ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಪುತ್ತೂರುನಲ್ಲಿ 75% ಪೂರ್ಣ

0

ಅ.12ರ ತನಕ ವಿಸ್ತರಣೆ:ನಾಳೆಯಿಂದ ಶಾಲಾ ಅವಧಿ ಬದಲಾವಣೆ


ಪುತ್ತೂರು:ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಅ.7ರಂದು ಕೊನೆಗೊಳ್ಳಬೇಕಿತ್ತಾದರೂ ಸಮೀಕ್ಷೆ ಪೂರ್ಣಗೊಳ್ಳದೇ ಇರುವುದರಿಂದ ಅ.12ರ ತನಕ ವಿಸ್ತರಣೆ ಮಾಡಲಾಗಿದೆ.ಈ ಮಧ್ಯೆ 15 ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಶೇ.75ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಮಾಹಿತಿ ಲಭಿಸಿದೆ.


ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕ್ರಿಯೆಗಳಿಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿ ಹೊರತುಪಡಿಸಿ ಎಲ್ಲ ಕಡೆಗಳಲ್ಲಿಯೂ ಸೆ.22ರಂದು ಚಾಲನೆ ನೀಡಲಾಗಿತ್ತು.ಸರ್ವರ್ ಸಮಸ್ಯೆ ಸಹಿತ ವಿವಿಧ ಕಾರಣಗಳಿಂದಾಗಿ ಆರಂಭದ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ಸಮೀಕ್ಷೆ ಪೂರ್ಣಗೊಂಡಿರಲಿಲ್ಲ.ಸಮೀಕ್ಷೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರೂಪಿಸಿದ ಆಪ್‌ನಲ್ಲಿ ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸೇರಿದಂತೆ ತಾಂತ್ರಿಕ ಸಮಸ್ಯೆಗಳ ನಡುವೆಯೂ 15 ದಿನಗಳ ಕಾಲ ನಡೆದ ಸಮೀಕ್ಷೆಯ ಒಂದು ಹಂತ ಅ.7ರಂದು ಮುಕ್ತಾಯಗೊಳ್ಳಬೇಕಿತ್ತು.ಮನೆ ಮನೆ ಸಮೀಕ್ಷೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಶಿಕ್ಷಕರು, ಅಂಗನವಾಡಿ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಸೇರಿ ಒಟ್ಟು 378 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಒಬ್ಬ ಸಮೀಕ್ಷಕನಿಗೆ 140-150 ಮನೆಗಳ ಬ್ಲಾಕ್‌ಗಳನ್ನು ನೀಡಲಾಗಿದೆ.ಮೊಬೈಲ್ ಆಪ್‌ಗಳ ಮೂಲಕ ನಡೆದ ಸಮೀಕ್ಷೆಯಲ್ಲಿ ಮನೆಯ ಎಲ್ಲಾ ಮಾಹಿತಿಗಳನ್ನು ಆಪ್‌ಗಳಲ್ಲಿಯೇ ಎಂಟ್ರಿ ಮಾಡಬೇಕಾಗಿದೆ.


ತಾಲೂಕಿನಲ್ಲಿ ಶೇ.75 ಸಮೀಕ್ಷೆ ಪೂರ್ಣ:
ಸರ್ವರ್ ಸಮಸ್ಯೆ ಸೇರಿದಂತೆ ತಾಂತ್ರಿಕ ಅಡಚಣೆಗಳ ಮಧ್ಯೆಯೂ ಪುತ್ತೂರು ತಾಲೂಕಿನಲ್ಲಿ ಶೇ.75ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.ತಾಲೂಕಿನಲ್ಲಿ ಸುಮಾರು 49,೦೦೦ಕ್ಕೂ ಅಧಿಕ ಮನೆಗಳಿದ್ದು ಇವುಗಳಲ್ಲಿ ಈಗಾಗಲೇ ಸುಮಾರು 35,೦೦೦ಕ್ಕೂ ಅಽಕ ಮನೆಗಳ ಸಮೀಕ್ಷೆ ನಡೆದಿದೆ.ಸುಮಾರು 13,೦೦೦ದಷ್ಟು ಮನೆಗಳ ಸಮೀಕ್ಷೆ ಬಾಕಿಯಿದೆ.ಈ ಪೈಕಿ ಬಹುತೇಕ ಮನೆಗಳು ಖಾಲಿಯಿವೆ.ಅಲ್ಲದೆ ಬಾಡಿಗೆ ಮನೆಗಳು ಹಾಗೂ ಉತ್ತರ ಭಾರತದ ನಿವಾಸಿಗಳಿರುವ ಮನೆಗಳೂ ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ.


ನಾನಾ ಸಮಸ್ಯೆಗಳಿಂದ ಹೈರಾಣಾಗಿದ್ದ ಸಮೀಕ್ಷಾಕಾರರು:
ಸಮೀಕ್ಷೆಗೆ ನಿಯೋಜನೆಗೊಂಡಿರುವ ಒಬ್ಬ ಸಮೀಕ್ಷಕಾರನಿಗೆ 140-150 ಮನೆಗಳನ್ನು ನೀಡಿ, ಪ್ರತಿದಿನ ಕನಿಷ್ಟ 6-7 ಮನೆಗಳ ಗುರಿಯನ್ನೂ ನೀಡಲಾಗಿತ್ತು.ಆದರೆ ಸಮೀಕ್ಷೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರೂಪಿಸಿದ ಆಪ್‌ನಲ್ಲಿ ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ನಾನಾ ತಾಂತ್ರಿಕ ಸಮಸ್ಯೆಗಳು ಕಾಡಿದ್ದರಿಂದಾಗಿ ಆರಂಭದಲ್ಲಿ ಸಮೀಕ್ಷೆ ಕಾರ್ಯ ನಿಧಾನಗತಿಯಿಂದ ಸಾಗಿತ್ತು.ಕೆಲ ಸಮೀಕ್ಷಕಾರರು ದಿನಕ್ಕೆ 4 ಮನೆಗಳ ಸಮೀಕ್ಷೆ ಪೂರೈಸಿದರೆ,ಕೆಲವರಿಗೆ ಒಂದೆರಡು ಮನೆಗಳನ್ನಷ್ಟೇ ಪೂರ್ಣಗೊಳಿಸಲು ಸಾಧ್ಯವಾಗಿತ್ತು.ಪ್ರತಿ ಮನೆಯ ವಿವರಗಳನ್ನು ನಮೂದಿಸಲು ಸಾಕಷ್ಟು ಕಾಲಾವಕಾಶ ಬೇಕಾಗಿದ್ದರಿಂದ ಒಂದು ಹಂತದಲ್ಲಿ ಸಮೀಕ್ಷಾಕಾರರು ಹೈರಾಣಾಗಿ ಹೋಗುವಂತಾಗಿತ್ತು.ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಮನೆಗಳಲ್ಲಿ ಅಗತ್ಯ ಮಾಹಿತಿ ಇರುವವರು ಇಲ್ಲದೇ ಇರುವುದು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿತ್ತು.ಮೊಬೈಲ್ ಫೋನ್‌ಗೆ ಒಟಿಪಿ ಕಳುಹಿಸಿದರೂ ಅದು ಸಮಯಕ್ಕೆ ರವಾನೆಯಾಗದೇ ಇರುವುದು,ಕೆಲವು ಮನೆಗಳಲ್ಲಿ ಒಟಿಪಿ ಬರುವ ಮೊಬೈಲ್ ಫೋನ್ ಹೊಂದಿರುವವರು ಮನೆಯಲ್ಲಿರದೇ ಇರುವುದು ಸಮೀಕ್ಷಾಕಾರರಿಗೆ ತಲೆನೋವಾಗಿ ಪರಿಣಮಿಸಿದ್ದೂ ಇದೆ.ಕೊನೆಗೂ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆದು ತಾಲೂಕಿನಲ್ಲಿ ಈಗಾಗಲೇ ಶೇ.75ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿರುವುದಾಗಿ ಮಾಹಿತಿ ಲಭಿಸಿದೆ.


ಅ.12ರ ತನಕ ವಿಸ್ತರಣೆ:
ಸೆ.22ರಂದು ಪ್ರಾರಂಭಗೊಂಡಿರುವ ಸಮೀಕ್ಷೆ ಒಟ್ಟು 16 ದಿನಗಳ ಕಾಲ ನಡೆದು ಅ.7ರಂದು ಕೊನೆಗೊಳ್ಳಬೇಕೆಂದು ಗಡುವು ವಿಧಿಸಲಾಗಿತ್ತು.ಆದರೆ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಸಮೀಕ್ಷೆಯನ್ನು ಅ.12ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.


ಶಾಲಾ ಅವಧಿಯಲ್ಲಿ ಬದಲಾವಣೆ:
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಬಹತೇಕವಾಗಿ ಶಾಲಾ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಮೊದಲ ಹಂತದ ಸಮೀಕ್ಷೆ ನಡೆಯುತ್ತಿದ್ದ ಅವಧಿಯಲ್ಲಿ ಮಕ್ಕಳಿಗೆ ದಸರಾ ರಜೆ ಇದ್ದುದರಿಂದ ಶಿಕ್ಷಕರಿಗೆ ಪೂರ್ಣಪ್ರಮಾಣದಲ್ಲಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿತ್ತು.ಆದರೆ,ದಸರಾ ರಜೆ ಮುಗಿದು ಇನ್ನೇನು ಸರಕಾರಿ ಶಾಲೆಗಳು ಅ.8ರಿಂದ ಪುನರಾರಂಭವಾಗುತ್ತಿವೆ.ಇದೀಗ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಿರುವುದರಿಂದ ಅ.8ರಿಂದ 12ರ ತನಕ ಶಾಲೆಗಳ ಅವಧಿಯನ್ನು ಬದಲಾವಣೆ ಮಾಡಲಾಗಿದೆ.ಸಮೀಕ್ಷೆಯಲ್ಲಿ ಶಿಕ್ಷಕರು ಪಾಲ್ಗೊಳ್ಳಬೇಕಾಗಿರುವುದರಿಂದ ಅ.8ರಿಂದ 12ರ ತನಕ,ಗ್ರೇಟರ್ ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರ ಎಲ್ಲಾ ಭಾಗಗಳಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲಾ ಅವಧಿಯನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರ ತನಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಬಳಿಕ ಸಮೀಕ್ಷೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.ರಜಾ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಿ ಅ.12ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು.ಈ ಅಂಶಗಳಂತೆ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಕಾರ್ಯನಿರ್ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಸುರಲ್ಕರ್ ವಿಕಾಸ ಕಿಶೋರ್ ಆದೇಶಿಸಿದ್ದಾರೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರತನಕಶಾಲೆಗಳಲ್ಲಿ ಕರ್ತವ್ಯ ಬಳಿಕ ಸಮೀಕ್ಷೆ
ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಿರುವುದರಿಂದ ಅ.8ರಿಂದ 12ರ ತನಕ ಗ್ರೇಟರ್ ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರ ಎಲ್ಲಾ ಭಾಗಗಳಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲಾ ಅವಧಿಯನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರ ತನಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ,ಬಳಿಕ ಸಮೀಕ್ಷೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.ರಜಾ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಿ ಅ.12ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ

LEAVE A REPLY

Please enter your comment!
Please enter your name here