ಪುತ್ತೂರು: ಪಶುಪಾಲನೆ ಮತ್ತು ಪಶು ವೈದ್ಯಾಕೀಯ ಸೇವಾ ಇಲಾಖೆ ಪುತ್ತೂರು ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕೌಡಿಚ್ಚಾರು ಇದರ ಆಶ್ರಯದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರವು ಅ.28 ರಂದು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಿತು.
ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಗ್ರಾಮದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದು ಈ ರೀತಿ ಬೀದಿಯಲ್ಲಿ ಸುತ್ತಾಡುವ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆಯೂ ಅಧಿಕ ಇರುವುದರಿಂದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿನ ಸಾಕು ನಾಯಿಗಳಿಗೆ ಹುಚ್ಚು ರೋಗ ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು. ಪಾಣಾಜೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಂ.ಪಿ.ಪ್ರಕಾಶ್ರವರು ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಕೌಡಿಚ್ಚಾರು ಹಿರಿಯ ಪಶು ವೈದ್ಯ ಪರೀಕ್ಷರಾದ ಡಾ.ವೀರಪ್ಪ, ಪಂಚಾಯತ್ ಕಾರ್ಯದರ್ಶಿ ಜಯಂತಿ ಹಾಗೂ ಪಂಚಾಯತ್ ಸದಸ್ಯರುಗಳು, ಪಶು ಆಸ್ಪತ್ರೆಯ ಸಿಬ್ಬಂದಿಗಳಾದ ಪ್ರದೀಪ್, ಸರೋಜಾ, ಪಶು ಸಖಿ ಜ್ಯೋತಿ ಮತ್ತು ಸವಿತಾ ಹಾಗೇ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ ಸ್ವಾಗತಿಸಿ, ವಂದಿಸಿದರು.

ಗ್ರಾಮದ ಪರ್ಪುಂಜ ಶಾಲಾ ಬಳಿ, ಕುಟ್ಟಿನೋಪಿನಡ್ಕ ಜಂಕ್ಷನ್, ಮುಡಾಲ ಮರಾಠಿ ಸಂಘದ ಸಭಾಭವನದ ಬಳಿ, ದರ್ಬೆತ್ತಡ್ಕ ಶಾಲಾ ಬಳಿ, ಅಜಲಡ್ಕ ಸಮುದಾಯ ಭವನದ ಬಳಿ, ಕೈಕಾರ ಹಾಗೂ ಅಜ್ಜಿಕಲ್ಲು ಹಾಲು ಸೊಸೈಟಿ ಬಳಿ ಹೀಗೆ 7 ಕಡೆಗಳಲ್ಲಿ ಲಸಿಕಾ ಶಿಬಿರ ನಡೆಯಿತು. ಗ್ರಾಮದ ಹಲವು ಮಂದಿ ತಮ್ಮ ಮನೆಯ ಸಾಕು ನಾಯಿಗಳನ್ನು ಶಿಬಿರಕ್ಕೆ ತಂದು ಲಸಿಕೆ ಹಾಕಿಸಿಕೊಂಡರು.
‘ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹತೋಟಿಗೆ ತರದೇ ಹೋದರೆ ಅತ್ಯಂತ ಅಪಾಯ ಇದೆ. ಆದ್ದರಿಂದ ತಾಲೂಕಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸುವ ಅಗತ್ಯತೆ ತುಂಬಾ ಇದೆ. ಈ ಬಗ್ಗೆ ಇಲಾಖೆ ಅತ್ಯಂತ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ