ಶಂಶುಲ್ ಉಲೆಮಾ ಜೀವನ ಶೈಲಿ ನಮಗೆ ಮಾದರಿ-ಜಲಾಲುದ್ದೀನ್ ತಂಙಳ್
ರಾಮಕುಂಜ: ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಆಶ್ರಯದಲ್ಲಿ ಸಮಸ್ತ 100ನೇ ವಾರ್ಷಿಕ ಪ್ರಚಾರ ಸಮ್ಮೇಳನ ಹಾಗೂ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಕಾರ್‍ಯಕ್ರಮ ಅ.18ರಂದು ಗಂಡಿಬಾಗಿಲು ಖುತುಬಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.
ಕೇರಳ ಕುನ್ನುಂಗೈಯ ಎನ್.ಪಿ.ಎಂ. ಸೆಯ್ಯದ್ ಜಲಾಲುದ್ದೀನ್ ತಂಙಳ್ ಅಲ್‌ಬುಖಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಂಶುಲ್ ಉಲೆಮಾ, ಕನ್ನೀಯತ್ ಉಸ್ತಾದ್ ಮೊದಲಾದ ಸಮಸ್ತ ನಾಯಕರ ಸರಳ ಜೀವನ ಶೈಲಿ ಮತ್ತು ಅವರುಗಳಿಗೆ ದೀನಿ ಸೇವೆಗಳ ಬಗೆಗಿನ ಬದ್ಧತೆ ನಮಗೆ ಮಾದರಿ ಆಗಬೇಕು ಎಂದ ಅವರು ಮುಂದಿನ ಜನವರಿ ತಿಂಗಳಲಿನಲ್ಲಿ ನಡೆಯುವ 100ನೇ ವಾರ್ಷಿಕೋತ್ಸವ ಸಮಾರಂಭದ ಯಶಸ್ವಿಗಾಗಿ ನಾವುಗಳು ಸಂಘಟಿತರಾಗಿ ಶ್ರಮಿಸಬೇಕಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಕೇರಳ ಪಾನತ್ತೂರು ಹಝೀಝ್ ಅಶ್ರಫಿ ಮಾತನಾಡಿ ನಾನು ಸಮಸ್ತ ಅನುಯಾಯಿ ಎಂದು ಕೇವಲ ಧ್ವಜ ಹಿಡಿದರೆ ಸಾಲದು ಅದರ ಆಶಯ, ಧ್ಯೇಯ, ಧೋರಣೆಗಳಗೆ ಬದ್ಧರಾಗಿರಬೇಕು ಎಂದರು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಿದರು. ಕರ್ವೇಲು ಬದ್ರಿಯಾ ಜುಮಾ ಮಸೀದಿ ಖತೀಬ್ ಸೆಯ್ಯದ್ ಅನಸ್ ಹಾದೀ ತಂಙಳ್ ಮೌಲೀದ್ ಪಾರಾಯಣಕ್ಕೆ ನೇತೃತ್ವ ನೀಡಿದರು. ಗಂಡಿಬಾಗಿಲು ಖುತುಬಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ ರೆಂಜಿಲಾಡಿ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಂಡಿಬಾಗಿಲು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಕಾರ್‍ಯದರ್ಶಿ ನಝೀರ್ ಪೂರಿಂಗ, ಪದಾಧಿಕಾರಿಗಳಾದ ಹಸೈನಾರ್ ಹಾಜಿ, ಜಿ. ಮಹಮ್ಮದ್ ರಫೀಕ್, ಯಂಗ್‌ಮೆನ್ಸ್ ಪದಾಧಿಕಾರಿಗಳಾದ ನಿಝಾರ್, ಪಿ. ಲತೀಫ್, ಎಸ್.ಕೆ.ಎಸ್.ಎಸ್.ಎಫ್. ಪದಾಧಿಕಾರಿಗಳಾದ ಇಸಾಕ್ ಬೊಳುಂಬುಡ, ಎಸ್.ಪಿ. ಖಲಂದರ್, ಝಿಯಾದ್ ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಶರೀಫ್ ದಾರಿಮಿ ಸ್ವಾಗತಿಸಿ, ರಫೀಕ್ ಗೋಳಿತ್ತಡಿ ಕಾರ್‍ಯಕ್ರಮ ನಿರೂಪಿಸಿದರು.