ಪುತ್ತೂರು: ಜೀವನದಲ್ಲಿ ಜ್ಞಾನ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗುಣಗಳನ್ನು ಬೆಳೆಸಿ ಕೊಳ್ಳಬೇಕು ಎಂದು ಪುತ್ತೂರಿನ ನಿಧಿ ಫುಡ್ ಪ್ರಾಡಕ್ಟ್, ಅಭಿಜ್ಞಾನ ಫುಡ್ ಪ್ರೈವೇಟ್ ಲಿಮಿಟೆಡ್ ಮರ್ಕ್ಯುರಿ ಏಜೆನ್ಸೀಸ್ ನರಿಮೊಗರು ಇದರ ಮಾಲಕರಾದ ರಾಧಾಕೃಷ್ಣ ಇಟ್ಟಿಗುಂಡಿ ಹೇಳಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ವಿಜ್ಞಾನ ವಿಭಾಗ ಹಾಗೂ ವಿಜ್ಞಾನ ವೇದಿಕೆ ಇದರ ಸಹಯೋಗದೊಂದಿಗೆ ಅಕ್ಟೋಬರ್ 17 ರಂದು ಕಾಲೇಜು ಸಭಾಂಗಣದಲ್ಲಿ
‘ಫಿಲೋ ವೇವ್ಸ್ 2025’ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಇವರು ನಾವು ಜೀವನದಲ್ಲಿ ಇಚ್ಛಾಶಕ್ತಿ, ಜ್ಞಾನ ಶಕ್ತಿ ಹಾಗೂ ಕ್ರಿಯಾ ಶಕ್ತಿಯನ್ನು ಬಳಸಿಕೊಂಡು ಸಾಧನೆಯನ್ನು ಮಾಡುವ ಅಗತ್ಯತೆ ಇದೆ. ಕೃಷಿ ಮತ್ತು ತೋಟಗಾರಿಕಾ ವಿಭಾಗಗಳು ವಿದ್ಯಾರ್ಥಿಗಳಿಗೆ ಸಾಕಷ್ಟು ಜ್ಞಾನ ಮತ್ತು ಸಂಶೋಧನೆಗೆ ಅವಕಾಶಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಬಹುದಾಗಿದೆ. ಹಾಗೆಯೇ ಫುಡ್ ಟೆಕ್ನಾಲಜಿ ವಿಭಾಗಗಳು ಇಂದು ಉತ್ತಮ ಅವಕಾಶಗಳನ್ನು ನೀಡುತ್ತಿದ್ದು, ಮುಖ್ಯವಾಗಿ ಉನ್ನತ ವ್ಯಾಸಂಗಕ್ಕೆ ಮತ್ತು ಸಂಶೋಧನೆಗಳಿಗೆ ವಿಪುಲ ಅವಕಾಶಗಳಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ,ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಮತ್ತು ಸಂಶೋಧನೆಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿದುಕೊಂಡು ಈ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಹುದಾಗಿದೆ. ಇಂತಹ ಹಲವಾರು ವಲಯಗಳು ಇಂದಿನ ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಆಸಕ್ತಿ ಮತ್ತು ಸಂಶೋಧನಾ ಮನಸ್ಥಿತಿಯೊಂದಿಗೆ ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡರೆ, ಉನ್ನತ ಸಾಧನೆಯನ್ನು ಮಾಡಬಹುದು ಎಂದು ತಿಳಿಸಿದರು.

ವೇದಿಕೆಯಲ್ಲಿ ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ ಡಿ ಹಾಗೂ ವಿಜ್ಞಾನ ವೇದಿಕೆಯ ನಿರ್ದೇಶಕರಾದ ಶಿಲ್ಪಾ ಎಮಿಲ ರೋಡ್ರಿಗಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜ್ಞಾನದ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಚಿತ್ರಕಲೆ, ವಿಜ್ಞಾನ – ಪೋಸ್ಟರ್ ಮೇಕಿಂಗ್, ವಿಜ್ಞಾನ ಮಾದರಿ ತಯಾರಿ, ವಿಜ್ಞಾನ ವಿಷಯದ ಫ್ಯಾಷನ್ ಶೋ ಹಾಗೂ ವಿಜ್ಞಾನ ಜಾಹೀರಾತು- ಮ್ಯಾಡ್ ಆಡ್ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ. ಡಿ ಸ್ವಾಗತಿಸಿ,ವಿದ್ಯಾರ್ಥಿಗಳಾದ ತ್ರಿಷಾ ರೈ ವಂದಿಸಿ, ಪ್ರಾಧೀ ಕ್ಲಾರೆ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.