ಅಶೋಕ ಜನಮನ ಕೃತಜ್ಞತಾ ಸಭೆ – ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆದ ದೀಪಾವಳಿ ಪ್ರಯುಕ್ತ 13ನೇ ವರ್ಷದ ವಸ್ತ್ರ ವಿತರಣಾ ಕಾರ್ಯಕ್ರಮ ಅಶೋಕ ಜನ-ಮನ-2025ರ ಕಾರ್ಯಕ್ರಮವು ಈ ಬಾರಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಸ್ವಲ್ಪ ಗೊಂದಲವಾಗಿದ್ದು, ಇದರ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಶಾಸಕ ಅಶೋಕ್ ರೈ ಹೇಳಿದರು.


ಶಾಸಕರ ಕಚೇರಿ ಸಭಾಭವನದಲ್ಲಿ ಅಶೋಕ ಜನಮನ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಟ್ರಸ್ಟ್ ಕಾರ್ಯಕರ್ತರಿಗೆ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಬಂದಿದ್ದ ಕೆಲವರು ಜನಸ್ತೋಮ ನೋಡಿ ಅರ್ಧದಿಂದಲೇ ತೆರಳಿದ್ದಾರೆ. ಮತ್ತು ಕೆಲವರಿಗೆ ಜನಸ್ತೋಮದ ನಡುವೆ ವಸ್ತ್ರ ಉಡುಗೊರೆ ಸಿಕ್ಕಿಲ್ಲ, ಇದು ನನ್ನ ಮನಸ್ಸಿಗೆ ಅತ್ಯಂತ ನೋವಾಗಿದೆ. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಸ್ವಲ್ಪ ಸಮಸ್ಯೆಯಾಗಿದ್ದರಿಂದ ಈ ರೀತಿಯಾಗಿದೆ. ಈ ರೀತಿ ಇನ್ನು ಮುಂದಿನ ಜನಮನ ಕಾರ್ಯಕ್ರಮದಲ್ಲಿ ನಡೆಯುವುದಿಲ್ಲ ಎಂಬ ಭರವಸೆಯನ್ನು ನೀಡುವುದಾಗಿ ಹೇಳಿದ ಶಾಸಕರು ಸಾಮಾಜಿಕ ನ್ಯಾಯ ಕೊಡಿಸುವುದು ನನ್ನ ಜವಾಬ್ದಾರಿ ಇದಕ್ಕಾಗಿ ಸರ್ವರ ಸಹಕಾರವನ್ನು ಕೋರಿದರು.

ದೊಡ್ಡ ಕಾರ್ಯಕ್ರಮದಲ್ಲಿ ಎಡವಟ್ಟು ಸಹಜ: ಸುದೇಶ್ ಶೆಟ್ಟಿ
ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಮಾತನಾಡಿ, ಈ ಬಾರಿಯ ಅಶೋಕ ಜನಮನ ಅದ್ದೂರಿಯಾಗಿ ನಡೆದಿದೆ. ದೊಡ್ಡ ಕಾರ್ಯಕ್ರಮ ಮಾಡುವಾಗ ಸಣ್ಣ ಪುಟ್ಟ ಎಡವಟ್ಟುಗಳು ಸಹಜವಾಗಿರುತ್ತದೆ. ಮಳೆಯ ಅಬ್ಬರದ ನಡುವೆ ಕೆಲವು ಜನರಿಗೆ ಉಡುಗೊರೆ ಪಡೆಯಲು ಸಾಧ್ಯವಾಗಿಲ್ಲ ಇದಕ್ಕೆ ನಮ್ಮ ವಿಷಾದವಿದೆ. ಸ್ವಯಂ ಸೇವಕರ ಸಹಕಾರ ಹಾಗೂ ಟ್ರಸ್ಟ್ ಸದಸ್ಯರ ಬೆಂಬಲದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.


ಟ್ರಸ್ಟ್‌ನ ನಿಹಾಲ್ ಪಿ ಶೆಟ್ಟಿ, ನಿರಂಜನ್ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿಯವರು ಮಾತನಾಡಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಸದಸ್ಯರಾದ ಕೃಷ್ಣಪ್ರಸಾದ್ ಆಳ್ವ, ಉಮನಾಥ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಪದ್ಮನಾಭ ಪೂಜಾರಿ ಸಣ್ಣಗುತ್ತು, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here