





ಸೋಲನ್ನು ಪ್ರೇರಣೆಯಾಗಿ ಸ್ವೀಕರಿಸಿ ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿ : ವಿಶ್ವೇಶ್ವರ್ ಭಟ್ ಬಂಗಾರಡ್ಕ


ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕಾಲೇಜಿನ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಪ್ರಜ್ವಲನೆ






ಪುತ್ತೂರು: ಯಾವುದೇ ಕೆಲಸ-ಕಾರ್ಯಗಳನ್ನು ನಾವು ಕೈಗೊಳ್ಳುವಾಗ ಅದರಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ಜೀವನದಲ್ಲಿ ಎದುರಾಗುವ ಇಂತಹ ಅಡೆ ತಡೆಗಳಿಂದ ವಿಚಲಿತರಾಗದೆ, ಅದನ್ನೇ ಸವಾಲಾಗಿ ಸ್ವೀಕರಿಸಿ, ಶ್ರಮಿಸಿದ್ದಲ್ಲಿ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಪ್ರಾವೀಣ್ಯರಾಗಿರುತ್ತಾರೆ. ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಒತ್ತಡದ ಮಧ್ಯೆ ಸ್ವಲ್ಪ ಸಮಯವನ್ನು ಕ್ರೀಡೆಗಾಗಿ ಮೀಸಲಿಟ್ಟು, ಸೋಲು-ಗೆಲುವುಗಳ ಬಗ್ಗೆ ತಲೆ ಕೆಡಿಸದೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸೋಲು-ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾರು ಗೆಲ್ಲುತ್ತಾನೋ ಅವನು ಜೀವನದಲ್ಲಿ ಸಂತೋಷವನ್ನು ಕಂಡುಕೊಂಡರೆ, ಸೋತವನು ಕುಗ್ಗದೆ ಎಡವಿದ ಹೆಜ್ಜೆಗಳನ್ನು ಗುರುತಿಸಿ, ಅದನ್ನು ತಿದ್ದಿಕೊಂಡು ಜೀವನದ ಸವಾಲುಗಳನ್ನು ಎದುರಿಸುವ ಪಾಠವನ್ನು ಕಲಿಯಬೇಕು” ಎಂದು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ ವಿಶ್ವೇಶ್ವರ್ ಭಟ್ ಬಂಗಾರಡ್ಕ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ವಾರ್ಷಿಕ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ. ಕೃಷ್ಣಪ್ರಸನ್ನ ಕೆ ಭಾಗವಹಿಸಿ “ಇಂದಿನ ವಿದ್ಯಾರ್ಥಿ ಹಾಗೂ ಹೆತ್ತವರ ಮನೋಭಾವ ಕೇವಲ ಉತ್ತಮ ಅಂಕಗಳನ್ನು ಗಳಿಸಿ, ಉನ್ನತ ಉದ್ಯೋಗವನ್ನು ಪಡೆಯುವತ್ತ ಕೇಂದ್ರೀಕೃತವಾಗಿದೆ. ಉತ್ತಮ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಜೊತೆಗೆ ಸದೃಢ ಆರೋಗ್ಯವು ಅಷ್ಟೇ ಮುಖ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಗೆಲ್ಲುವ ಉತ್ಸಾಹ ಹಾಗೂ ಛಲದ ಮೂಲಕ ತಮ್ಮ ವಿಶೇಷ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದಲ್ಲಿ, ಆಟ-ಪಾಠದ ಜೊತೆಗೆ ಜೀವನದಲ್ಲೂ ಯಶಸ್ಸನ್ನು ಕಂಡುಕೊಂಡು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು” ಎನ್ನುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ ವಹಿಸಿಕೊಂಡರು. ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಕ್ರೀಡಾಸಮವಸ್ತ್ರವನ್ನು ಧರಿಸಿದ ಕಾಲೇಜಿನ ವಿದ್ಯಾರ್ಥಿಗಳು ಶಿಸ್ತುಬದ್ಧವಾದ ಪಥಸಂಚಲನವನ್ನು ನಡೆಸಿದರು. ಆಯಾ ತರಗತಿ ಪ್ರತಿನಿಧಿಗಳು ಅತಿಥಿಗಳಿಗೆ ತಮ್ಮ ತರಗತಿ ಹಾಗೂ ತರಗತಿಯ ಕ್ರೀಡಾ ಸಾಧಕರನ್ನು ಪರಿಚಯಿಸಿದರು. ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕಾಲೇಜಿನ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿ ಉದ್ಘಾಟಕರಿಗೆ ಹಸ್ತಾಂತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ.ಎಸ್ ಅವರ ಮಾರ್ಗದರ್ಶನದೊಂದಿಗೆ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಸಾತ್ವಿಕ್. ಆರ್ ಎಲ್ಲಾ ಕ್ರೀಡಾಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ದೇವಿಚರಣ್ ರೈ ಎಂ, ದೈಹಿಕ ಶಿಕ್ಷಣ ನಿರ್ದೇಶಕರಾದ ಯತೀಶ್ ಕುಮಾರ್ ಬಿ, ಡಾ. ಜ್ಯೋತಿಕುಮಾರಿ ಪಿ.ಸಿ, ಉಪನ್ಯಾಸಕ, ಉಪನ್ಯಾಸಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಕ್ರೀಡಾ ಜತೆಕಾರ್ಯದರ್ಶಿಯಾದ ಸಮೃದ್ಧಿ ಜೆ ಶೆಟ್ಟಿ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಿಷ್ ಜಿ ವಂದಿಸಿದರು. ಉಪನ್ಯಾಸಕರಾದ ಪಿ. ಕೆ. ಪರಮೇಶ್ವರ ಶರ್ಮ ಕಾರ್ಯಕ್ರಮ ನಿರೂಪಿಸಿದರು.











