಕದಲ್ಲಿ ನಡೆದ ಅಹಿತಕರ ಘಟನೆ: ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಖಂಡನಾ ಸಭೆ,ಸಾಮೂಹಿಕ ಪ್ರಾರ್ಥನೆ

0

ಪುಣಚ:ಇಲ್ಲಿನ ಪಾಲಸ್ತಡ್ಕದಲ್ಲಿ ವ್ಯವಹರಿಸುತ್ತಿದ್ದ ಆನಂದ ಗೌಡರ ಮಾಲಕತ್ವದ ಇಂಟರ್‌ಲಾಕ್ ಫ್ಯಾಕ್ಟರಿಯ ಸಿಸಿ ಟಿವಿಯನ್ನು ಪುಡಿಗೈದು ಬಾಗಿಲು ಮುರಿದು ದೇವಿಯ ಫೊಟೋಗಳಿಗೆ ಬೆಂಕಿಕೊಟ್ಟ ಘಟನೆ ವಿರುದ್ಧ ಸೆ.30ರಂದು ಖಂಡನಾ ಸಭೆ ನಡೆಸಿ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಎಸ್.ಆರ್.ರಂಗಮೂರ್ತಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕಿಡಿಗೇಡಿಗಳಿಂದ ನಡೆದಿರುವ ಘಟನೆ ಬಹಳ ಬೇಸರದ ಸಂಗತಿಯಾಗಿದೆ.

ಇಂಥ ತಂಡ ಹಿಂದೂ ಶ್ರದ್ಧಾ ಕೇಂದ್ರಗಳನ್ನು ನಿರ್ಮೂಲನೆ ಮಾಡುವ ಹಾಗೂ ಒಡೆಯುವ ಕೆಲಸವನ್ನು ಮಾಡುತ್ತಿದೆ.ಇಂತಹ ಮತಾಂಧ ಚಟುವಟಿಕೆಗಳಿಗೆ ಪುಣಚ ಗ್ರಾಮದಲ್ಲಿ ಅವಕಾಶ ನೀಡುವುದಿಲ್ಲ ಎಂದು ನಾವೆಲ್ಲರೂ ಖಂಡಿಸಬೇಕು ಎಂದರಲ್ಲದೆ,ಮುಂದಕ್ಕೆ ಇಂಥ ಘಟನೆಗಳು ನಡೆದರೆ ಹಿಂದೂ ಸಮಾಜ ತಕ್ಕ ಪಾಠವನ್ನು ಕಲಿಸಲು ಸಿದ್ಧವಾಗಿದೆ ಎಂಬ ಎಚ್ಚರಿಕೆಯನ್ನು ನೀಡಿದರು. ಬಳಿಕ ದೇವಸ್ಥಾನದ ನಡೆಯಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಯವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.ವಿಟ್ಲ ಅರಮನೆಯ ಬಂಗಾರು ಅರಸರು ಜೊತೆಗಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ:
ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ,ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಕಾರ್ಯದರ್ಶಿ ಪ್ರೀತಂ ಪೂಂಜ ಅಗ್ರಾಳ, ದ.ಕ.ಜಿಲ್ಲಾ ಒ.ಬಿ.ಸಿ.ಉಪಾಧ್ಯಕ್ಷ ಗುರುವಪ್ಪ ಪೂಜಾರಿ ದಲ್ಕಾಜೆಗುತ್ತು, ಪುಣಚ, ಶಕ್ತಿ ಕೇಂದ್ರದ ಅಧ್ಯಕ್ಷ, ಹರೀಶ್ ಪೂಜಾರಿ ದಲ್ಕಾಜೆ,ಹಿಂದೂ ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು,ಆರ್‌ಎಸ್‌ಎಸ್‌ನ ರವೀಂದ್ರ ಪಿ.,ಪುತ್ತೂರು ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ರೈ ಬಲ್ನಾಡು,ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ ತೆಂಕಿಲ, ಬಜರಂಗದಳ ಜಿಲ್ಲಾ ಸಂಯೋಜಕ್ ಪ್ರವೀಣ್ ಕಲ್ಲೇಗ, ಬಜರಂಗದಳ ಪುತ್ತೂರು ಸಂಯೋಜಕ ಜಯಂತ್ ಕುಂಜೂರುಪಂಜ, ಸಂದೀಪ್ ಸಿಂಗಾಣಿ, ಹಿಂದೂ ಜಾಗರಣ ವೇದಿಕೆ ಮುಖಂಡ ಅಕ್ಷಯ್ ರಜಪೂತ್ ಸಹಿತ ಪ್ರಮುಖರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷರಿಂದ ಘಟನಾ ಸ್ಥಳಕ್ಕೆ ಭೇಟಿ:
ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ನಾವು ನಂಬುವ ದೇವರ ಫೊಟೋವನ್ನು ಬೆಂಕಿಯಲ್ಲಿ ಭಸ್ಮ ಮಾಡುವ ಹೇಯ ಕೃತ್ಯವನ್ನು ನೋಡಿದಾಗ ತುಂಬಾ ಬೇಸರ ಆಗುತ್ತದೆ.ಇದಕ್ಕೆ ಸರಿಯಾದ ರೀತಿಯಲ್ಲಿ ಕಾನೂನು ಶಿಕ್ಷೆಯಾಗಬೇಕು,ದೇಶದ್ರೋಹಿ ಕೃತ್ಯ ಎಸಗುವವರ ವಿರುದ್ಧ ಸರಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಹಿಂದುತ್ವಕ್ಕೆ ಧಕ್ಕೆ ತರುವ ಈ ರೀತಿಯ ಕೃತ್ಯ ಎಸಗುವವರ ವಿರುದ್ಧ ಬಿಜೆಪಿಯಿಂದ ಸಂಘಟಿತ ಹೋರಾಟ ಮಾಡಲಿದ್ದೇವೆ.ನಿರಂತರವಾಗಿ ನಾವು ನಿಮ್ಮೊಂದಿಗೆ ಇದ್ದು ಕಾನೂನಾತ್ಮಕವಾಗಿ ಒಗ್ಗಟ್ಟಾಗಿ ಹೋರಾಟ ಮಾಡಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here