ಇಡ್ಕಿದು ಗ್ರಾಮ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗೆ 48 ಲಕ್ಷ ರೂ ಅನುದಾನ

0

ಎರಡೂವರೆ ವರ್ಷದಲ್ಲಿ ಕ್ಷೇತ್ರಕ್ಕೆ 2010 ಕೋಟಿ ರೂ ಅನುದಾನ; ಶಾಸಕ ಅಶೋಕ್ ರೈ


ಪುತ್ತೂರು: ನಾನು ಶಾಸಕನಾಗಿ ಎರಡೂವರೆ ವರ್ಷದಲ್ಲಿ ತನ್ನ ಕ್ಷೇತ್ರಕ್ಕೆ ಜನತೆಯ ಬೇಡಿಕೆಯಂತೆ 2010 ಕೋಟಿ ಅನುದಾನವನ್ನು ತಂದಿದ್ದು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ತರುವ ಕೆಲಸವನ್ನು ಮಾಡುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಇಡ್ಕಿದು ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ದಿಗೆ 48 ಲಕ್ಷ ಅನುದಾನ ಮಂಜೂರುಗೊಂಡಿದ್ದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಕೇವಲ ಕುಡಿಯುವ ನೀರಿಗೆ 1010 ಕೋಟಿ ರೂ ಅನುದಾನವನ್ನು ತಂದಿದ್ದೇನೆ. ಕ್ಷೇತ್ರದ ಪ್ರತೀ ಮನೆಗೂ ದಿನದ 24 ಗಂಟೆ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡುವ ಉದ್ದೇಶದಿಂದ ಈ ಅನುದಾನವನ್ನು ತಂದಿದ್ದೇನೆ, ಕಾಮಗಾರಿ ನಡೆಯುತ್ತಿದೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಶಾಸಕರು ತನ್ನಿಂದ ಎಲ್ಲಿಂದೆಲ್ಲಾ ಅನುದಾನ ತರಲು ಸಾಧ್ಯವೋ ಅಲ್ಲಿಂದೆಲ್ಲ ಅನುದನವನ್ನು ತರುವ ಕೆಲಸವನ್ನು ಮಾಡುತ್ತೇನೆ. ಜನತೆಗೆ ಕೊಟ್ಟ ಭರವಸೆಯನ್ನು ಒಂದೊಂದಾಗಿ ಈಡೇರಿಸುವ ಪ್ರಯತ್ನವನ್ನು ಮಾಡುತ್ತೇನೆ. ಕುಡಿಯುವ ನೀರಿಗೆ 1010 ಕೋಟಿ ರೂ ಬಂದಿರುವುದು ಇಡೀ ಕರ್ನಾಟಕದಲ್ಲಿ ಪುತ್ತೂರಿಗೆ ಮಾತ್ರ ಎಂದು ಹೇಳಿದರು.

ಮೆಡಿಕಲ್ ಕಾಲೇಜು ಇರ್ತಿದ್ರೆ,ಕೂಸು ಬದುಕುಳಿಯುತ್ತಿತ್ತು..
ಮೊನ್ನೆ ಸೇಡಿಯಾಪು ಸಮೀಪ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ಪುಟ್ಟ ಕಂದಮ್ಮಗಳ ಮೇಲೆ ಹೆಜ್ಜೇನು ದಾಳಿ ನಡೆದು ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ, ಇದು ಎಲ್ಲರನ್ನೂ ದುಖಿತರನ್ನಾಗಿಸಿದೆ, ಈ ರೀತಿಯ ಘಟನೆ ಎಲ್ಲಿಯೂ ನಡೆಯದಿರಲಿ, ಮಕ್ಕಳಿಗೆ ನೋವಾದರೆ ಅದನ್ನು ಸಹಿಸುವ ಶಕ್ತಿ ಯಾವ ತಂದೆ ತಾಯಿಗೂ ಇರುವುದಿಲ್ಲ, ಆ ಕುಟುಂಬಕ್ಕೆ ಯಾರೇ ಸಾಂತ್ವನ ಹೇಳಿದರೂ ಕಂದಮ್ಮಗಳ ಅಗಲುವಿಕೆ ಮರೆಯಲು ಸಾಧ್ಯವೇ ಇಲ್ಲ ಎಂದ ಶಾಸಕರು, ಮಕ್ಕಳಿಗೆ ಸೂಕ್ತ ರೀತಿಯ ಚಿಕಿತ್ಸೆ ದೊರೆಯುತ್ತಿದ್ದರೆ ಬದುಕುಳಿಯಬಹುದಿತ್ತು ಎಂದು ಹೇಳಿ ಈ ಕಾರಣಕ್ಕಾಗಿಯೇ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಎಂದು ಹಗಲು ರಾತ್ರಿ ಒದ್ದಾಡುತ್ತಿದ್ದೇನೆ, ಹೇಗಾದರೂ ಮಾಡಿ ಪುತ್ತೂರಿನಲ್ಲಿ ಎರಡು ವರ್ಷದೊಳಗೆ ಮೆಡಿಕಲ್ ಕಾಲೇಜಿನ ಬಹುತೇಕ ಕಾಮಗಾರಿಯನ್ನು ಮುಗಿಸುವ ಇರಾದೆಯನ್ನು ಹೊಂದಿದ್ದೇನೆ ಇದಕ್ಕಾಗಿ ಜನರ ಸಹಕಾರವನ್ನು ಕೇಳಿದರು.

ಕಬಕ -ವಿಟ್ಲ ರಸ್ತೆ ಚತುಷ್ಪಥ
ಕಬಕ-ವಿಟ್ಲ ರಸ್ತೆಯನ್ನು ಚತುಷ್ಪಥ ಮಾಡುವ ಉದ್ದೇಶದಿಂದ 10 ಕೋಟಿಯ ಪ್ರಸ್ತಾವನೆ ಕಳುಹಿಸಲಾಗಿದ್ದು ಅನುದಾನ ಮಂಜೂರಾಗಲಿದೆ, ಈ ರಸ್ತೆಯ ಚತುಷ್ಪಥ ಬೇಡಿಕೆ ಅನೇಕ ವರ್ಷಗಳಿಂದ ಇದೆ, ರಸ್ತೆ ಅಗಲೀಕರಣವಾದಲ್ಲಿ ವಿಟ್ಲ ಕೂಡಾ ಇನ್ನೂ ಹೆಚ್ಚಿನ ಅಭಿವೃದ್ದಿಯಾಗಲಿದೆ ಎಂದು ಶಾಸಕರು ತಿಳಿಸಿದರು. ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕರನ್ನು ಸಭೆಯಲ್ಲಿದ್ದವರು ಚಪ್ಪಾಲೆ ಮೂಲಕ ಅಭಿನಂದಿಸಿದರು.

ರಾಜಕೀಯ ಮಾಡದ ರಾಜಕಾರಣಿ ಅಶೋಕ್ ರೈ: ಕೋಲ್ಪೆ ರಾಜಾರಾಂ ಶೆಟ್ಟಿ
ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಕೋಲ್ಪೆ ರಾಜಾರಾಂ ಶೆಟ್ಟಿಯವರು ಮಾತನಾಡಿ, ರಾಜಕಾರನಿಯಾದರೂ ಅಭಿವೃದ್ದಿಯಲ್ಲಿ ರಾಜಕೀಯ ಮಾಡದ ಶಾಸಕರಿದ್ದಲ್ಲಿ ಅದು ಅಶೋಕ್ ರೈ . ದ ಕ ಜಿಲ್ಲೆಯಲ್ಲಿ ಮೂರು ಮಂದಿ ರಾಜಕಾರಣಿಗಳು ಮಾತ್ರ ಬೆಸ್ಟ್ ರಾಜಕಾರಣಿಗಳಾಗಿದ್ದರು. ಮಾಜಿ ಸಂಸದ ಜನಾರ್ಧನ ಪೂಜಾರಿ, ಮಾಜಿ ಎಂಎಲ್‌ಸಿ ಅಣ್ಣಾ ವಿನಯಚಂದ್ರ ಹಾಗೂ ಪುತ್ತೂರು ಶಾಸಕ ಅಶೋಕ್ ರೈ, ಈ ಮೂವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಯಾವತ್ತೂ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದು ಹೇಳಿದರು.

ಬೆಂಗಳೂರಿಗೆ ಹೋಗದೇ ಇದ್ರೆ ಎನೂ ಸಿಗಲ್ಲ: ಎಂ ಎಸ್ ಮಹಮ್ಮದ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ, ಶಾಸಕ ಅಶೋಕ್ ರೈ ಅವರು ವಾರದಲ್ಲಿ ಮೂರು ದಿನ ಬೆಂಗಳೂರಿಗೆ ಹೋಗದೇ ಇರುತ್ತಿದ್ದರೆ ಇಷ್ಟೊಂದು ಅನುದಾನ ಪುತ್ತೂರಿಗೆ ಬರುತ್ತಿರಲಿಲ್ಲ. ಬೆಂಗಳೂರಿಗೆ ತೆರಳುವ ಶಾಸಕರು ಅಲ್ಲಿನ ವಿವಿಧ ಇಲಾಖೆಗಳ ಪ್ರಮುಖರನ್ನು ಭೇಟಿಯಾಗುತ್ತಾರೆ,ಸಚಿವರನ್ನು ಭೇಟಿಯಾಗುತ್ತಾರೆ , ಸಿಎಂ ಬೇಟಿಯಾಗುತ್ತಾರೆ ಹೀಗೇ ಎಲ್ಲರನ್ನೂ ಭೇಟಿಯಾಗಿ ತನ್ನ ಕ್ಷೇತ್ರಕ್ಕೆ ಅನುದಾನವನ್ನು ತಂದಿದ್ದಾರೆ. ಇಂಥಹ ಒಬ್ಬ ಶಾಸಕರನ್ನು ಈ ಹಿಂದೆ ಪುತ್ತೂರು ಕಂಡಿಲ್ಲ ಇನ್ನು ಮುಂದಕ್ಕೆ ಅಶೋಕ್ ರೈ ಅವರಂಥ ಶಾಸಕರು ಪುತ್ತೂರಿಗೆ ಬರುವುದೇ ಇಲ್ಲ ಎಂದು ಹೇಳಿದರು.ಇಡ್ಕಿದು ಗ್ರಾಮಕ್ಕೆ 1.30 ಕೋಟಿಗೂ ಮಿಕ್ಕಿ ಅನುದಾನವನ್ನು ಒದಗಿಸುವ ಮೂಲಕ ಪ್ರತೀ ಗ್ರಾಮಕ್ಕೂ ನ್ಯಾಯ ಕೊಡಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಹೇಳಿದರು.

ಇಡ್ಕಿದು ಗ್ರಾಮಕ್ಕೆ 1.60 ಕೋಟಿ ರೂ ಅನುದಾನ: ನಾಸಿರ್ ಕೋಲ್ಪೆ
ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ ಮಾತನಾಡಿ ಅಶೋಕ್ ರೈ ಶಾಸಕರಾದ ಬಳಿಕ ಇಡ್ಕಿದು ಗ್ರಾಮಕ್ಕೆ ಒಟ್ಟು 1.60 ಕೋಟಿ ರೂ ಅನುದಾನ ಬಂದಿದೆ. 48 ಲಕ್ಷ ರೂ ಅನುದಾನದಲ್ಲಿ ಸೂರ್ಯ ದೇವಸ್ಯ ಕಂಬಳಬೆಟ್ಟು ರಸ್ತೆಗೆ 10 ಲಕ್ಷ, ಸೂರ್ಯ ಮುಂಡ್ರೆ ಬೈಲು ಎಸ್ ಟಿ ಕಾಲನಿ 10 ಲಕ್ಷ, ಮಿತ್ತೂರು ಬೂಡಿನ ಮಜಲು ಎಸ್ ಸಿ ಕಾಲನಿ 10 ಲಕ್ಷ, ಮಿತ್ತೂರು ಗಾಣದಕೊಟ್ಯ ರಸ್ತೆ 10 ಲಕ್ಷ ಅಳಕಮಜಲು ಪುಂಡಿಕಾಯಿ ಅಲ್ಪಸಂಖ್ಯಾತ ಕಾಲನಿ ರಸ್ತೆ 5 ಲಕ್ಷ, ಸೂರ್ಯ ಅಂಗನವಾಡಿ ಕೇಂದ್ರ ಅಭಿವೃದ್ದಿಗೆ 3 ಲಕ್ಷ ಅನುದಾನವನ್ನು ಒದಗಿಸಿದ್ದಾರೆ. ಇನ್ನು 1 ಕೋಟಿ ರೂ ಅನುದಾನ ಕೊಟ್ಟಲ್ಲಿ ಇಡ್ಕಿದು ಗ್ರಾಮದ ಎಲ್ಲಾ ರಸ್ತೆ ಬೇಡಿಕೆ ಈಡೇರಲಿದೆ ಎಂದು ಹೇಳಿದರು.


ಉದ್ಯಮಿ ದಿವಾಕರ ದಾಸ್ ಮಾತನಾಡಿ, ಶಾಸಕರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಲಾಯಿತು.


ಈ ಸಂದರ್ಬದಲ್ಲಿ ಬೂತ್ ಅಧ್ಯಕ್ಷರಾದ ಲತೀಫ್ ದಲ್ಕಾಜೆ, ಹಂಝ ಕಂದಕ್, ಮಹಮ್ಮದ್ ಕಂದಕ್, ಸಿದ್ದಿಕ್ ಎಂ ಪಿ, ಉದ್ಯಮಿ ಜಗದೀಶ್ ಪೂಜಾರಿ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಪತ್ರಕರ್ತ ರಾಮದಾಸ್ ವಿಟ್ಲ, ಅಶ್ರಫ್ ಮೈಕ್ಯೆ, ಹಕೀಂ ಕಂದಕ್, ಶಾಫಿ ಸೂರ್ಯ, ಹಂಝ ಮೈಕ್ಯೆ, ಯೋಗೇಶ್ ಗೌಡ, ಮೋಹನ್ ಗುರ್ಜಿನಡ್ಕ, ಕುಳ ವಲಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು, ಲೋಹಿತ್ ಸೂರ್ಯ, ಇಡ್ಕಿದು ಗ್ರಾಪಂ ಉಪಾಧ್ಯಕ್ಷ ಪದ್ಮನಾಭ ಕೊಪ್ಪಳ, ಪಾರೂಕ್ ಮಣಿಯಾರ್, ರಫೀಕ್ ಮಿತ್ತೂರು, ಹಂಝ ಮಿತ್ತೂರುಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here