ಸಮತಟ್ಟಾದ ಜಾಗದಿಂದ ತೋಡಿಗೆ ಬಿದ್ದ ಮರಗಳ ಗೆಲ್ಲುಗಳು : ಅನಿರೀಕ್ಷಿತ ಮಳೆಯಿಂದ ಸೇತುವೆ ಬ್ಲಾಕ್-ಕೃತಕ ನೆರೆ

0

ಜಾಗ ಸಮತಟ್ಟು ಮಾಡುವ ಸಂದರ್ಭ ಅನುಮತಿ ಕಡ್ಡಾಯ-ನಗರಸಭೆ


ಪುತ್ತೂರು: ಅ.12ರಂದು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಬೈಪಾಸ್ ರಸ್ತೆ ಪಕ್ಕದ ತೆಂಕಿಲ, ನೂಜಿ, ಎ ಪಿ ಯಂ ಸಿ ರಸ್ತೆಯ ಅಕಿರೆಬರೆ ಸೇತುವೆಯಲ್ಲಿ ಕಸ ಕಡ್ಡಿ, ಮರದ ರೆಂಬೆ ಇತ್ಯಾದಿಗಳು ಸಿಲುಕಿ ಕೃತಕ ನೆರೆ ಉಂಟಾಗಿ ಅಸುಪಾಸಿನ ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.


ಅನಿರೀಕ್ಷಿತವಾಗಿ ಸುರಿದ ಮಳೆಯ ಪರಿಣಾಮ ಚರಂಡಿ, ರಾಜಕಾಲುವೆ ತುಂಬಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಸಾಕಷ್ಟು ಹಾನಿಯುಂಟಾಗಿರುವುದಾಗಿ ವರದಿಯಾಗಿದೆ.ವಸತಿ ನಿವೇಶನಕ್ಕಾಗಿ ಭೂಮಿ ಸಮತಟ್ಟು ಸಂದರ್ಭದಲ್ಲಿ ಸದ್ರಿ ಜಾಗದಿಂದ ಕಡಿದ ಮರಗಳು,ಅಗೆದು ಹಾಕಿದ ಮಣ್ಣಿನ ಜೊತೆಗೆ ಚರಂಡಿ – ರಾಜಕಾಲುವೆ ಸೇರಿ ಮರದ ರೆಂಬೆಗಳು ಸೇತುವೆಯಲ್ಲಿ ಸಿಲುಕಿಕೊಂಡು ಬ್ಲಾಕ್ ಆಗಿ ಆಸುಪಾಸಿನ ನಿವಾಸಿಗಳಿಗೆ ತೊಂದರೆಯುಂಟಾಗಿದೆ.ನೀರಿನ ರಭಸಕ್ಕೆ ಬೈಪಾಸ್ ಪಕ್ಕದ ನೂಜಿ ಎಂಬಲ್ಲಿ ಒಂದು ಮನೆಯ ಕಾಂಪೌಂಡ್ ವಾಲ್ ಕುಸಿದು ಸ್ವಲ್ಪ ದೂರದವರೆಗೆ ನೀರಿನಲ್ಲಿ ಕೊಚ್ಚಿ ಹೋಗಿದೆ.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನೆಲ್ಲಿಕಟ್ಟೆ ಹೋಗುವ ರಸ್ತೆಯಲ್ಲೂ ಬಸ್ ನಿಲ್ದಾಣ ಭಾಗದಿಂದ ಹರಿದ ಮಳೆನೀರು ಕೆಳ ಭಾಗದ ಮನೆಗೆ ನುಗ್ಗಿ ತೊಂದರೆಯಾಗಿದೆ.ಎಲ್ಲಾ ಸ್ಥಳಗಳಿಗೆ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತೆ ವಿದ್ಯಾ ಯಂ ಕಾಳೆ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬ್ಲಾಕ್ ಆದ ಎಲ್ಲಾ ಚರಂಡಿಗಳನ್ನು ನಗರಸಭಾ ವತಿಯಿಂದ ಸರಿಪಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.

ಕಡ್ಡಾಯ ಅನುಮತಿಗೆ ಸೂಚನೆ
ವಸತಿ ನಿವೇಶನಕ್ಕಾಗಿ ಭೂಮಿ ಸಮತಟ್ಟು ಮಾಡುವ ಸಂದರ್ಭದಲ್ಲಿ ಜಾಗದಿಂದ ಕಡಿದ ಮರಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದ ಕಾರಣ ಅಗೆದು ಹಾಕಿದ ಮಣ್ಣಿನ ಜೊತೆ ಸೇರಿ ಚರಂಡಿ-ರಾಜಕಾಲುವೆಯಲ್ಲಿ ಹರಿದು ಬ್ಲಾಕ್ ಆಗಿ ಸಾರ್ವಜನಿಕರಿಗೆ ತೊಂದರೆಯ ಜೊತೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹನಿಯಾಗಿದೆ.ಆದುದರಿಂದ ಯಾವುದೇ ಉದ್ದೇಕ್ಕಾಗಿ ಜಾಗ ಸಮತಟ್ಟು ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ನಗರಸಭೆಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು.ತಪ್ಪಿದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೃತಕ ನೆರೆಯಿಂದ ಉಂಟಾದ ಕಷ್ಟ ನಷ್ಟಗಳಿಗೆ ಸಂಬಂಧಪಟ್ಟವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬುದಾಗಿ ನಗರಸಭಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here