ಕುಶಾಲನಗರ ಪರಂಪರಾ ರೆಸಾರ್ಟ್ನಲ್ಲಿ ಗುರು-ಶಿಷ್ಯರ ಸಮ್ಮಿಲನ
ಪುತ್ತೂರು: ಸರ್ವೆ ಎಸ್ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ದಿನಾಚರಣೆ ಮತ್ತು ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ‘ಗುರು ಶಿಷ್ಯರ ಸಮ್ಮಿಲನ’ ಅ.19ರಂದು ಕುಶಾಲನಗರ ಪರಂಪರಾ ರೆಸಾರ್ಟ್ನಲ್ಲಿ ನಡೆಯಲಿದೆ.
ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ 61ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿ ‘ಹಿರಿಯ ವಿದ್ಯಾರ್ಥಿಗಳ ಗೌರವ ದಿನ’ ಎನ್ನುವ ಹೆಸರಿನಲ್ಲಿ 2021ರಲ್ಲಿ ಬಿಸಿಲೆ ಘಾಟ್ಗೆ ಪ್ರವಾಸ ಆಯೋಜಿಸಲಾಗಿತ್ತು. 2022ರಲ್ಲಿ ಮಡಿಕೇರಿಯಲ್ಲಿ ಗುರು ಶಿಷ್ಯ ಸಮ್ಮಿಲನ ಹಮ್ಮಿಕೊಳ್ಳಲಾಗಿತ್ತು. 2023ರಲ್ಲಿ ಮಂಗಳೂರಿನಲ್ಲಿ ಮತ್ತು 2024ರಲ್ಲಿ ಮಡಿಕೇರಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ಗುರು ಶಿಷ್ಯರ ಸಮ್ಮಿಲನ ನಡೆದಿತ್ತು. ಇದೀಗ 5ನೇ ವರ್ಷದ ಗುರು ಶಿಷ್ಯರ ಸಮ್ಮಿಲನ ಕುಶಾಲನಗರ ಪರಂಪರಾ ರೆಸಾರ್ಟ್ನಲ್ಲಿ ನಡೆಯಲಿದೆ.
ಹಿರಿಯ ವಿದ್ಯಾರ್ಥಿಗಳನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ ಶ್ರೀನಿವಾಸ್ ಎಚ್.ಬಿ ಅವರು ಶಿಕ್ಷಕ ವೃತ್ತಿ ಸಂದರ್ಭದಲ್ಲೇ ‘ಜನ ಮೆಚ್ಚಿದ’ ಶಿಕ್ಷಕ ಎನ್ನುವ ಖ್ಯಾತಿಯನ್ನು ಗಳಿಸಿದ್ದಲ್ಲದೇ ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡು ಅಪಾರ ಜನಮನ್ನಣೆ ಗಳಿಸಿದ್ದರು. ಶ್ರೀನಿವಾಸ್ ಎಚ್.ಬಿ ಮೇಲೆ ಅಪಾರ ಗೌರವ ಹೊಂದಿರುವ ಅವರ ಶಿಷ್ಯ ಬಳಗ ಇಂದಿಗೂ ಅವರ ಜೊತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದು ತಮ್ಮ ನೆಚ್ಚಿನ ಗುರುವಿನ ಹುಟ್ಟು ಹಬ್ಬವನ್ನು ಪ್ರತೀ ವರ್ಷ ಒಂದೊಂದು ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಮೂಲಕ ತಮ್ಮ ಅಭಿಮಾನ ಮತ್ತು ಬಾಂಧವ್ಯವನ್ನು ತೋರ್ಪಡಿಸುತ್ತಿದ್ದಾರೆ.
ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಗುರು-ಶಿಷ್ಯರು ಪ್ರತೀ ವರ್ಷ ಪ್ರವಾಸ ಹೋಗುವುದು, ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವುದು ಮತ್ತು ಗುರು-ಶಿಷ್ಯರ ಸಮ್ಮಿಲನ ಹೆಸರಿನಲ್ಲಿ ಗುರುವಿನ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.
ಅ.19ರಂದು ಕುಶಾಲನಗರ ಪರಂಪರಾ ರೆಸಾರ್ಟ್ನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಸೀತಾರಾಮ ಭಟ್ ಕಲ್ಲಮ ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿಗಳಾದ ಗುಣಕರ ಶೆಟ್ಟಿ ಮತ್ತು ರವಿಸ್ನೇಹಿತ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸನ್ಮಾನ ನೆರವೇರಿಸಲಿದ್ದಾರೆ.