ಪುತ್ತೂರು: ನವರಾತ್ರಿಯ ದಿನ ಎಲ್ಲೆಡೆ ಸಂಭ್ರಮ ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಗುತ್ತದೆ. ಅದೇ ರೀತಿ ಸರಸ್ವತಿ ಆರಾಧಕರಾದ ಕಲಾಕಾವಿದರ ತಮ್ಮದೇ ಆದ ರೀತಿಯಲ್ಲಿ ದೇವಿಯ ಆರಾಧನೆ ಮಾಡುತ್ತಾರೆ. ಅದರಲ್ಲೂ ಭರತನಾಟ್ಯ ಕಲಾವಿದರು ಸರಸ್ವತಿ, ನಟರಾಜನ ಮುಂದೆ ತಮ್ಮ ಗೆಜ್ಜೆಗಳನ್ನು ಇಟ್ಟು ಗೆಜ್ಜೆಪೂಜೆ ಮಾಡುವುದು ಕೂಡ ನವರಾತ್ರಿಯ ವಿಶೇಷತೆಗಳಲ್ಲಿ ಒಂದಾಗಿದೆ.
ಕಳೆದ ಮೂವತ್ತು ವರ್ಷಗಳಿಂದ ಭರತನಾಟ್ಯ ಕಲೆಯ ಮೂಲಕ ಹೆಸರು ವಾಸಿಯಾಗಿರುವ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡಮಿಯಲ್ಲಿ ಪ್ರತೀ ನವರಾತ್ರಿಯಂದು ಗೆಜ್ಜೆಪೂಜೆಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಭರತನಾಟ್ಯ ಕಲಾವಿದರು ನವರಾತ್ರಿಯ 7 ನೇ ದಿನದಿಂದ ಮಾತೆ ಶಾರದೆಯನ್ನು ಪೂಜಿಸುತ್ತಾರೆ. ಈ ಮೂರು ಭರತನಾಟ್ಯ ಕಲಾವಿದರೆಲ್ಲಾ ಸೇರಿ ಈ ಗೆಜ್ಜೆಪೂಜೆ ನೆರವೇರಿಸುತ್ತಾರೆ. ತಮ್ಮ ತಮ್ಮ ಗೆಜ್ಜೆಗಳನ್ನು ದೇವರ ಮುಂದೆ ಇರಿಸಿ, ಅವುಗಳಿಗೆ ಪೂಜೆ ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆದು, ಗೆಜ್ಜೆಗಳನ್ನು ಕಟ್ಟಿ ನೃತ್ಯ ಮಾಡುವುದು ಈ ಗೆಜ್ಜೆಪೂಜೆಯ ವಿಶೇಷತೆಯಾಗಿದೆ. ಗೆಜ್ಜೆ ಅನ್ನೋದು ಭರತನಾಟ್ಯ ಕಲಾವಿದರಿಗೆ ದೇವರ ಸಮಾನವಾಗಿದ್ದು, ಇದೇ ಕಾರಣಕ್ಕೆ ಗೆಜ್ಜೆಗೆ ಭರತನಾಟ್ಯದಲ್ಲಿ ಅತ್ಯಂತ ಮಹತ್ವವನ್ನೂ ನೀಡಲಾಗುತ್ತದೆ. ಕಳೆದ ಮೂವತ್ತು ವರ್ಷಗಳಿಂದ ಭರತನಾಟ್ಯ ಕಲೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಮೂಕಾಂಬಿಕಾ ಕಲ್ಚರಲ್ ಆಕಾಡಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಅವರ ನೂರಾರು ಸಂಖ್ಯೆಯ ಶಿಷ್ಯಯಂದಿರು ಗುರುಗಳ ಆಶೀರ್ವಾದವನ್ನು ಪಡೆಯಲೂ ಇದೇ ದಿನದಲ್ಲಿ ಗೆಜ್ಜೆಪೂಜೆ ಮಾಡಿಸಿಕೊಳ್ಳುತ್ತಾರೆ.

ನವರಾತ್ರಿಯ 7ನೇ ದಿನದಿಂದ ಶಾರದೆ ಮಾತೆಯ ಪೂಜೆಯ ಸಂದರ್ಭ ಕಲಾವಿದರು ತಮ್ಮ ತಮ್ಮ ವಿದ್ಯೆಯನ್ನು ನೀಡಿದ ಗುರುಗಳಿಗೆ ಗುರುಕಾಣಿಕೆ ನೀಡಿ ಆಶೀರ್ವಾದ ಪಡೆಯುವುದು ವಿಶೇಷ. ನಮ್ಮಲ್ಲಿ ಅಷ್ಟಮಿಯ ದಿನ ಗೆಜ್ಜೆ ಪೂಜೆ ಮಾಡಿದ್ದೇವೆ. ನಮ್ಮಲ್ಲಿ ಗೆಜ್ಜೆ ದೇವರಿಗೆ ಸಮಾಜ. ಪೂಜೆಯಲ್ಲಿ ನಟರಾಜ, ಸರಸ್ವತಿ ಮತ್ತು ಕಲೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಇಟ್ಟು ಅವುಗಳಿಗೆ ಮೊದಲು ಪೂಜೆ ನೆರವೇರಿಸಲಾಗುತ್ತದೆ. ಆ ಬಳಿಕ ಗೆಜ್ಜೆಪೂಜೆ ನೆರವೇರಿಸಿ, ಗುರುಗಳಿಗೆ ಗುರು ದಕ್ಷಿಣೆಯನ್ನೂ ನೀಡಲಾಗುತ್ತದೆ. ಗುರುವಿನ ಆಶೀರ್ವಾದವನ್ನು ಪಡೆದ ಬಳಿಕ ಗೆಜ್ಜೆಗಳನ್ನು ಕಣ್ಣಿಗೆ ಒತ್ತಿಕೊಂಡು ಬಳಿಕ ಗೆಜ್ಜೆ ಕಟ್ಟಿ ನೃತ್ಯ ಆರಂಭಿಸಲಾಗುತ್ತದೆ.
ವಿದ್ವಾನ್ ಬಿ ದೀಪಕ್ ಕುಮಾರ್
ಗೆಜ್ಜೆಪೂಜೆಗಾಗಿ ವಿದೇಶದಿಂದ ಊರಿಗೆ ಮರಳಿದ ಶಿಷ್ಯೆ
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಶಿಷ್ಯಾರಾಗಿದ್ದ ಬೆಳ್ತಂಗಡಿ ಮೂಲದ ಪೂರ್ವಿ ಅವರು ಮಧ್ಯ ಏಷ್ಯಾದ ಒಂದು ದೇಶವಾಗಿರುವ ಉಜ್ಬೇಕಿಸ್ತಾನ್‌ನಲ್ಲಿ ಎಂಬಿಬಿಎಸ್ ಪದವಿ ಶಿಕ್ಷಣ ಪಡೆಯುತ್ತಿದ್ದು, ನವರಾತ್ರಿಯ ಸಂದರ್ಭ ಗೆಜ್ಜೆ ಪೂಜೆಗಾಗಿಯೇ ಊರಿಗೆ ಮರಳಿದ್ದು, ಗೆಜ್ಜೆಪೂಜೆಯಲ್ಲಿ ಭಾಗಿಯಾಗಿದ್ದರು, ಇವರು ಸಂಸ್ಥೆಯ ಕೊಕ್ಕಡ ಶಾಖೆಯ ವಿದ್ಯಾರ್ಥಿಯಾಗಿದ್ದರು.