ಗರ್ಭಿಣಿಯರಿಗೆ ಉತ್ತಮ ಪೌಷ್ಠಿಕ ಆಹಾರ ಕೊಟ್ಟಲ್ಲಿ ಆರೋಗ್ಯವಂತ ಮಗು ಸಾಧ್ಯ: ಶಾಸಕ ಅಶೋಕ್ ರೈ
ಪುತ್ತೂರು: ಗರ್ಭಿಣಿಯರು ಮತ್ತು ಮಕ್ಕಳಿಗೆ ಅಗತ್ಯವಾಗಿ ಕೊಡಬೇಕಾದ ಪೌಷ್ಠಿಕ ಆಹಾರದ ಬಗ್ಗೆ ಪ್ರತೀ ಮನೆ ಮನೆಯಲ್ಲಿ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು, ಇದು ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಮನೆಗೆ ಬಂದು ಈ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಪಾಲಿಸಬೇಕಾದ ಜವಾಬ್ದಾರಿಯೂ ಜನರಲ್ಲಿ ಇರಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಲಯನ್ಸ್ ಸೇವಾ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಪುತ್ತೂರು ಕಾನೂನು ಸೇವೆಗಳ ಸಮಿತಿ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಹಾಗೂ ಸ್ತ್ರೀ ಶಕ್ತಿ ಸೊಸೈಟಿ ಪುತ್ತೂರು ಇದರ ಸಹಯೋಗದಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸುಪೋಷಿತ್ ಭಾರತ್ ಹಾಗೂ ಪೋಷಣಾ ಮಹಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹುಟ್ಟುವ ಮಕ್ಕಳು ಆರೋಗ್ಯದಿಂದ ಕೂಡಿರಬೇಕಾದರೆ ಗರ್ಭಿಣಿಯರಿಗೆ ಸರಿಯಾದ ಪೋಷಕಾಂಶ ಆಹಾರ ದೊರೆಯಬೇಕು, ಹುಟ್ಟಿದ ಮಕ್ಕಳು ಉತ್ತಮ ಆರೋಗ್ಯವಂತ ಪ್ರಜೆಯಾಗಿ ಬೆಳೆಯಬೇಕಾದರೆ ಮಕ್ಕಳಿಗೂ ಸರಿಯಾದ ಆಹಾರವನ್ನು ನೀಡಬೇಕು. ಈ ನಿಟ್ಟಿನಲ್ಲಿ ಬಹುತೇಕರಿಗೆ ಅರವಿನ ಕೊರತೆ ಇದ್ದು ಇದಕ್ಕಾಗಿ ಸರಕಾರ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುವಂತಾಗಲು ಇಲಾಖೆಯ ಶ್ರಮ ಮುಖ್ಯವಾಗಿದೆ ಎಂದು ಹೇಳಿದರು.

ಗರ್ಭಿಣಿಯರಿಗೆ ಟೆನ್ಸ್ಯನ್ ಕೊಡಬೇಡಿ:
ಯಾವುದೇ ಕಾರಣಕ್ಕೂ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಮಾನಸಿಕ ಟೆನ್ಸ್ಯನ್ ಕೊಡಬಾರದು. ಈ ಎರಡೂ ಸಮಯದಲ್ಲಿ ಅವರು ಅತ್ಯಂತ ಸಂತೋಷವನ್ನು ಮತ್ತು ಪ್ರೀತಿಯನ್ನು ಬಯಸುತ್ತಾರೆ. ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಮಹಿಳೆಯರ ಕಷ್ಟ , ನೋವು ಅದು ಅವರಿಗೆ ಮಾತ್ರ ಗೊತ್ತಾಗುತ್ತದೆ. ಈ ವಿಚಾರವನ್ನು ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಸ್ತ್ರೀ ಶಕ್ತಿ ಕಾರ್ಯಕತರು ತಿಳಿಸಬೇಕು ಎಂದು ಶಾಸಕರು ಹೇಳಿದರು.
ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ, ಸರಕಾರದ ಈ ಯೋಜನೆಯ ಬಗ್ಗೆ ಪ್ರತೀ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀ ಶಕ್ತಿ ಕಾರ್ಯಕತೆಯರು ಮನೆಗಳಿಗೆ ತೆರಳಿ ಮಾಹಿತಿ ನೀಡುವುದರ ಜೊತೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ. ಈ ಯೋಜನೆಯು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿ ಕೆಲಸ ಮಾಡಲಿದೆ. ಪ್ರತೀಯೊಬ್ಬರೂ ಸರಕಾರದ ಈ ಅರಿವು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಂಗಳ ಕಾಲೆ, ಜಿಲ್ಲಾ ಸ್ತ್ರೀ ಶಕ್ತಿ ಅಧ್ಯಕ್ಷೆ ಶಕುಂತಳಾ, ತಾಲೂಕು ಸ್ತ್ರೀ ಶಕ್ತಿ ಅಧ್ಯಕ್ಷೆ ಕಮಲ, ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಬಲ್ಲಾಲ್, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕಮಲ ಉಪಸ್ಥಿತರಿದ್ದರು.ಶಿಸು ಅಭಿವೃದ್ದಿ ಯೋಜನಾಧಿಕಾರಿ ಹರೀಶ್ ಕೆ ಸ್ವಾಗತಿಸಿ, ಮಂಗಳಾ ಕಾಲೆ ವಂದಿಸಿದರು. ಹಿರಿಯ ಮೇಲರವಿಚಾರಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು.