ನೇಸರ ದಶ ಪ್ರಣತಿ ಅದೃಷ್ಟ ಚೀಟಿ : ಕಾನಾವು ನಿವಾಸದಲ್ಲಿ ಬಿಡುಗಡೆ

0

ನೇಸರ ಸಂಘಟನೆಯ ಸಮಾಜಮುಖಿ ಚಿಂತನೆ ಮಾದರಿ – ಡಾ|ನರಸಿಂಹ ಶರ್ಮ ಕಾನಾವು
ದಶ ವರ್ಷದ ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ – ನರಸಿಂಹ ತೇಜಸ್ವಿ ಕಾನಾವು
ಅದೃಷ್ಟ ಚೀಟಿಯ ಉಳಿಕೆ ಹಣ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗ – ಜಗನ್ನಾಥ ಪೂಜಾರಿ ಮುಕ್ಕೂರು

ಪುತ್ತೂರು: ಸಮಾಜಮುಖಿ ಚಿಂತನೆಯ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದಿರುವ ಮುಕ್ಕೂರು ನೇಸರ ಯುವಕ ಮಂಡಲವೂ ಹತ್ತನೇ ವರ್ಷದ ಹೊಸ್ತಿಲಿನಲ್ಲಿ ನಿಂತಿರುವುದು ಸಂತಸದ ಸಂಗತಿ. ಸಮಾಜದ ಕಾರ್ಯದ ಆಶಯದೊಂದಿಗೆ ಹೊರ ತಂದಿರುವ ದಶಪ್ರಣತಿ ಅದೃಷ್ಟ ಚೀಟಿಗೆ ಊರ ಬಂಧುಗಳು ಬೆಂಬಲ ನೀಡಲಿದ್ದಾರೆ. ತನ್ಮೂಲಕ ದಶಪ್ರಣತಿ ಆಚರಣೆ ಊರ ಸಂಭ್ರಮವಾಗಿ ಮೂಡಿ ಬರಲಿ ಎಂದು ವೈದ್ಯ ಡಾ|ನರಸಿಂಹ ಶರ್ಮ ಕಾನಾವು ಹೇಳಿದರು.

ಮುಕ್ಕೂರು ನೇಸರ ಯುವಕ ಮಂಡಲದ ದಶ ಸಂಭ್ರಮ ಪ್ರಯುಕ್ತ ಹೊರ ತಂದಿರುವ ದಶ ಪ್ರಣತಿ ಅದೃಷ್ಟ ಚೀಟಿಯನ್ನು ತನ್ನ ಕಾನಾವು ನಿವಾಸದಲ್ಲಿ ಅ.17 ರಂದು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಘಟನೆಗಳು ಸಮಾಜದ ಪರ ಚಿಂತನೆ ನಡೆಸಿದಾಗ ಸಮಾಜವೂ ಬೆಂಬಲ ನೀಡುತ್ತದೆ. ಆ ಕಾರ್ಯ ನೇಸರ ಯುವಕ ಮಂಡಲದ ಮೂಲಕ ಆಗಿರುವುದಕ್ಕೆ ಹತ್ತು ವರ್ಷಗಳ ಯಶಸ್ಸಿನ ಪಯಣ ಉದಾಹರಣೆ. ತನ್ನ ಹೊಸತನದ ಯೋಚನೆ, ಯೋಜನೆಗಳ ಮೂಲಕ ನೇಸರ ಹತ್ತೂರಿನಲ್ಲಿ ಗುರುತಿಸಿಕೊಂಡಿದೆ ಎಂದು ಡಾ.ನರಸಿಂಹ ಶರ್ಮ ಹೇಳಿದರು.

ಇಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ನನ್ನ ತಂದೆಯವರಾದ ದಿ.ತಿರುಮಲೇಶ್ವರ ಭಟ್ ಕಾನಾವು ಅವರ ಮೂಲಕ ಉದ್ಘಾಟನೆಗೊಂಡ ನೇಸರ ಯುವಕ ಮಂಡಲ ದಶ ವರ್ಷದ ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಯುವಕ ಮಂಡಲ ತನ್ನ ಮಾದರಿ ಕಾರ್ಯಕ್ರಮದ ಮೂಲಕ ಸಾಧನೆ ತೋರಿರುವುದು ಖುಷಿ ತಂದಿದೆ. ಆ ಮೂಲಕ ಸಂಘಟನೆ ಸ್ಥಾಪನೆಗೂ ಅರ್ಥ ತುಂಬಿದೆ. ಸಮಾಜಮುಖಿ ಉದ್ದೇಶದೊಂದಿಗೆ ಹೊರ ತಂದಿರುವ ಅದೃಷ್ಟ ಚೀಟಿ ಅತ್ಯುತ್ತಮ ಪ್ರಯತ್ನ ಎಂದರು.

ಮುಕ್ಕೂರು ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ನೇಸರ ಯುವಕ ಮಂಡಲ ಕಳೆದ 9 ವರ್ಷಗಳಿಂದ ಸರಿ ಸುಮಾರು 55 ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಇದಕ್ಕೆ ಕಾರಣ ಮುಕ್ಕೂರಿನ ಪ್ರತಿ ಮನೆಯವರು. ಅವರ ಸಹಕಾರದಿಂದ, ಪ್ರೋತ್ಸಾಹದಿಂದ ಯುವಕ ಮಂಡಲ ದಶ ವರ್ಷ ಪೂರೈಸಲು ಸಾಧ್ಯವಾಗಿದೆ. ದಶ ಪ್ರಣತಿಯ ಹೆಸರಿನಲ್ಲಿ ಯುವಕ ಮಂಡಲವೂ ಅದೃಷ್ಟ ಚೀಟಿ ಹೊರ ತಂದಿದ್ದು ಇದಕ್ಕೆ ಊರವರ ಬೆಂಬಲ ಕೋರುತ್ತಿದ್ದೇವೆ. ಇದರಲ್ಲಿ ಉಳಿಕೆಯಾದ ಹಣವನ್ನು ಶ್ರದ್ಧಾಕೇಂದ್ರಗಳಿಗೆ, ಬಡವರಿಗೆ, ಸಮಾಜದ ಅಗತ್ಯತೆಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಂಕರಿ ಗೋಪಾಲಕೃಷ್ಣ ಭಟ್, ಸೌಮ್ಯಲಕ್ಷ್ಮೀ ಕಾನಾವು, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಸದಸ್ಯರಾದ ಜಯಂತ ಕುಂಡಡ್ಕ, ರವಿ ಕುಂಡಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here