ತಿಂಗಳಾಡಿ ನವೋದಯ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಪಿಡಿಓಗೆ ಬೀಳ್ಕೊಡುಗೆ ಸಮಾರಂಭ : ದರಪಟ್ಟಿ ಬಿಡುಗಡೆ ಕಾರ್ಯಕ್ರಮ

0

ಸಮಾಜದ ಎಲ್ಲರಿಗೆ ಬೇಕಾದವರು ರಿಕ್ಷಾ ಚಾಲಕರು : ಎಸ್.ಐ ಸುಶ್ಮಾ

ಪುತ್ತೂರು: ನವೋದಯ ರಿಕ್ಷಾ ಚಾಲಕ, ಮಾಲಕರ ಸಂಘ ತಿಂಗಳಾಡಿ ಇದರ ಆಶ್ರಯದಲ್ಲಿ ಕೆದಂಬಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ರಿಕ್ಷಾ ಬಾಡಿಗೆ ದರಪಟ್ಟಿ ಬಿಡುಗಡೆ ಕಾರ್ಯಕ್ರಮ ಸೆ.೩೦ರಂದು ಕೆದಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ನವೋದಯ ರಿಕ್ಷಾ ಚಾಲಕ, ಮಾಲಕರ ಸಂಘ ತಿಂಗಳಾಡಿ ಇದರ ಅಧ್ಯಕ್ಷ ವಿಠಲ ರೈ ಮಿತ್ತೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ನವೋದಯ ರಿಕ್ಷಾ ಚಾಲಕ, ಮಾಲಕರ ಸಂಘ ತಿಂಗಳಾಡಿ ಇದರ ಗೌರವಾಧ್ಯಕ್ಷ ಕೃಷ್ಣಕುಮಾರ್ ರೈ ಗುತ್ತು ಮಾತನಾಡಿ ತಿಂಗಳಾಡಿ ನವೋದಯ ರಿಕ್ಷಾ ಚಾಲಕ ಮಾಲಕರ ಸಂಘ ಉತ್ತಮ ಸಂಘಟನೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಪ್ರಾಮಾಣಿಕವಾಗಿ ತಮ್ಮ ವೃತ್ತಿ ಧರ್ಮವನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು. ತಿಂಗಳಾಡಿಯಲ್ಲಿ ರಿಕ್ಷಾ ನಿಲ್ದಾಣ ಬೇಕೆಂಬ ಚಾಲಕರ ಬೇಡಿಕೆಗೆ ಪೂರಕವಾಗಿ ನಾವು ಸ್ಪಂದಿಸಿದ್ದೇವೆ, ರಿಕ್ಷಾ ಚಾಲಕರ ಅವಶ್ಯಕತೆ ಈ ಸಮಾಜಕ್ಕೆ ಸದಾ ಇದೆ ಎಂದು ಅವರು ಹೇಳಿದರು.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಜಿ ಭಂಡಾರಿ ಮಾತನಾಡಿ ಆಟೋ ರಿಕ್ಷಾ ಚಾಲಕರು ತಮ್ಮದೇ ಆದ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದು ಅವರಲ್ಲಿ ಬಡವರ ಪರವಾದ ಕಾಳಜಿಯೂ ಇರುವುದನ್ನು ನಾನು ನೋಡಿದ್ದೇನೆ, ರಿಕ್ಷಾ ಚಾಲಕರು ಎಲ್ಲರಿಗೆ ಬೇಕಾದವರು ಎಂದು ಹೇಳಿದರು. ಚಾಲಕರೆಲ್ಲರೂ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಏನಾದರೂ ಅಪಘಾತ, ಅವಘಡಗಳು ಆದ ಸಂದರ್ಭದಲ್ಲಿ ಭಾರೀ ಸಮಸ್ಯೆ ಆಗುತ್ತದೆ ಎಂದ ಅವರು ಗ್ರಾಮದ ಅಧಿಕಾರಿಯ ಕಾರ್ಯವನ್ನು ಗುರುತಿಸಿ ಬೀಳ್ಕೊಟ್ಟ ರಿಕ್ಷಾ ಚಾಲಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಿಂಗಳಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ರೈ ಮಠ ಮಾತನಾಡಿ ಆಟೋ ರಿಕ್ಷಾ ಚಾಲಕರು ಎಲ್ಲರಿಗೆ ಬೇಕಾದವರು, ಅಗತ್ಯ ಸಂದರ್ಭಗಳಲ್ಲಿ ರಿಕ್ಷಾ ಚಾಲಕರ ಸೇವೆಯನ್ನು ಯಾರೂ ಮರೆಯುವಂತಿಲ್ಲ ಎಂದು ಅವರು ಹೇಳಿದರು.

ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ರಿಕ್ಷಾ ಚಾಲಕರು ಆಪತ್ಕಾಲದ ಆಪತ್ಬಾಂಧವರಾಗಿದ್ದು ತಮ್ಮ ವೃತ್ತಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವವರಾಗಿದ್ದಾರೆ, ನವೋದಯ ರಿಕ್ಷಾ ಚಾಲಕ ಮಾಲಕ ಸಂಘದವರ ಒಗ್ಗಟ್ಟು ಮತ್ತು ಸಮಾಜದ ಪರವಾದ ಕಾಳಜಿ ಮಾದರಿಯಾಗಿದೆ ಎಂದು ಹೇಳಿದರು.

ಪತ್ರಕರ್ತ ಸಿಶೇ ಕಜೆಮಾರ್ ಮಾತನಾಡಿ ಆಟೋ ರಿಕ್ಷಾ ಚಾಲಕರು ಊರಿನ ನಾಡಿಮಿಡಿತಗಳನ್ನು ಅರಿತವರಾಗಿದ್ದು ಗ್ರಾಮದ ಯಾವ ರಸ್ತೆ ಹೇಗಿದೆ? ಯಾರ ಮನೆ ಎಲ್ಲಿದೆ ಎಂದೆಲ್ಲಾ ಸ್ಪಷ್ಟ ಚಿತ್ರಣ ಅವರಲ್ಲಿರುತ್ತದೆ, ಹಾಗಾಗಿ ಅಭಿವೃದ್ಧಿಗೂ ರಿಕ್ಷಾ ಚಾಲಕರಿಗೂ ಒಂದು ರೀತಿಯ ಸಂಬಂಧವಿದೆ ಎಂದು ಹೇಳಿದರು. ಪಿಡಿಓ ಅಜಿತ್ ಜಿ.ಕೆ ಅವರನ್ನು ಬೀಳ್ಕೊಡುವ ಕಾರ್ಯ ಶ್ಲಾಘನೀಯ ಎಂದ ಅವರು ತಿಂಗಳಾಡಿಯಲ್ಲಿ ರಿಕ್ಷಾ ನಿಲ್ದಾಣ ಆಗುವಲ್ಲಿ ಅಜಿತ್ ಜಿ.ಕೆ ಅವರ ಕೊಡುಗೆ ಬಹಳಷ್ಟಿದೆ ಎಂದರು.

ಬೀಳ್ಕೊಡುಗೆ ಸನ್ಮಾನ
ಕೆದಂಬಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಸಂಘದ ಪದಾಧಿಕಾರಿಗಳು, ಅತಿಥಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿದ ಪಿಡಿಓ ಅಜಿತ್ ಜಿ.ಕೆ ಮಾತನಾಡಿ ರಿಕ್ಷಾ ಚಾಲಕರು ಸಮಾಜದ ಆಸ್ತಿ, ಅವರ ಸೇವೆಯನ್ನು ವರ್ಣಿಸಲು ಸಾಧ್ಯವಿಲ್ಲ ಎಂದರು. ತಿಂಗಳಾಡಿಯಲ್ಲಿ ಆಟೋ ರಿಕ್ಷಾ ನಿಲ್ದಾಣ ಮಾಡುವ ಸಂದರ್ಭದಲ್ಲಿ ನಾನು ನನ್ನಿಂದಾಗುವ ಸಹಕಾರ ಕೊಟ್ಟಿದ್ದೇನೆ, ಇಲ್ಲಿನ ರಿಕ್ಷಾ ಚಾಲಕರೆಲ್ಲರೂ ಬಹಳ ಒಳ್ಳೆಯವರು, ನನ್ನನ್ನು ಗುರುತಿಸಿ ಸನ್ಮಾನಿಸಿ ಬೀಳ್ಕೊಟ್ಟ ನಿಮಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ದರಪಟ್ಟಿ ಬಿಡುಗಡೆ
ರಿಕ್ಷಾ ಬಾಡಿಗೆಯ ನೂತನ ದರಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಅತಿಥಿಗಳು ದರಪಟ್ಟಿಯನ್ನು ಪ್ರದರ್ಶಿಸಿದರು.

ತಿಂಗಳಾಡಿ ಮಸೀದಿಯ ಅಧ್ಯಕ್ಷ ಸಿದ್ದೀಕ್ ತಿಂಗಳಾಡಿ, ವರ್ತಕರ ಸಂಘ ತಿಂಗಳಾಡಿ ಇದರ ಅಧ್ಯಕ್ಷ ವಿಜಯ ರೈ ಸಣಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೋದಯ ಆಟೋ ಚಾಲಕ ಮಾಲಕರ ಸಂಘದ ಉಪಾಧ್ಯಕ್ಷ ನೌಶಾದ್ ತಿಂಗಳಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here