ಆಲಂಕಾರು: ರಾಮಕುಂಜ, ಹಳೆನೇರೆಂಕಿ, ಆಲಂಕಾರು ,ಪೆರಾಬೆ ಪೇಟೆಯನ್ನು ಹೊರತು ಪಡಿಸಿ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಮುಂದುವರಿದಿದೆ.
ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಿಗ್ನಲ್ ಗೆ ಮನೆಯ ಮಹಡಿಯ ಮೇಲೆ, ಎತ್ತರದ ಪ್ರದೇಶಕ್ಕೆ ಮೊಬೈಲ್ ಹಿಡಿದುಕೊಂಡು ಹೋಗುವ ಪ್ರಮೇಯ ಒದಗಿ ಬಂದಿದೆ ಎಂದು ಗ್ರಾಮೀಣ ಪ್ರದೇಶದ ಬಳಕೆದಾರರು,ಸಾರ್ವಜನಿಕರು ಮೊಬೈಲ್ ನೆಟ್ ವರ್ಕ್ ಸಮಸ್ಯೆ ಪರಿಹರಿಸುವಂತೆ ಗ್ರಾ.ಪಂ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನೆಟ್ವರ್ಕ್ ಕಂಪನಿಗಳು ಎಲ್ಲಾ ಕಡೆ ನೆಟ್ ವರ್ಕ್ ಸಿಗುತ್ತದೆ ಎಂದು ಜಾಹೀರಾತು ನೀಡಿದರೂ ಕೆಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್ ವರ್ಕ್  ಸಮಸ್ಯೆಯಾಗಿಯೇ ಉಳಿದಿದೆ ಎಂದು ಸಾರ್ವಜನಿಕರು ಅಲವತ್ತು ತೋಡಿಕೊಂಡಿದ್ದಾರೆ.
ಇಂಟರ್ನೆಟ್ ವೇಗ ಆಮೆ ಗತಿಗೆ ಸಾಗಿದೆ
ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ ನೆಟ್ ವೇಗ ಆಮೆಗತಿಗೆ ಸಾಗಿದೆ. ವಾಟ್ಸಾಪ್ ಮೆಸೇಜ್ ಹೋಗುವಷ್ಟರಲ್ಲಿ ಮೊಬೈಲ್ ನೆಟ್ ವರ್ಕ್ ತಿರುಗಿ ತಿರುಗಿ ತಲೆಸುತ್ತು ಬರುತ್ತದೆ.
ಯೂಟ್ಯೂಬ್ ವಿಡಿಯೋ ಡೌನ್ ಲೋಡು ಆಗುವಷ್ಟರಲ್ಲಿ ಗಂಟೆಗಳೇ ಕಳೆದು ಹೋಗುತ್ತದೆ. ಮೊಬೈಲ್ ರೀಚಾರ್ಜ್ ಬೆಲೆಗಳು ಮಾತ್ರ ತಿಂಗಳಿನಿಂದ ತಿಂಗಳಿಗೆ ಜಾಸ್ತಿಯಾಗುತ್ತದೆ. ರಾಮಕುಂಜ ಗ್ರಾಮದ ಕಾಲೇಜು ಬಳಿ,ಮಾರಂಗ, ಅರ್ಭಿ,ಕುಂಡಾಜೆ,ಕಲ್ಲೇರಿ,ಕೊಂಡಪ್ಪಾಡಿ,ನೇಲಡ್ಕ, ಹಳೆನೇರೆಂಕಿ ಭಾಗದ ಮಡೆಂಜಿಮಾರು,ಪರಕ್ಕಲು,ಕದ್ರ,ಕಟ್ಟಪುಣಿ,ಬರೆಂಬೆಟ್ಟು,ಹಿರಿಂಜ,ಆಲಂಕಾರು ,ಪೆರಾಬೆ ಭಾಗದ ಸುರುಳಿ,ಪರಾರಿ,ಮನವಳಿಕೆ,ಶರವೂರು ದೇವಸ್ಥಾನದ ಬಳಿ,ಪಜಡ್ಕ,ಕಕ್ವೆ,ನಗ್ರಿ ಸೇರಿದಂತೆ ಹಲವು ಕಡೆಗಳಲ್ಲಿ  ಇಂಟರ್ ನೆಟ್ ಸಮಸ್ಯೆಗಳು ಕಾಡುತ್ತಿದ್ದು,ಸಿಗ್ನಲ್ ಅಸ್ಥಿರತೆ ಹಾಗೂ ಇಂಟರ್ನೆಟ್ ಸಂಪರ್ಕದ ವ್ಯತ್ಯಯದಿಂದ ಸ್ಥಳೀಯರು ದಿನನಿತ್ಯದ ಸಂವಹನದಲ್ಲೇ ತೊಂದರೆ ಅನುಭವಿಸುತ್ತಿದ್ದಾರೆ.ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಸಂಪರ್ಕಿಸಲು, ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ನಿರ್ವಹಿಸಲು, ಮತ್ತು ಸಾಮಾನ್ಯ ಜನರು ತುರ್ತು ಕರೆಗಳನ್ನು ಮಾಡಲು ಕೂಡ ತೊಂದರೆಗೊಳಗಾಗಿದ್ದಾರೆ. ಸ್ಥಳೀಯರು ಮೊಬೈಲ್ ಸೇವಾ ಸಂಸ್ಥೆಗಳ ಮೇಲಾಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ .
ಜನರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಸ್ಥಿರ ನೆಟ್ವರ್ಕ್ ಸಂಪರ್ಕ,ಇಂಟರ್ ನೆಟ್ ಕಲ್ಪಿಸಲು ಸಂಬಂಧಿತ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ರಾಮಕುಂಜ ಗ್ರಾ.ಪಂ ಮೂಲಕ ಸಾರ್ವಜನಿಕರು ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಮಕುಂಜ ಗ್ರಾ.ಪಂ ಅಧ್ಯಕ್ಷರಾದ ಸುಚೇತಾ,ಗ್ರಾ.ಪಂ ಸದಸ್ಯರಾದ ಪ್ರಶಾಂತ ಆರ್.ಕೆ,ಸೂರಪ್ಪಕುಲಾಲ್ ಪ್ರಮುಖರಾದ ಸದಾಶಿವ ಶೆಟ್ಟಿ ಮಾರಂಗ, ಉಮೇಶ ಕಲ್ಲೇರಿ, ಲೋಕಯ್ಯ ಗೌಡ ಸಂಪ್ಯಾಡಿ,ಭವಾನಿ ಸಂಪ್ಯಾಡಿ, ಸೀತಾರಾಮ ಅರ್ಬಿ,ಶೇಖರ ಬಾಂತೊಟ್ಟು,ರಘನಾಥ ಪೂಜಾರಿ ಕಲ್ಲೇರಿ, ಸೇರಿದಂತೆ ಹಲವು ಮಂದಿ ಮೊಬೈಲ್ ಬಳಕೆದಾರರ ಸಹಿಯೊಂದಿಗೆ ಮನವಿಯನ್ನು ಗ್ರಾ.ಪಂ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
