ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ: ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

0

ಪುತ್ತೂರು:ಕಂಬಳ ಕ್ರೀಡೆಗೆ,ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಅಧಿಕೃತ ಮನ್ನಣೆ ಸಿಕ್ಕಿದ್ದು ಪ್ರಾಧಿಕಾರದಲ್ಲಿ ಕಂಬಳ ಕ್ರೀಡೆಗೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ಗೆ ಮಾನ್ಯತೆ ನೀಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ.


ರಾಜ್ಯ ಕ್ರೀಡಾ ಸಂಸ್ಥೆಯಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚಿಸಿ ರಾಜ್ಯ ಸರಕಾರ ಅಧಿಕೃತ ಮಾನ್ಯತೆ ನೀಡಿದ್ದು ಈ ಮೂಲಕ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯದ ಅಧಿಕೃತ ಮಾನ್ಯತೆ ದೊರೆತಂತಾಗಿದೆ.ಈ ಮಾನ್ಯತೆಯು ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್. ಅವರು ಈ ಆದೇಶದಲ್ಲಿ ತಿಳಿಸಿದ್ದಾರೆ.


ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ:
ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ನ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಆಯ್ಕೆಯಾಗಿದ್ದು ಕಾರ್ಯಕಾರಿ ಸಮಿತಿಯ ಓರ್ವ ಸದಸ್ಯರಾಗಿ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ಕಂಬಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಎನ್.ಚಂದ್ರಹಾಸ ಶೆಟ್ಟಿಯವರು ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾಗಿದ್ದು,ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.


ಡಾ|ಜೀವಂಧರ್ ಬಲ್ಲಾಳ್ ಕಾಂತಾವರ, ಜೀವನ್‌ದಾಸ್ ಅಡ್ಯಂತಾಯ ಮಿಯಾರು, ಕೆ.ಗುಣಪಾಲ್ ಕಡಂಬ ಕಾರ್ಕಳ ಇವರು ಸಮಿತಿಯ ಗೌರವ ಸಲಹೆಗಾರರಾಗಿರುತ್ತಾರೆ.ಉಪಾಧ್ಯಕ್ಷರಾಗಿ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು ವಾಮಂಜೂರು, ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಂಗಿನಮನೆ ಕಾರ್ಕಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎನ್.ಚಂದ್ರಹಾಸ್ ಶೆಟ್ಟಿ ಪುತ್ತೂರು,ಚಂದ್ರಹಾಸ ಅನಿಲ್ ಮೂಡುಬಿದಿರೆ, ಲೋಕೇಶ್ ಶೆಟ್ಟಿ ಮುಚ್ಚೂರು, ಭಾಸ್ಕರ್ ಕೋಟ್ಯಾನ್ ಕಾರ್ಕಳ,ಸುಕುಮಾರ್ ಶೆಟ್ಟಿ ಕೊಂಡೆಟ್ಟು, ಪಿ.ಆರ್.ಶೆಟ್ಟಿ ಮಂಗಳೂರು, ರೋಹಿತ್ ಕುಮಾರ್ ಹೆಗ್ಡೆ ಎರ್ಮಾಳ್, ಶ್ರೀಕಾಂತ್ ಭಟ್ ಮಣಿಪಾಲ, ಶಾಂತಾರಾಮ ಶೆಟ್ಟಿ ಬಾರಕೂರು,ಪಿಯೂಸ್ ರೊಡ್ರಿಗಸ್ ಬಂಟ್ವಾಳ, ಉದಯಕುಮಾರ್ ಶೆಟ್ಟಿ ಕಾರ್ಕಳ, ಸುಧಾಕರ ಹೆಗ್ಡೆ ಹೆರಾಜೆ, ಅನಿಲ್ ಶೆಟ್ಟಿ ಜಪ್ಪಿನಮೊಗರು, ಪ್ರಶಾಂತ್ ಕಾಜವ ಬಂಟ್ವಾಳ, ಅರುಣ್ ಕುಮಾರ್ ಶೆಟ್ಟಿ ಬಜಪೆ ಆಯ್ಕೆಯಾಗಿದ್ದಾರೆ.


ಅಸೋಸಿಯೇಷನ್ ಪ್ರತಿವರ್ಷ ಜೂ.30ರೊಳಗೆ ಕಾರ್ಯಚಟುವಟಿಕೆಗಳ ಆಡಳಿತ ವರದಿ, ವಾರ್ಷಿಕ ವಹಿವಾಟುವಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡಾವಳಿ ಪ್ರತಿ, ಕ್ಯಾಲೆಂಡರ್ ಆಫ್ ಇವೆಂಟ್, ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಷನ್ ನವೀಕರಿಸಿರುವ ಪ್ರತಿ ಒದಗಿಸಲು ಆದೇಶದಲ್ಲಿ ತಿಳಿಸಲಾಗಿದೆ. ಅಸೋಸಿಯೇಷನ್‌ಗೆ ನೀಡುವ ಅನುದಾನವು ಸರಕಾರ ಅನುಮೋದಿಸುವ ವಿಶೇಷ ಅನುದಾನ ಸಂಹಿತೆ ನಿಯಮಗಳಿಗೆ ಒಳಪಟ್ಟಿದೆ.ಅಸೋಸಿಯೇಷನ್ ಕ್ರೀಡಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಲ ಕಾಲಕ್ಕೆ ಹೊರಡಿಸುವ ಷರತ್ತು, ನಿಯಮ, ಸೂಚನೆಗಳನ್ನು ಆದೇಶಗಳನ್ನು ಪಾಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here