
ಪುತ್ತೂರು: ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹಲ್ಲಿನ ಮೇಲ್ಮೈ ಎನಾಮಲ್ ಆಕ್ರಮಿಸುವ ಆಮ್ಲಗಳನ್ನು ಉತ್ಪಾದಿಸಿದಾಗ ದಂತ ಕ್ಷಯ ಆರಂಭವಾಗುತ್ತದೆ. ಇದು ಹಲ್ಲಿನಲ್ಲಿ ಕುಳಿ ಎಂದು ಕರೆಯಲ್ಪಡುವ ಸಣ್ಣ ರಂಧ್ರಕ್ಕೆ ಕಾರಣವಾಗುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ನೋವು, ಸೋಂಕು ಮತ್ತು ಹಲ್ಲಿನ ನಷ್ಟಕ್ಕೆ ಕಾರಣವಾಗುತ್ತದೆ. ಹಲ್ಲಿನ ಆರೋಗ್ಯವನ್ನು ಗಮನದಲ್ಲಿರಿಸಿ ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ, ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಆಯೋಜನೆಯಲ್ಲಿ, ಸುಳ್ಯದ ಕೆವಿಜಿ ದಂತ ಮಹಾ ವಿದ್ಯಾಲಯದ ಸಹಯೋಗದೊಂದಿಗೆ 2ನೇ ಮಾಸಿಕ ಉಚಿತ ದಂತ ಚಿಕಿತ್ಸಾ ಶಿಬಿರವು ಅ.13ರಂದು ನಡೆಯಿತು.

ಬೊಳುವಾರಿನಲ್ಲಿರುವ ಮಹಾವೀರ ವೆಂಚರ್ಸ್ ಕಟ್ಟಡದಲ್ಲಿರುವ ಪುತ್ತೂರು ಪಾಲಿಕ್ಲಿನಿಕ್ ನಲ್ಲಿ ನಡೆದ ಈ ಉಚಿತ ಶಿಬಿರದಲ್ಲಿ ಸುಮಾರು 42 ಮಂದಿ ಭಾಗವಹಿಸಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡರು. ಕೆವಿಜಿ ದಂತ ಮಹಾವಿದ್ಯಾಲಯದ ದಂತ ಶಸ್ತ್ರಚಿಕಿತ್ಸಾ ತಜ್ಞೆ, ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ನ ರೆಸಿಡೆಂಟ್ ವೈದ್ಯೆ ಡಾ. ಶ್ರೀ ದೇವಿ ನೇತೃತ್ವದಲ್ಲಿ ತಜ್ಞ ವೈದ್ಯರ ಮತ್ತು ಸಿಬ್ಬಂದಿಗಳ ತಂಡ ಈ ಶಿಬಿರದಲ್ಲಿ ಭಾಗವಹಿಸಿದ್ದು, ಕೆವಿಜಿ ದಂತ ಮಹಾ ವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ನಸ್ರತ್ ಫರೀದ್ ನಿರ್ದೇಶನದಂತೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ನವಂಬರ್ ತಿಂಗಳ 2ನೇ ಸೋಮವಾರದಂದು (ನ.10) ಮುಂದಿನ ಉಚಿತ ದಂತ ಚಿಕಿತ್ಸಾ ಶಿಬಿರವೂ ಆಯೋಜನೆಗೊಳ್ಳಲಿದೆ. ವಾರದ ಇತರ ದಿನಗಳಲ್ಲಿ ಕನಿಷ್ಠ ದರದಲ್ಲಿ ಹಲ್ಲಿನ ಬೇರುಗಳ ಚಿಕಿತ್ಸೆ, ದವಡೆ ಹಲ್ಲು (ಬುದ್ದಿ ಹಲ್ಲು) ಕೀಳುವಿಕೆ, ಕೃತಕ ದಂತ ಪಂಕ್ತಿ ಜೋಡನೆ, ಮಕ್ಕಳ ದಂತ ಚಿಕಿತ್ಸೆ ಸೇರಿದಂತೆ ಇತರ ಎಲ್ಲಾ ವಿಶೇಷ ದಂತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು, ಅವಕಶ್ಯತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ಕಾರ್ಯಯೋಜನೆ ಬಗ್ಗೆ ಆಯಾ ಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಮತ್ತು ಇದೇ ತಿಂಗಳ 15ರಂದು ಬೇರುನಾಳ ಚಿಕಿತ್ಸಾ ತಜ್ಞರು ಮತ್ತು 18ರಂದು ಮಕ್ಕಳ ಹಲ್ಲಿನ ತಜ್ಞರು ಚಿಕಿತ್ಸೆಗಾಗಿ ಲಭ್ಯವಿರುವುದಾಗಿ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀ ಪ್ರಕಾಶ್ ಬಂಗಾರಡ್ಕ ತಿಳಿಸಿದ್ದಾರೆ.ಹೆಚ್ಚಿನ ವಿವರಗಳಿಗೆ 9108245785 ನಂಬರನ್ನು ಸಂಪರ್ಕಿಸಬಹುದು.
