ವಿಜಯಾ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮ್ಯಾನೇಜರ್ ಅಗರಿ ಮೋಹನ್‌ದಾಸ್ ಭಂಡಾರಿಯವರಿಗೆ ಶ್ರದ್ಧಾಂಜಲಿ

0

ಮೋಹನ್‌ದಾಸ್ ಭಂಡಾರಿಯವರ ಬದುಕು ಸಮಾಜಕ್ಕೆ ಮಾದರಿ- ಡಾ. ವಿ.ಕೆ.ಹೆಗ್ಡೆ

ಪುತ್ತೂರು: ವಿಜಯಾ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮ್ಯಾನೇಜರ್ ಮೋಹನ್‌ದಾಸ್ ಭಂಡಾರಿಯವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆಯು ಅ.18 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಜರಗಿತು.


ವೈದ್ಯರಾದ ಡಾ. ವಿ.ಕೆ.ಹೆಗ್ಡೆಯವರು ಮಾತನಾಡಿ ದಿ.ಅಗರಿ ಲಕ್ಕಪ್ಪ ಭಂಡಾರಿ ಮತ್ತು ದಿ. ಬೆಳ್ಳಿಪ್ಪಾಡಿ ಲೀಲಾವತಿ ಭಂಡಾರಿಯವರ ಆರು ಮಕ್ಕಳಾದ ಕರ್ನಲ್ ಜಗಜೀವನ್ ಭಂಡಾರಿ, ದಿ. ಅಗರಿ ಮೋಹನ್‌ದಾಸ್ ಭಂಡಾರಿ, ಸಹಕಾರಿ ಧುರೀಣರಾಗಿದ್ದ ದಿ. ಅಗರಿ ಜೀವನ್ ಭಂಡಾರಿ, ಸಹಕಾರರತ್ನ ಅಗರಿ ನವೀನ್ ಭಂಡಾರಿ, ಶೋಭಾ ಚಂದ್ರಹಾಸ್ ಶೆಟ್ಟಿ ಹಾಗೂ ಅಗರಿ ಭಗವಾನ್‌ದಾಸ್ ಭಂಡಾರಿ ಅವರುಗಳಲ್ಲಿ ಎರಡನೇಯವರಾದ ಅಗರಿ ಮೋಹನ್‌ದಾಸ್ ಭಂಡಾರಿಯವರು ತಮ್ಮ ಕಾಲೇಜ್ ವಿದ್ಯಾಭ್ಯಾಸವನ್ನು ಪುತ್ತೂರಿನಲ್ಲಿ ಮಾಡಿದ್ದರು, ಇವರು ಉತ್ತಮ ಕ್ರೀಡಾಪಟುವಾಗಿದ್ದರು.

ದೆಹಲಿ, ಜೆಮ್‌ಶೆಡ್‌ಪುರ, ಮದ್ರಾಸ್, ಕೋಲ್ಕತಾ, ಬೆಂಗಳೂರಿನ ಹೊಸರು, ಮೂಡಾಲಪಾಳ್ಯ, ದೊಮ್ಮಲೂರು, ಪುತ್ತೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 35 ವರ್ಷಗಳ ಕಾಲ ವಿಜಯಾ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಗ್ರಾಹಕರ, ಸಿಬ್ಬಂದಿಗಳ ಮತ್ತು ಬ್ಯಾಂಕಿನ ಆಡಳಿತ ವರ್ಗದವರ ಪ್ರೀತಿ- ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೋಹನ್‌ದಾಸ್ ಭಂಡಾರಿಯವರು ಕುಟುಂಬ ಪ್ರೇಮಿಯಾಗಿದ್ದರು, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದರು. ಅಣ್ಣ ತಮ್ಮಂದಿರೊಂದಿಗೆ ಅನ್ಯೋನ್ಯತೆಯಿಂದ ಇರುತ್ತಿದ್ದರು, ಬ್ಯಾಂಕ್ ಅಧಿಕಾರಿಯಾಗಿದ್ದರೂ ಎಲ್ಲರೊಂದಿಗೆ ಅತ್ಮೀಯತೆಯಿಂದ ಬೆರೆಯುತ್ತಿದ್ದ ಮೋಹನ್‌ದಾಸ್ ಭಂಡಾರಿಯವರ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿನಮನ ಸಲ್ಲಿಸಿದರು.

ಮೋಹನ್‌ದಾಸ್ ಭಂಡಾರಿಯವರ ಪತ್ನಿ ಶಕುಂತಳಾ ಮೋಹನ್‌ದಾಸ್ ಭಂಡಾರಿ, ಮಕ್ಕಳಾದ ಭವ್ಯ ಎನ್ ರೈ, ದಿವ್ಯಾ ಭಂಡಾರಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಸಹೋದರರಾದ ಕರ್ನಲ್ ಅಗರಿ ಜಗಜೀವನ್ ಭಂಡಾರಿ, ‘ಸಹಕಾರರತ್ನ’ ಅಗರಿ ನವೀನ್ ಭಂಡಾರಿ, ಅಗರಿ ಭಗವಾನ್‌ದಾಸ್ ಭಂಡಾರಿ, ಸಹೋದರಿ ಶೋಭಾ ಸಿ.ಶೆಟ್ಟಿ ಹಾಗೂ ತಾಳಿಪಡ್ಪು, ಅಗರಿ ಹಾಗೂ ಸಂಪಿಗೆದಡಿ ಕುಟುಂಬಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಹಕಾರ ಕ್ಷೇತ್ರದ ಪ್ರಮುಖರು, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ, ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here