ಕಾರಂತರ ಸ್ಮರಣೆ, ನೃತ್ಯ ನಮನ, ಯಕ್ಷ ನಮನ, ರಂಗ ನಮನ, ನಾಟಕ ಪ್ರದರ್ಶನ
ಡಾ|ಬಿ.ಎ.ವಿವೇಕ್ ರೈ, ಡಾ|ಎನ್.ಸುಕುಮಾರ ಗೌಡರಿಗೆ ಡಾ|ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ
ಪುತ್ತೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಉಪವಿಭಾಗ, ಡಾ|ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ, ‘ನಡೆದಾಡುವ ವಿಶ್ವಕೋಶ’ ಎಂದೇ ಪ್ರಖ್ಯಾತರಾದ ‘ಕಡಲತಡಿಯ ಭಾರ್ಗವ’ ಡಾ|ಕೋಟ ಶಿವರಾಮ ಕಾರಂತರ 124ನೇ ಜನ್ಮದಿನಾಚರಣೆ ಮತ್ತು 2024 ಹಾಗೂ 2025ನೇ ಸಾಲಿನ ಡಾ|ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಅ.10ರಂದು ಪೂರ್ವಾಹ್ನ 9:30ರಿಂದ ರಾತ್ರಿ 8:30ರ ತನಕ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುತ್ತೂರು ಬಾಲವನ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.2024ನೇ ಸಾಲಿನ ಡಾ|ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಶ್ರಾಂತ ಉಪಕುಲಪತಿ,ಹಿರಿಯ ಸಾಹಿತಿಯೂ ಆಗಿರುವ ಡಾ|ಬಿ.ಎ.ವಿವೇಕ ರೈರವರಿಗೆ ಹಾಗೂ 2025ನೇ ಸಾಲಿನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಸಾಹಿತಿಯೂ ಆಗಿರುವ ಡಾ|ಎನ್.ಸುಕುಮಾರ್ ಗೌಡರವರಿಗೆ ಪ್ರದಾನ ಮಾಡಲಾಗುವುದು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಸಹಾಯಕ ಆಯುಕ್ತರ ಕಛೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಸ್ಟೆಲ್ಲಾ ವರ್ಗೀಸ್ ಅವರು,ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಕಾರಂತ ಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭದ ಸಭಾಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಇವರ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಚಿವರಾದ ಶಿವರಾಜ ಎಸ್.ತಂಗಡಗಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯರಾದ ಡಾ|ವೀರೇಂದ್ರ ಹೆಗ್ಗಡೆ,ಶಾಸಕರಾದ ಮಂಗಳೂರು ದಕ್ಷಿಣ ಕ್ಷೇತ್ರದ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಡಾ.ವೈ.ಭರತ್ ಶೆಟ್ಟಿ, ಬೆಳ್ತಂಗಡಿ ಕ್ಷೇತ್ರದ ಹರೀಶ್ ಪೂಂಜ, ಬಂಟ್ವಾಳ ಕ್ಷೇತ್ರದ ರಾಜೇಶ್ ನಾಯ್ಕ್, ಮೂಡಬಿದ್ರೆ ಕ್ಷೇತ್ರದ ಉಮಾನಾಥ ಕೋಟ್ಯಾನ್, ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್., ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾಲ ನಾರಾಯಣ ರಾವ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ.ಹೆಚ್.ರೇವಣ್ಣ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ||ಎಂ.ಪಿ.ಶ್ರೀನಾಥ್, ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಮಚಂದ್ರ ಅಮಳ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪುತ್ತೂರು ನಗರಸಭಾ ಸದಸ್ಯರಾದ ದೀಕ್ಷಾ ಪೈ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸವಣೂರು ಸೀತಾರಾಮ ರೈ, ಡಾ|ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತ, ಪುತ್ರಿಯರಾದ ಕ್ಷಮಾ ರಾವ್, ಮಾಳವಿಕಾ ಕಪೂರ್ರವರು ಗೌರವ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಲಿರುವ ಡಾ|ಬಿ.ಎ.ವಿವೇಕ್ ರೈರವರ ಬಗ್ಗೆ ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ|ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಡಾ|ಎನ್.ಸುಕುಮಾರ ಗೌಡರ ಬಗ್ಗೆ ನಿವೃತ್ತ ಪ್ರಾಂಶುಪಾಲ ಪ್ರೊ|ಕ್ಸೇವಿಯರ್ ಡಿ’ಸೋಜರವರು ಅಭಿನಂದನಾ ಭಾಷಣ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ತಾಲೂಕಿನ ಸರಕಾರಿ ಹಾಗೂ 7 ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರೂ ಭಾಗವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮ ಸಂಯೋಜಕರಾದ ರಮೇಶ್ ಉಳಯ ಮಾತನಾಡಿ, ಹಿರಿಯ ಸಾಹಿತಿಗಳು ಮತ್ತು ಕಾರಂತರ ಸಹೋದರ ಸಂಬಂಧಿ ಎಂ.ಶಾಂತರಾಮ್ ರಾವ್ರವರು ಕಾರಂತರಿಗೆ ನುಡಿ ನಮನ ಸಲ್ಲಿಸಲಿದ್ದಾರೆ.ಬೆಳಿಗ್ಗೆ 9.30ರಿಂದ 10.30ರವರೆಗೆ ಸುಳ್ಯಪದವು ಪದಡ್ಕ ವಿಶ್ವಕಲಾ ನಿಕೇತನದಿಂದ ಕಾರಂತರಿಗೆ ನೃತ್ಯ ನಮನ ನಡೆಯಲಿದೆ.ಅತಿಥಿಗಳನ್ನು ಬಾಲವನದ ಮುಖ್ಯದ್ವಾರದಿಂದ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರುವುದು, ಬಳಿಕ ಕಾರಂತರ ಪ್ರತಿಮೆಗೆ ಪುಷ್ಪಾರ್ಚನೆ, ಕಾರಂತರ ಮನೆಯಲ್ಲಿ ದೀಪ ಪ್ರಜ್ವಲನೆ, ಕೊಂಬೆಟ್ಟು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಲಿದೆ. ಅಪರಾಹ್ನ 3ರಿಂದ ನಡೆಯುವ ‘ಕಾರಂತರಿಗೆ ಯಕ್ಷ ನಮನ’ ಕಾರ್ಯಕ್ರಮದಲ್ಲಿ ಭಾಸ್ಕರ್ ಬಾರ್ಯರವರ ನಿರ್ದೇಶನದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾಸಂಘದಿಂದ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ, ಸಂಜೆ 6.30ರಿಂದ ನಡೆಯುವ ‘ಕಾರಂತರಿಗೆ ರಂಗನಮನ’ ಕಾರ್ಯಕ್ರಮದಲ್ಲಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರು, ನೀನಾಸಂ ಹೆಗ್ಗೋಡು ಇದರ ನಿವೃತ್ತ ಪ್ರಾಧ್ಯಾಪಕರಾದ ಬಿ.ಆರ್.ವೆಂಕಟರಮಣ ಐತಾಳ್ರವರು ಕಾರಂತರ ರಂಗ ಸ್ಮರಣೆ ಮಾಡಲಿದ್ದಾರೆ.ನಂತರ ಕಾರ್ಕಳ ಯಕ್ಷರಂಗಾಯಣದ ಕಲಾವಿದರಿಂದ ಕಾರಂತರ ರಚನೆಯ ‘ಸೋಮಿಯ ಸೌಭಾಗ್ಯ’ ಎಂಬ ಗೀತಾ ನಾಟಕ ನಡೆಯಲಿದೆ.ಕಾರ್ಯಕ್ರಮದಲ್ಲಿ ಡಾ|ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿಗಳ ಪ್ರದರ್ಶನ ನಡೆಯಲಿದೆ ಎಂದು ಎಸಿಯವರು ಹೇಳಿದರು.
ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಯೋಜಕರಾದ ರಮೇಶ್ ಉಳಯ ಸ್ವಾಗತಿಸಿ, ಜಗನ್ನಾಥ ಅರಿಯಡ್ಕ ವಂದಿಸಿದರು.
ಡಾ|ಶಿವರಾಮ ಕಾರಂತ ಬಾಲವನ ಪ್ರಶಸ್ತಿ-2024ಕ್ಕೆ ಸಾಹಿತ್ಯ ಕ್ಷೇತ್ರದ ಸಾಧಕ ಡಾ|ಬಿ.ಎ.ವಿವೇಕ್ ರೈ
ಪುತ್ತೂರು ತಾಲೂಕಿನ ಪುಣಚ ಗ್ರಾಮದ ಅಗ್ರಾಳ ಪುರಂದರ ರೈ ಮತ್ತು ಯಮುನಾ ದಂಪತಿಯ ಪುತ್ರರಾದ ವಿವೇಕ್ ರೈಯವರ ಸಾಹಿತ್ಯ ಕೃಷಿಗೆ ಅವರ ತಂದೆಯವರೇ ಮೊದಲ ಗುರು. ಪುಣಚ ಗ್ರಾಮದ ಪರಿಯಾಲ್ತಡ್ಕ, ಪುತ್ತೂರು ಕೊಂಬೆಟ್ಟು ಪ್ರೌಢಶಾಲೆಗಳಲ್ಲಿ ಪ್ರಾಥಮಿಕ,ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ ಪುತ್ತೂರು ಸಂತ ಫಿಲೋಮಿನ ಕಾಲೇಜಿನಿಂದ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಮೊದಲ ಸ್ಥಾನದಲ್ಲಿ ಪಡೆದರು.ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ|ಹಾ.ಮ ನಾಯಕರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆ ವಿಶ್ವವಿದ್ಯಾನಿಲಯಗಳ ಘನತೆಯನ್ನು ಹೆಚ್ಚಿಸಿದವರು.ಇದರೊಂದಿಗೆ ಜರ್ಮನಿಯ ವ್ಯೂತ್ಸ್ ಬರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಯುರೋಪಿಯನ್ ಕನ್ನಡಿಗರಿಗೆ ಕನ್ನಡದ ಕಂಪನ್ನು ಪಸರಿಸಿದ ಕೀರ್ತಿಯೂ ಇವರದು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಲಹಾ ಸಮಿತಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಗಳ ಅಧ್ಯಕ್ಷರಾಗಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕೇಂದ್ರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ, ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರಗಳ ಸದಸ್ಯರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಂಗ, ಎಸ್ಡಿಎಮ್ ತುಳು ಪೀಠ, ಡಾ|ಶಿವರಾಮ ಕಾರಂತ ಪೀಠ ಇವುಗಳ ನಿರ್ದೇಶಕರಾಗಿ ಇವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದುದು.ಗಿಳಿಸೂವೆ, ಇರುಳುಗಣ್ಣು, ಹಿಂದಣ, ರಂಗದೊಳಗಿನ ಬಹಿರಂಗ, ಬಾಗಿಲನು ತೆರೆದು, ನೆತ್ತರ ಮದುವೆ, ಜರ್ಮನಿಯ ಒಳಗಿನಿಂದ ಸೇರಿದಂತೆ ಕನ್ನಡ ಇಂಗ್ಲಿಷ್ ತುಳು ಭಾಷೆಯಲ್ಲಿ ಸುಮಾರು ೫೦ಕ್ಕಿಂತಲೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ತುಳು ಅಕಾಡೆಮಿ ಗೌರವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಡಾ ಹಾ.ಮಾ ನಾಯಕ ಗೌರವ ಪ್ರಶಸ್ತಿ, ಪೊಳಲಿ ಸೀನಪ್ಪ ಹೆಗ್ಗಡೆ ಪ್ರಶಸ್ತಿ, ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಚಂದನ ದೂರದರ್ಶನದ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಗೌರವ ಪ್ರಶಸ್ತಿ, ಮಣಿಪಾಲ ವಿಶ್ವವಿದ್ಯಾನಿಲಯದ ಹೊಸ ವರ್ಷದ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತರ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಪ್ರಶಸ್ತಿ, ಡಾ|ಜಿ.ಶಂ ಪರಮಶಿವಯ್ಯ ಜಾನಪದ ಪ್ರಶಸ್ತಿ, ಶ್ರೀಸಾಹಿತ್ಯ ಪ್ರಶಸ್ತಿ, ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಽಕಾರದ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.ಕರ್ನಾಟಕ ಜಾನಪದ ಸಮ್ಮೇಳನ, ಕರ್ನಾಟಕ ದೇಸಿ ಸಮ್ಮೇಳನ, ಕುವೈಟ್ ತುಳು ಸಮ್ಮೇಳನ, ಆಳ್ವಾಸ್ ನುಡಿಸಿರಿಗಳ ಅಧ್ಯಕ್ಷತೆಯ ಗೌರವವೂ ಸಂದಿದೆ.ಇದೀಗ ಇವರ ಸಾಹಿತ್ಯ ಸಾಧನೆಗೆ ಕನ್ನಡ ಸಾರಸ್ವತ ಲೋಕವನ್ನು ವಿಶ್ವಕ್ಕೆ ಪರಿಚಯಿಸಿದ ಡಾ|ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಕೊಡ ಮಾಡುವ ಡಾ|ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿ-2024 ಡಾ|ವಿವೇಕ್ ರೈಯವರ ಮುಡಿಯೇರಲಿದೆ.
ಡಾ|ಶಿವರಾಮ ಕಾರಂತ ಬಾಲವನ ಪ್ರಶಸ್ತಿ-2025ಕ್ಕೆ ಶಿಕ್ಷಣ ಕ್ಷೇತ್ರದ ಸಾಧಕ ಡಾ|ಎನ್.ಸುಕುಮಾರ ಗೌಡ
ಪ್ರಾಥಮಿಕ ಶಾಲಾ ಅಧ್ಯಾಪಕ ಜಾಲ್ಸೂರಿನ ನಂಗಾರು ರಾಮಯ್ಯ ಗೌಡ ಮತ್ತು ರಾಮಕ್ಕ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯವನಾಗಿ ಜನವರಿ 2, 1941ರಲ್ಲಿ ಜನಿಸಿದ ಸುಕುಮಾರ ಗೌಡರು ಸುಳ್ಯದ ಕನಕಮಜಲು ಶಾಲೆ, ಪುತ್ತೂರಿನ ಲಿಟ್ಲ್ ಫ್ಲವರ್ ಶಾಲೆ, ಸಂತ ಫಿಲೋಮಿನಾ ಪ್ರೌಢಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದರು.ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಮೊದಲ ತಂಡದ ಪದವೀಧರರು.ನಂತರ ಮಂಗಳೂರಿನ ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ಪದವಿ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಎಂ.ಎ.ಪದವಿ, ಮೈಸೂರು ವಿಶ್ವವಿದ್ಯಾನಿಲಯದ ಎಂ.ಎಡ್ ಪದವಿ ಪಡೆದು, ವಿರಾಜಪೇಟೆ, ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆ, ಮಣಿಪಾಲ ಕಾಲೇಜ್ ಆಫ್ ಎಜುಕೇಷನ್ ಮುಂತಾದ ಕಡೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.ಆಂಗ್ಲ ಭಾಷೆಯಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಇವರು ಅನೇಕ ಅಂತರ್ರಾಷ್ಟ್ರೀಯ ಮಟ್ಟದ ಪ್ರಬಂಧಗಳನ್ನು ಮಂಡಿಸಿ ರಾಷ್ಟ್ರದಲ್ಲಿ ಗುರುತಿಸಿಕೊಂಡರು.
ಉನ್ನತ ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ತೆರಳಿದ ಗೌಡರು ಅಲ್ಲಿ ಬದಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಲ್ಲಿನ ಅನೇಕ ಶಿಕ್ಷಣ ತತ್ವಗಳನ್ನು ಮೈಗೂಡಿಸಿಕೊಂಡು ಕೆನಡಾದ ಟೊರೆಂಟೊ ವಿಶ್ವವಿದ್ಯಾನಿಲಯದಿಂದ ವಿಶ್ವದ ಖ್ಯಾತ ಶಿಕ್ಷಣ ತಜ್ಞ ಫ್ರಾಂಕ್ ಸ್ಮಿತ್ರವರ ಮಾರ್ಗದರ್ಶನದಲ್ಲಿ ‘ಭಾಷಾ ಶಿಕ್ಷಣದ ಪಠ್ಯ ಪದ್ಧತಿ’ ಎಂಬ ವಿಷಯದಲ್ಲಿ ಪಿಹೆಚ್ಡಿ ಪದವಿ ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರರಾದರು.ಎಂಸಿ ಗಿಲ್ ಯುನಿವರ್ಸಿಟಿ ಮೊಂಟ್ರಿಯಲ್ ಇದರಿಂದ ಎಸ್ಎಸ್ಎಚ್ಆರ್ಸಿ ಕೆನಡಾ ಪೋಸ್ಟ್ ಡಾಕ್ಟೊರಿಯಲ್ ರಿಸರ್ಚ್ ಫೆಲೋ, ಕೆನಡಾದ ಕ್ವೀನ್ ಯುನಿವರ್ಸಿಟಿಯ ಎಂ.ಎಡ್ ಪದವಿ,ಕೆನಡಾದ ಯಾರ್ಕ್ ಯುನಿವರ್ಸಿಟಿಯಿಂದ ಡಿಪ್ಲೊಮಾ ಇನ್ ಎಜುಕೇಶನ್ ಆಫ್ ಎಕ್ಸೆಪ್ಷನಲ್ ಸ್ಟೂಡೆಂಟ್ಸ್, ಟೊರೆಂಟೊದ ರೈಸನ್ ಓಪನ್ ಕಾಲೇಜ್ನಿಂದ ಸರ್ಟಿಫಿಕೇಟ್ ಇನ್ ಎಮೋಷನಲ್ ಡಿಸ್ಟೆನ್ಸ್ ಇನ್ ಚಿಲ್ಡ್ರನ್ ಹೀಗೆ ಹಲವಾರು ಫೆಲೋ ಪ್ರಮಾಣ ಪತ್ರ ಪದವಿಗಳಿಂದ ಪುರಸ್ಕೃತರಾದವರು.
ಶಿಕ್ಷಣ ಸಾಹಿತ್ಯದಲ್ಲಿ ಗುಣಶೋಧ,ಕಲಿಕೆ, ಮಗು ಮನೆಯಿಂದ ಶಾಲೆಗೆ, ಸಮರ್ ಹಿಲ್, ಪ್ರಾಬ್ಲೆಮ್ಸ್ ಆಂಡ್ ಪ್ರಾಸ್ಪೆಕ್ಟ್ಸ್ ಆಫ್ ಅರ್ ಎಜುಕೇಶನ್, ಲ್ಯಾಂಗ್ವೇಜ್ ಫಾರ್ ಡಾಕ್ಟರ್ಸ್, ಎ ಶನ್ಶಿಯಲ್ ಇಂಗ್ಲಿಷ್, ಲರ್ನಿಂಗ್ ಆಂಡ್ದ ಲರ್ನರ್, ಲ್ಯಾಂಗ್ವೇಜ್ ಅವೇರ್ನೆಸ್ ಆಂಡ್ ಲಿಟ್ರಸಿ ಡೆವಲಪ್ಮೆಂಟ್, ಎಸ್ಸೆಸ್ ಆನ್ ಎಜುಕೇಶನ್ ಮುಂತಾದ ಪ್ರಬುದ್ಧ ಪುಸ್ತಕಗಳನ್ನು ನೀಡಿದರು. ತಮ್ಮ ಅನೇಕ ಪ್ರಬುದ್ಧ ಪ್ರಬಂಧಗಳು ಭಾರತ, ಕೆನಡಾ, ಅಮೇರಿಕಾದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.ಇವರ ಪರಿಚಯವು ಯುಎಸ್ಎಯ ಮಾರ್ಕಿಸ್ ಪಬ್ಲಿಕೇಶನ್ನಿಂದ ಪ್ರಕಟವಾಗುವ ‘ಹೂ ಇಂದ ವರ್ಡ್-2000’, ಅಮೆರಿಕನ್ ಬಯೋಗ್ರಫಿಕಲ್ ಇನ್ಸ್ಟಿಟ್ಯೂಟ್, ಇಂಗ್ಲೆಂಡಿನ ಕ್ಯಾಮ್ಬ್ರಿಡ್ಜ್ ಇಂಟರ್ನ್ಯಾಷನಲ್ ಬಯೋಗ್ರಫಿ ಸೆಂಟರ್ನ ಔಟ್ ಸ್ಟ್ಯಾಂಡಿಂಗ್ ಸ್ಕಾಲರ್ಸ್ ಆಫ್ ದ 20th ಸೆಂಚುರಿಯಲ್ಲಿ ಪ್ರಕಟಗೊಂಡಿರುವುದು ಹೆಮ್ಮೆಯ ಸಂಗತಿ. ಹತ್ತು ಹಲವು ಗೌರವ ಸಮ್ಮಾನಗಳಿಂದ ಪುರಸ್ಕೃತರಾದ ಇವರು ಕಟೀಲ್ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಗೂ ಭಾಜನರಾಗಿದ್ದರು.ಇವರ ಪುಸ್ತಕ ‘ದಿ ಪ್ರಾಬ್ಲೆಮ್ಸ್ ಆಂಡ್ ಪ್ರಾಸ್ಪೆಟ್ಸ್ ಆಫ್ ಆರ್ ಎಜುಕೇಶನ್’ನ್ನು ಸ್ವತಹ ಶಿವರಾಮ ಕಾರಂತರೇ ಕನ್ನಡಕ್ಕೆ ಭಾಷಾಂತರಿಸಿರುವುದು ಕನ್ನಡ ಸರಸ್ವತ ಲೋಕಕ್ಕೆ ಹೆಮ್ಮೆಯ ಸಂಗತಿ.
ಇದೀಗ ಇವರ ಶಿಕ್ಷಣ ಸಾಧನೆಗೆ ಕನ್ನಡ ಸಾರಸ್ವತ ಲೋಕವನ್ನು ವಿಶ್ವವಿಖ್ಯಾತಗೊಳಿಸಿದ ಡಾ|ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಕೊಡಮಾಡುವ ಡಾ|ಕೋಟಾ ಶಿವರಾಮ ಕಾರಂತರ ಬಾಲವನ ಪ್ರಶಸ್ತಿ-2025 ಇವರ ಮುಡಿಯೇರಲಿದೆ.