ಪುತ್ತೂರು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಚಿಕ್ಕ ಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆಯಲ್ಲಿ ಪ್ರೇಮ (50 ವ.) ಎಂಬವರು ವಾಸಿಸುತ್ತಿದ್ದ ಸಣ್ಣ ಜೋಪಡಿ ಕುಸಿದುಬಿದ್ದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಕೆಲವ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಪ್ರೇಮ ಅವರಿಗೆ ಪೋಷಕರು ತಮ್ಮ ಮನೆಯ ಸಮೀಪವೇ ಪುಟ್ಟದಾದ ಜೋಪಡಿಯೊಂದನ್ನು ನಿರ್ಮಿಸಿ ಕೊಟ್ಟಿದ್ದರು. ವಾರದ ಹಿಂದೆ ಸುರಿದ ಗಾಳಿ ಮಳೆಗೆ ಜೋಪಡಿ ಕುಸಿದು ಬಿದ್ದಿದ್ದು, ಕೂಡಲೇ ಎಚ್ಚೆತ್ತ ಪ್ರೇಮ, ಮನೆಯೊಳಗಿಂದ ಓಡಿ ಹೋರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರೇಮ ಅವರಿಗೆ ಮಗಳಿದ್ದು, ವಿವಾಹ ಮಾಡಿ ಕೊಡಲಾಗಿದೆ. ಅಲ್ಲದೆ, ಲಲಿತಾ ಎಂಬ ವಿವಾಹಿತ ಸಹೋದರಿ ಇದ್ದು, ಈಕೆ ಮತ್ತು ಈಕೆಯ ಪತಿ ಇಬ್ಬರೂ ಮೃತಪಟ್ಟಿದ್ದಾರೆ. ಇವರ ವಂಶದ ಕುಡಿಗಳಾಗಿರುವ ಮೇಘ (೧೭), ಚೇತನ್ (17) ಎಂಬವರ ಲಾಲನೆ ಪಾಲನೆ ಪ್ರೇಮ ಅವರೇ ನೋಡಿಕೊಳ್ಳುತ್ತಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಜೋಪಡಿಯಲ್ಲಿ ವಾಸಿಸುತ್ತಿರುವ ಪ್ರೇಮ ಅವರು ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿ ಎರಡು ದನಗಳನ್ನು ಸಾಕುತ್ತಿದ್ದು, ಅದರಿಂದ ಬರುವ ಅಲ್ಪ ಹಣದಿಂದ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದ್ದರೂ ಪ್ರೇಮ ನೆಲೆಸಿರುವ ಜಾಗವು ಅವರ ಪೋಷಕರ ಹೆಸರಿನಲ್ಲಿದೆ. ಜೋಪಡಿ ಮನೆ ಕುಸಿದು ಬಿದ್ದಿರುವುದರಿಂದ ಪಕ್ಕದಲ್ಲಿರುವ ತಾಯಿ ಮನೆಯಲ್ಲಿ ಪ್ರೇಮ ಅವರು ಆಶ್ರಯ ಪಡೆದುಕೊಂಡಿದ್ದಾರೆ. ಸದ್ಯ ಇವರು ದಾನಿಗಳ ಸಹಾಯವನ್ನು ಯಾಚಿಸುತ್ತಿದ್ದು, ಮನೆ ದುರಸ್ತಿ ಅಥವಾ ಸಣ್ಣ ಮನೆಯೊಂದನ್ನು ನಿರ್ಮಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ.
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಭೇಟಿ
ಮನೆ ಕುಸಿತದ ಮಾಹಿತಿ ತಿಳಿದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಕೆಮ್ಮಿಂಜೆ ವಲಯ ಅಧ್ಯಕ್ಷರೂ ಆಗಿರುವ ನಿವೃತ್ತ ಎಎಸ್ಐ ಲೋಕನಾಥ ಗೌಡ, ಟ್ರಸ್ಟ್ನ ಪ್ರೇರಕಿ ಪುಷ್ಪ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರೇಮ ಅವರು ನೆರವಿನ ಮನವಿಯನ್ನು ನೀಡಿದ್ದಾರೆ.
