





ಜೀರ್ಣೋದ್ದಾರ ಕಾರ್ಯಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿ-ಈಶ್ವರ ಭಟ್ ಪಂಜಿಗುಡ್ಡೆ


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಯ ವಿಚಾರದಲ್ಲಿ,ದೇವಳದ ಎದುರು ಇರುವ ಸಭಾಭವನದ ಕಟ್ಟಡ ತೆರವು ಮಾಡುವಲ್ಲಿ ಗೊಂದಲವಿದ್ದರೆ ಇನ್ನೊಂದು ಪ್ರಶ್ನಾಚಿಂತನೆ ಮಾಡೋಣ.ಅದು ಕೂಡಾ ಇದಕ್ಕೆ ಟಚ್ ಇಲ್ಲದ ದೈವಜ್ಞರನ್ನೇ ಕರೆಸಿ ಪ್ರಶ್ನಾ ಚಿಂತನೆ ಇಟ್ಟು ಮುಂದುವರಿಯೋಣ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.





ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ವಿಚಾರದಲ್ಲಿ ನ.2ರಂದು ದೇವಳದ ಸಭಾಭವನದಲ್ಲಿ ನಡೆದ ಭಕ್ತರ, ಗ್ರಾಮ ಸಮಿತಿ ಮತ್ತು ದೇವಳಗಳ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭಾಭವನ ತೆರವು ಮಾಡುವ ಮತ್ತು ಉಳಿಸಿಕೊಳ್ಳುವ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆಯ ಕೊನೆಯಲ್ಲಿ ಮಾತನಾಡಿದ ಅಶೋಕ್ ಕುಮಾರ್ ರೈಯವರು, ಇನ್ನೊಮ್ಮೆ ಪ್ರಶ್ನಾಚಿಂತನೆ ಮಾಡೋಣ.ಯಾರ ಒತ್ತಡವೂ ಬೇಡ.ಒನ್ ಟು ಒನ್ ಪ್ರಶ್ನೆಯನ್ನು ಕೇಳೋಣ.ಪ್ರಶ್ನೆ ಚಿಂತನೆ ಮಾಡಿ ಇದಕ್ಕೆ ಅಂತಿಮ ನಿರ್ಣಯ ಪಡೆಯುವುದು ಉತ್ತಮ ಎಂದು ಹೇಳಿದರು.ಭಕ್ತಾದಿಗಳು ಕರತಾಡನದ ಮೂಲಕ ಸಹಮತ ವ್ಯಕ್ತಪಡಿಸಿದರು.
ಸಭಾಭವನ ತೆರವಿಗೆ ಪ್ರಶ್ನಾ ಚಿಂತನೆಯಲ್ಲಿ ಸೂಚನೆ ಬಂದರೆ ಅದನ್ನು ಮಾಡೋಣ ಎನ್ನುವುದು ನನ್ನ ಅನಿಸಿಕೆ.ಈ ಹಾಲ್ನ ಆಚೆ ಬದಿಯಲ್ಲಿ 600 ಮಂದಿ ಸೇರುವ ಹಾಲ್ ನಿರ್ಮಾಣ ಮಾಡೋಣ ಎಂದು ಹೇಳಿದ ಶಾಸಕರು,ಒಂದುವೇಳೆ ಪ್ರಶ್ನಾಚಿಂತನೆ ಇಡದೆ ಜೀರ್ಣೋದ್ಧಾರ,ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕೊನೆಗೆ ಪ್ರಶ್ನೆ ಇಟ್ಟಾಗ ಮತ್ತೆ ಇದೇ ಕಟ್ಟಡದ ಸಮಸ್ಯೆ ಎದುರಾಗಬಾರದು.ಹಾಗಾಗಿ ಮತ್ತೊಮ್ಮೆ ಪ್ರಶ್ನೆ ಚಿಂತನೆ ಸೂಕ್ತ ಎಂದರು.ಮುಂದೆ ದೇವಳಕ್ಕೆ ಸ್ಮಶಾನದ ಬಳಿಯಲ್ಲಿ ಜಾಗ ಖರೀದಿ ಮಾಡಲೂ ಇದೆ ಎಂದವರು ಹೇಳಿದಾಗ ಭಕ್ತರು ಕರತಾಡನ ಮೂಲಕ ಸಹಮತ ವ್ಯಕ್ತಪಡಿಸಿದರು.ಗ್ರಾಮದ ಎಲ್ಲಾ ಸಮಿತಿಯನ್ನು ಸೇರಿಸಿಕೊಂಡು 2 ವರ್ಷದಲ್ಲಿ ದೇವಳದ ಜೀರ್ಣೋದ್ದಾರ ಕೆಲಸ ಕಾರ್ಯ ಮುಗಿಸಬೇಕು.ಡ್ರೈನೇಜ್ ಸಿಸ್ಟಮ್,ಎಸ್ಟಿಪಿ ಪ್ಲ್ಯಾಂಟ್ ಸಹಿತ ಎಲ್ಲಾ ವ್ಯವಸ್ಥೆ ಆಗಬೇಕಾಗಿದೆ.ಇದಕ್ಕೆ ಹಣದ ಜೋಡಣೆಯೂ ಆಗಬೇಕು.ಒಂದಷ್ಟು ಕಮಿಟಿ, ಉಪಸಮಿತಿ, ಜೀರ್ಣೋದ್ಧಾರ ಸಮಿತಿ ಜೊತೆಗೆ ಬ್ರಹ್ಮಕಲಶ ಸಮಿತಿ ಮಾಡಿ ಎರಡು ವರ್ಷದಲ್ಲಿ ಎಲ್ಲಾ ಕಾರ್ಯ ಪೂರ್ಣಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಒಟ್ಟು ನಮ್ಮ ಕಲ್ಪನೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜನ ಹೆಚ್ಚು ಬರಬೇಕು.ಇಡೀ ವಿಶ್ವದಲ್ಲೇ ಮಹಾಲಿಂಗೇಶ್ವರನ ಭಕ್ತರು ಇದ್ದಾರೆ.ಮುಂದಿನ ದಿನ ಕಂಬಳ ಸಮಿತಿ ಮೀಟಿಂಗ್ ಮಾಡಿ ಕಂಬಳದ ಗದ್ದೆಯನ್ನು ಸ್ಥಳಾಂತರಿಸುತ್ತೇವೆ.ದೇವಳದ ಅಯ್ಯಪ್ಪ ಗುಡಿ,ನಾಗನ ಗುಡಿಯ ಸ್ಥಳಾಂತರ ತಕ್ಷಣ ಮಾಡಲಾಗುವುದು.ಭಕ್ತರು ತಮ್ಮ ವಿಚಾರ ಏನಾದರೂ ಇದ್ದರೆ ನೇರವಾಗಿ ತಿಳಿಸಿ.ಅದರ ಬದಲು ವಾಟ್ಸಪ್ನಲ್ಲಿ ಬರೆದು ಹಾಕುವ ವಿಚಾರ ಮಾಡಬೇಡಿ.ಒಟ್ಟು ನಾವೆಲ್ಲ ಸೇರಿ ಮಹಾಲಿಂಗೇಶ್ವರ ದೇವರ ಅಭಿವೃದ್ಧಿ ಕೆಲಸದಲ್ಲಿ ಪಾಲ್ಗೊಳ್ಳೋಣ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಜೀರ್ಣೋದ್ದಾರ ಕಾರ್ಯಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾಲಿಂಗೇಶ್ವರ ದೇವರ ಪ್ರೇರಣೆಯಂತೆ,ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ನಮ್ಮ ಸಮಿತಿ ಬಂದು 10 ತಿಂಗಳಲ್ಲಿ ಹಲವಾರು ಬದಲಾವಣೆ ಆಗಿದೆ.ನಾವು ಧನು ಪೂಜೆಯಂದು ದೇವಳಕ್ಕೆ ಪ್ರವೇಶಿಸುವಾಗಲೇ ಭಕ್ತರಿಗೆ ಧನುಪೂಜೆ ವೀಕ್ಷಣೆಗೆ ಸುಮಾರು 1 ಲಕ್ಷ ರೂ.ಮೌಲ್ಯದ ಬೃಹತ್ ಎಲ್ಇಡಿ ಟಿವಿಯನ್ನು ಸಮಿತಿ ಸದಸ್ಯರೇ ಸೇರಿ ದೇವಸ್ಥಾನಕ್ಕೆ ಅಳವಡಿಸಿದ್ದೇವೆ.ಅದಾದ ಬಳಿಕ ನಿತ್ಯ ಪರಮಾನ್ನ ಸೇವೆ, ಮಹಾಲಿಂಗೇಶ್ವರ ದೇವರ ಜಾಗ ದೇವರಿಗೆ ಸಿಗಬೇಕೆಂದು ಸಂಕಲ್ಪ ಮಾಡಿ ದೇವಸ್ಥಾನದ ಸುಮಾರು ರೂ.60 ಕೋಟಿ ಮೌಲ್ಯದ 7 ಎಕ್ರೆ ಜಾಗ ದೇವಸ್ಥಾನಕ್ಕೆ ಲಭಿಸಿದೆ.ಜಾಗ ಬಿಟ್ಟು ಕೊಟ್ಟ ಕಡು ಬಡವರಿಗೆ ನಾನು ಮತ್ತು ಶಾಸಕರು ಸೇರಿ 22.43 ಲಕ್ಷ ರೂಪಾಯಿ ನೀಡಿದ್ದೇವೆ.ವಿಶೇಷವಾಗಿ ಅನ್ನದ ಅಗಳು ಮುತ್ತಾದ ಕೆರೆಯ ಬಳಿಯೇ ಜಾತ್ರೋತ್ಸವದಲ್ಲಿ ನಿರಂತರ ಅನ್ನದಾನ ಮಾಡಿದೆವು.ಪಲ್ಲಪೂಜೆಯಂದು ಕೊಪ್ಪರಿಗೆ ಅರ್ಧ ಫೀಟ್ ಹೂತು ಹೋಗಿ ಅಲ್ಲಿಂದ ಪುಷ್ಪವೊಂದು ಪ್ರಸಾದ ರೂಪವಾಗಿ ಬಿದ್ದು ಕಾರ್ಯಕ್ರಮದ ಯಶಸ್ಸಿಗೆ ಆಶೀರ್ವಾದ ದೊರೆತಿದೆ.ತಾಂಬೂಲ ಪ್ರಶ್ನೆಯಿಟ್ಟು ರಕ್ತೇಶ್ವರಿ ದೈವವನ್ನು ಒಳಗೆ ತಂದ ಬಳಿಕ ದೇವಳದ ಚಿತ್ರಣವೇ ಬದಲಾಯಿತು.ತುಪ್ಪದ ದೀಪ, ಶುದ್ಧ ಎಳ್ಳೆಣ್ಣೆ, ಎಳ್ಳೆಣ್ಣೆ ಅಭಿಷೇಕ, ಜಾತ್ರೆಯ ಸಂದರ್ಭ ಭಕ್ತರಿಂದಲೇ ಸಿಡಿಮದ್ದು ಪ್ರದರ್ಶನದ ಮೂಲಕ ದೇವಳಕ್ಕೆ ರೂ.8 ಲಕ್ಷ ಉಳಿಕೆ, ಗಣೇಶ ಚತುರ್ಥಿಯ ಹಬ್ಬಕ್ಕೆ ಪ್ರಥಮ ಬಾರಿಗೆ ಮೋದಕ ಹೋಮ, ನವರಾತ್ರಿಯ ಸಂದರ್ಭ ಗಾಯತ್ರಿ ಪೂಜೆಯೊಂದಿಗೆ ಒಂದೊಂದು ರೀತಿಯ ಅಭಿವೃದ್ಧಿಯಲ್ಲಿ ದೇವಳದಲ್ಲಿ ಭಕ್ತರ ಸಂಖ್ಯೆಯೂ ಅಧಿಕವಾಯಿತು.ಅನ್ನಪ್ರಸಾದ ವಿತರಣೆಗೆ ಭಕ್ತರಿಂದ ಅಕ್ಕಿ ಸಮರ್ಪಣೆ ಕಾರ್ಯ ಆರಂಭಿಸಿದೆವು.ಸುಮಾರು 500 ಕ್ವಿಂಟಾಲ್ ಅಕ್ಕಿ ಭಕ್ತರಿಂದ ದೇವಳಕ್ಕೆ ಸಮರ್ಪಣೆ ಆಯಿತು.ಒಂದಲ್ಲ ಒಂದು ರೀತಿಯಲ್ಲಿ ದೇವಸ್ಥಾನದಲ್ಲಿ ಭಕ್ತರ ಸಹಕಾರ ನಿರಂತರ ದೊರೆಯುತ್ತಿದೆ.12 ವರ್ಷದ ಹಿಂದೆ ಮಹಾಲಿಂಗೇಶ್ವರ ದೇವಸ್ಥಾನದ ಸಂಪೂರ್ಣ ನವೀಕರಣ ಬ್ರಹ್ಮಕಲಶ ಆಗಿದೆ.ಇದೀಗ 12 ವರ್ಷದ ಬಳಿಕ ಮತ್ತೊಮ್ಮೆ ಬ್ರಹ್ಮಕಲಶವು ದೇವ ಹಿತ, ಭಕ್ತ ಹಿತದಿಂದ ನಡೆಸುವ ಸಂಕಲ್ಪ ಮಾಡಿದ್ದೇವೆ.ಇದಕ್ಕಾಗಿ ಎರಡೆರಡು ಬಾರಿ ತಾಂಬೂಲ ಪ್ರಶ್ನೆಯನ್ನೂ ಇಟ್ಟಿದ್ದೇವೆ.ಎಲ್ಲಾ ಕಾರ್ಯಕ್ಕೆ ದೇವರ ಸಂಪೂರ್ಣ ಅನುಗ್ರಹ ಸಿಕ್ಕಿದೆ.ಗ್ರಾಮ ಗ್ರಾಮದಲ್ಲಿ ಭಕ್ತ ಸಮಿತಿ ರಚನೆ ಮಾಡಿದ್ದೇವೆ.ಸುಮಾರು 15 ಸಾವಿರಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ಸೇರಿಸುವ ಸಂಕಲ್ಪವಿದೆ.ಇನ್ನು ಅಯ್ಯಪ್ಪ ಗುಡಿ ಸ್ಥಳಾಂತರವಾಗಬೇಕಿದೆ.ಹಾಲ್ ದೇವರಿಗೆ ಅಡ್ಡ ಬರುವುದು ಕಂಡು ಬಂದಿದೆ.ಎಷ್ಟೋ ಭಕ್ತರು ಹಾಲ್ ನಿರ್ಮಾಣಕ್ಕಾಗಿ ಕಷ್ಟ ಬಂದಿದ್ದಾರೆ.ಆದರೆ ಜೀರ್ಣೋದ್ದಾರ ಕಾರ್ಯ ಅನ್ನುವಾಗ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುವಂತೆ ವಿನಂತಿಸಿದರು.

ಭಕ್ತರ ಸಲಹೆಗಳು:
ಸಭಾಭವನದ ತೆರವು ಕಾರ್ಯ ಕೈಬಿಡಬೇಕು:
ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಮತ್ತು ರಾಜ್ಯ ಧಾರ್ಮಿಕ ಪರಿಷತ್ನ ಮಾಜಿ ಸದಸ್ಯರೂ ಆಗಿರುವ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ, ದೇವಾಲಯ ಅಭಿವೃದ್ಧಿ ಆಗಬೇಕು.ಇದರಲ್ಲಿ ಎರಡು ಮಾತಿಲ್ಲ.ಇಲ್ಲಿ ಭಕ್ತರಿಗೆ ಏನು ಅನುಕೂಲ ಕಲ್ಪಿಸಬೇಕು ಎಂಬುದು ಮುಖ್ಯ.ದಕ್ಷಿಣ ಕನ್ನಡದಲ್ಲಿ ಜಾತ್ರೆಯ ಸಂದರ್ಭ 1 ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುವುದು ಪುತ್ತೂರಿನಲ್ಲಿ ಮಾತ್ರ.ಹೂದೋಟ, ಕಟ್ಟಡ ನಿರ್ಮಾಣ ಮಾಡಿದರೆ ಗದ್ದೆಯಲ್ಲಿ ಭಕ್ತರು ಎಲ್ಲಿ ನಿಲ್ಲುವುದು.ಈಗಾಗಲೇ ಬೇರೆ ಕಡೆ ದೇವಸ್ಥಾನಗಳಲ್ಲಿ ಕಾಲ್ತುಳಿತ ಆಗಿರುವ ಸುದ್ದಿಯಿದೆ.ಹಾಗಾಗಿ ಇಲ್ಲಿ ವಿಶಾಲವಾದ ಸ್ಥಳ ಬೇಕು.ಈ ಗದ್ದೆಯನ್ನು ಯಾಕೆ ಅಕ್ವೇರ್ ಮಾಡಿದ್ದು ಎಂಬುದರ ದಾಖಲೆ ನನ್ನಲ್ಲಿ ಇದೆ.ಕಂಬಳದ ಗದ್ದೆ ಮಾತ್ರ ದೇವಳದ್ದು, ಉಳಿದ ಜಾಗವನ್ನು ನಾವು ಖರೀದಿಸಿದ್ದು.ಅದನ್ನು ಖರೀದಿ ಮಾಡುವಾಗ ರಥ ಬೀದಿ, ಕಲ್ಯಾಣ ಮಂಟಪಕ್ಕೆ ಎಂಬುದು ಇದೆ.ಕಲ್ಯಾಣ ಮಂಟಪ ಆಗುವಾಗ ಕೆಲವು ವಿಘ್ನಸಂತೋಷಿಗಳು ಅಡ್ಡ ಬಂದಿದ್ದರು.ಆಗ ಬೆಂಗಳೂರಿನಿಂದ ಧಾರ್ಮಿಕ ತಜ್ಞರು ಬಂದು ಕಲ್ಯಾಣ ಮಂಟಪಕ್ಕೆ ಸೂಕ್ತ ಸ್ಥಳ ಎಂದು ತಿಳಿಸಿದ್ದಾರೆ.ದೇವಸ್ಥಾನದ ಎದುರು ಸಾರ್ವಜನಿಕ ರಸ್ತೆಯಿದೆ.ಆದ್ದರಿಂದ ಕಲ್ಯಾಣ ಮಂಟಪ ದೇವಳದ ಪರಿಧಿಯಿಂದ ಹೊರಗಿದೆ.ಒಂದು ವೇಳೆ ದೇವರಿಗೆ ಅಡ್ಡ ಆಗುತ್ತದೆ ಎಂಬುದಾದರೆ ಕೊಲ್ಲೂರು, ಕಟೀಲ್, ಸುಬ್ರಹ್ಮಣ್ಯದಲ್ಲಿ ಬಿಲ್ಡಿಂಗ್ ಇಲ್ವಾ?.ಅಲ್ಲಿ ಯಾವುದು ಅಡ್ಡ ಎಂದು ಪ್ರಶ್ನಿಸಿದರು.ಹಿಂದೆ ಶಿವನ ಮೂರ್ತಿ ಅಡ್ಡ ಎಂದು ತೆರವು ಮಾಡಿದರು.ಅದಾದ ಬಳಿಕ ಗೋಪುರ ನಿರ್ಮಾಣ ಆಗಿದೆ.ಅದು ಅಡ್ಡ ಆಗುವುದಿಲ್ಲವಾ?,ಈ ಕಟ್ಟಡ ಮಾಡಿದ ಬಳಿಕ ದೇವಸ್ಥಾನದ ಆದಾಯ ಜಾಸ್ತಿಯಾಗಿದೆ ಎಂದ ಅವರು, ದಾಖಲೆಗಳ ಆಧಾರದಲ್ಲಿಯೇ ನಾನು ಮಾತನಾಡುತ್ತಿದ್ದೇನೆ.ನನ್ನ ಅವಧಿಯಲ್ಲಿ ಉಡುಪಿ ಬಿಟ್ಟರೆ ಪುತ್ತೂರಿನಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳು ನಡೆದಿರುವುದು.ಈ ಕಟ್ಟಡ ಕಟ್ಟಲು ರೂ.2 ಕೋಟಿಗಿಂತಲೂ ಜಾಸ್ತಿ ಖರ್ಚಾಗಿದೆ.ಇದು ದೇವಸ್ಥಾನಕ್ಕೆ ಸಂಬಂಧಿಸಿದ್ದು,ಹಾಗಾಗಿ ಇದನ್ನು ತೆರವು ಮಾಡುವ ಕಾರ್ಯ ಕೈಬಿಡಬೇಕೆಂದರು.
ಒಂದೊಂದು ಅಷ್ಟಮಂಗಲದಲ್ಲಿ ಒಂದೊಂದು ವಿಚಾರ ಬರುತ್ತದೆ:
ಒಂದೊಂದು ಅಷ್ಟಮಂಗಲದಲ್ಲಿ ಒಂದೊಂದು ರೀತಿಯ ವಿಚಾರ ಬರುತ್ತಿದೆ.ಮೂಡಿತ್ತಾಯರು ಅಧ್ಯಕ್ಷರಾಗಿ ಇರುವಾಗ ಆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಟ್ಟಡ ಅಡ್ಡ ಎಂದು ಹೇಳಿಲ್ಲ.ನಾಗನ ಗುಡಿ ಕೂಡಾ ವಾಸ್ತುವಿನ ಮೂಲಕವೇ ನಿರ್ಮಾಣ ಆಗಿದೆ.ಆದರೆ ಅಯ್ಯಪ್ಪನ ಗುಡಿಗೆ ನಾವು ಜವಾಬ್ದಾರರಲ್ಲ.ಅಲ್ಲಿ ಅಯ್ಯಪ್ಪನ ಗುಡಿ ಕಟ್ಟಲು ಜಾಗ ಕೊಡುವುದಿಲ್ಲ ಎಂದಾಗ ಸರಕಾರದಿಂದ ಆದೇಶ ತರಿಸಿ ಅಯ್ಯಪ್ಪನ ಗುಡಿ ಕಟ್ಟಿದ್ದಾರೆ.ಇವತ್ತು ಅವೆಲ್ಲಕ್ಕೂ ಸಾನಿಧ್ಯವಿದೆ.ಹಾಗಾಗಿ ಯಾವುದನ್ನೂ ತೆರವು ಮಾಡುವ ಮೊದಲು ಎರಡೆರಡು ಬಾರಿ ಚಿಂತನೆ ಮಾಡಿಕೊಳ್ಳಿ.ಯಾರಿಗೂ ದೋಷ ಬರಬಾರದು.ದೇವಸ್ಥಾನದ ಹಿಂಬದಿ ಎಷ್ಟು ಬೇಕಾದರೂ ಅಭಿವೃದ್ಧಿ ಮಾಡಿ ಎಂದು ಹೇಳಿದ ಎನ್.ಕೆ.ಜಗನ್ನಿವಾಸ್ ರಾವ್, ಕಟ್ಟಡಕ್ಕೆ ಹತ್ತು ಜನರ ದುಡ್ಡು ಇದೆ.ಹಾಗಾಗಿ ಇನ್ನೊಮ್ಮೆ ತಾಂಬೂಲ ಪ್ರಶ್ನೆಯ ಬದಲು ಅಷ್ಟಮಂಗಲ ಪ್ರಶ್ನೆ ಮಾಡಿ ಎಂದರು.ಉತ್ತರಿಸಿದ ಶಾಸಕರು ಪ್ರಶ್ನೆಯಲ್ಲಿ ಈ ಕಟ್ಟಡವನ್ನು ತೆಗೆಯಬೇಕೆಂದು ಬಂದಿದೆ.ಕೊನೆಗೆ ಈ ಕಟ್ಟಡವನ್ನು ಉಳಿಸಿಕೊಳ್ಳಲು ಆಗುತ್ತದೆಯೋ ಎಂದು ಕೇಳಿದ್ದೆವು.ಉಳಿಸಿಕೊಳ್ಳಲು ಆಗುವುದೇ ಇಲ್ಲ ಎಂದು ದೈವಜ್ಞರು ತಿಳಿಸಿದ್ದಾರೆ.ಎದುರು ಕಡೆ ಯಾವುದೇ ಕಟ್ಟಡ ಹಾಕುವ ಯೋಜನೆ ಮಾಸ್ಟರ್ ಪ್ಲ್ಯಾನ್ನಲ್ಲಿ ಇಲ್ಲ ಎಂದರು.ಈ ಕುರಿತು ಇನ್ನೊಮ್ಮೆ ಪ್ರಶ್ನೆ ಇಟ್ಟು ಚಿಂತನೆ ಮಾಡಿಕೊಳ್ಳಿ ಎಂದು ಹೇಳಿ ಎನ್.ಕೆ.ಜಗನ್ನಿವಾಸ್ ರಾವ್ ಅವರು ಸಭೆಯಿಂದ ತೆರಳಿದರು.
ಕಟ್ಟಡದಲ್ಲಿ ದೋಷವಿದೆ ಆದಷ್ಟು ಬೇಗ ತೆರವು ಮಾಡಿ:
ಹಿರಿಯರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ ಅವರು ಮಾತನಾಡಿ,ಹಿಂದೆ ಶರ್ಮರು ಪ್ರಶ್ನೆ ಚಿಂತನೆಯಲ್ಲಿ ಈ ಜಾಗದಲ್ಲಿ ಕಲ್ಯಾಣ ಮಂಟಪ ಕಟ್ಟಲು ಯಾರು ಹೇಳಿದ್ದು ಎಂದು ಮೊಕ್ತೇಸರರಲ್ಲೇ ಪ್ರಶ್ನೆ ಮಾಡಿದ್ದಾರೆ.ಈ ಕಟ್ಟಡಕ್ಕೆ 20 ವರ್ಷ ಆಗಿದೆ.ಇದರ ಮೇಲಿನ ಅಂತಸ್ತಿಗೆ ಯಾರು ಹೋಗುವುದೂ ಇಲ್ಲ.ಇಲ್ಲಿ ಸಭಾಭವನ ಕಟ್ಟಡ ಆದ ಬಳಿಕ ಎಷ್ಟೋ ಕಲ್ಯಾಣ ಮಂಟಪ ಪೇಟೆಯಲ್ಲಿ ಆಗಿದೆ.ಆದರೆ ಇಲ್ಲಿ ಮಾತ್ರ ಈ ಕಟ್ಟಡ ಪೂರ್ಣ ಆಗುವುದೇ ಇಲ್ಲ.ಇದರಲ್ಲಿ ಇನ್ಕಮ್ ಕೂಡಾ ಇಲ್ಲ.ಪ್ರಶ್ನೆಯಲ್ಲಿ ತೆರೆವು ಮಾಡಬೇಕೆಂದು ಹೇಳಿದರೂ ನಾವು ಅದನ್ನು ಇಟ್ಟುಕೊಂಡಿದ್ದೇವೆ. ಆದಷ್ಟು ಬೇಗ ಇದನ್ನು ತೆರವು ಮಾಡಿದರೆ ತೊಂದರೆ ಪರಿಹಾರ ಆಗಬಹುದು ಎಂದರಲ್ಲದೆ,ನನಗೇನೂ ಈ ಕಟ್ಟಡದ ಮೇಲೆ ಮತ್ಸರ ಇಲ್ಲ.ಈ ಕಟ್ಟಡಕ್ಕೆ ರೂ. 3.50 ಕೋಟಿ ಖರ್ಚು ಆಗಿರಬಹುದು.ಅದನ್ನು ಜಗನ್ನಿವಾಸ ರಾವ್ ಅವರಿಂದಲೇ ವಸೂಲು ಮಾಡಬೇಕು.ಅವರು ಕೇಳದೆ ಈ ಕಟ್ಟಡ ಮಾಡಿದ್ದು ಎಂದು ಆರೋಪಿಸಿದರು.ದಯವಿಟ್ಟು ಪರಿಚಯ ಇಲ್ಲದ ದೈವಜ್ಞರನ್ನು ಕರೆಸಿ ಪ್ರಶ್ನೆ ಇಡುವುದು ಉತ್ತಮ ಎಂದು ಅವರು ಹೇಳಿದಾಗ ಸಭೆಯಲ್ಲಿ ಕರತಾಡನ ಕೇಳಿ ಬಂತು.
ಮೇಲಿನ ಗೋಡೆಯನ್ನು ತೆರವು ಮಾಡಬಹುದು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಸದಸ್ಯರೂ ಆಗಿರುವ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ಈ ಹಿಂದೆ ದೇವರ ಭೂಸ್ಪರ್ಶ ಆಗುವ ಸಂದರ್ಭ ಅಷ್ಟಮಂಗಲ ಪ್ರಶ್ನೆಗೆ ದೇವರ ಸೂಚನೆಯಾಗಿತ್ತು.ನಮ್ಮ ಅವಧಿಯಲ್ಲಿ ಅಷ್ಟಮಂಗಲ ಪ್ರಶ್ನೆ ನೆರವೇರಿಸಿದ್ದೆವು.ಆಗ ಕಲ್ಯಾಣ ಮಂಟದದ ವಿಚಾರವೂ ಬಂತು ಆದರೆ ಪರಿಹಾರವನ್ನೂ ದೈವಜ್ಞರು ನೀಡಿದ್ದರು.ಅದರಂತೆ ಕಲ್ಯಾಣ ಮಂಟಪಕ್ಕೆ ಪರಿಧಿಯನ್ನು ಮಾಡಲಾಯಿತು.ಸಭಾಭವನವನ್ನು ನವೀಕರಿಸಲಾಯಿತು.ಪ್ರಶ್ನೆಯಲ್ಲಿ ಒಬ್ಬೊಬ್ಬರು ಒಂದೊಂದು ವಿಚಾರ ತಿಳಿಸುವುದೇ ಇಲ್ಲಿ ಸಮಸ್ಯೆ ಆಗಿದೆ.ಇವತ್ತು ಹೊಸ ಹೊಸ ಕಲ್ಯಾಣ ಮಂಟಪ ಅಲ್ಲಲ್ಲಿ ಆಗಿರುವುದರಿಂದ ಇಲ್ಲಿಗೆ ಜನ ಬರುತ್ತಿಲ್ಲ.ಭಕ್ತರ ಭಾವನೆಗೆ ಪೂರಕವಾಗಿ, ಕಲ್ಯಾಣ ಮಂಟಪ ಶಿವನಿಗೆ ಅಡ್ಡವಾಗಿದೆ ಎಂದು ಕಟ್ಟಡ ತೆರವು ಮಾಡುವ ಬದಲು ಮೇಲಿನ ಗೋಡೆಯನ್ನು ತೆರವು ಮಾಡಬಹುದು ಎಂದು ಸಲಹೆ ನೀಡಿದರು.
ಎಲ್ಲಾ ಪ್ರಶ್ನಾಚಿಂತಕರನ್ನು ಕರೆಸುವ ಕೆಲಸ ಆಗಬೇಕು:
ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಮುಖರಾಗಿರುವ ಹರಿಪ್ರಸಾದ್ ನೆಲ್ಲಿಕಟ್ಟೆಯವರು ಮಾತನಾಡಿ, ದೇವಸ್ಥಾನದ ಜೀರ್ಣೋದ್ದಾರದ ಸಂದರ್ಭ ಬಲಭಾಗದ ದೇವಿಯ ಗುಡಿಯನ್ನು ಹಿಂಬದಿಗೆ ಪ್ರತಿಷ್ಠೆ ಮಾಡಲಾಯಿತು.ರಕ್ತೇಶ್ವರಿ ದೇವಿಯನ್ನು ಹೊರಾಂಗಣದಲ್ಲಿ ಇರಿಸಲಾಯಿತು.ಆದರೆ ಮತ್ತೆ ಚಿಂತನೆ ಬಳಿಕ ದೇವಿಯನ್ನು ಒಳಗೆ ಇರಿಸಲಾಯಿತು.ಶಿವನ ಮೂರ್ತಿಯ ಪ್ರಶ್ನೆಯನ್ನು ನೋಡಿದಾಗ ಅದನ್ನು ತೆರವು ಮಾಡಲಾಯಿತು.ಹೀಗೆ ಒಬ್ಬೊಬ್ಬರು ಪ್ರಶ್ನಾಚಿಂತಕರು, ವಾಸ್ತು ತಜ್ಞರು ಒಂದೊಂದು ವಿಚಾರ ತಿಳಿಸುತ್ತಾರೆ.ಈಗ ಅದು ಆಗಬಾರದು.ಎಲ್ಲವನ್ನೂ ಪ್ರಶ್ನೆ ಚಿಂತನೆಯಲ್ಲಿ ಕೇಳಿಯೇ ಮಾಡುವುದು.ಆದರೆ ಇದರಲ್ಲಿ ಯಾವುದು ಸರಿ?. ಎಂದು ಪ್ರಶ್ನಿಸಿದರಲ್ಲದೆ, ಎಲ್ಲಾ ಪ್ರಶ್ನಾಚಿಂತಕರನ್ನು ವಾಸ್ತುತಜ್ಞರಲ್ಲಿ ಮತ್ತು ಭಕ್ತಾಧಿಗಳನ್ನು ಕರೆಸಿ ಮಾತನಾಡುವುದು ಒಳಿತು ಎಂದರು.ಇವತ್ತು ಸುಬ್ರಹ್ಮಣ್ಯ, ಕಟೀಲ್, ಧರ್ಮಸ್ಥಳ ಬಿಟ್ಟರೆ ಪುತ್ತೂರು ದೇವಸ್ಥಾನ ಅನ್ನದಾನ ಸೇವೆಯಲ್ಲಿ ಪ್ರಸಿದ್ಧಿ ಪಡೆದಿದೆ.ಮುಂದಿನ ದಿನ ದೇವಸ್ಥಾನದಲ್ಲಿ ಕೆರೆ ಅಭಿವೃದ್ದಿ, ಸುತ್ತು ಕಂಪೌಂಡ್ ನಿರ್ಮಾಣ ಮಾಡಬೇಕು.ಇಲ್ಲವಾದರೆ ಇಲ್ಲಿ ಬರುವ ದನಗಳ ಕಳವು ಕೂಡಾ ಆಗುತ್ತದೆ.ಒಟ್ಟಿನಲ್ಲಿ ಭಕ್ತರ ಅಭಿಪ್ರಾಯಗಳನ್ನು ಸಕಾರಾತ್ಮಕವಾಗಿ ಪಡೆಯಬೇಕು ಎಂದರು.ದೇವಳದ ಅನ್ನಛತ್ರ ದೇವಸ್ಥಾನದಿಂದ ಎತ್ತರದಲ್ಲಿದೆ ಎಂದವರು ಹೇಳಿದಾಗ ಉತ್ತರಿಸಿದ ಮುಳಿಯ ಕೇಶವಪ್ರಸಾದ್ ಅವರು, ಕಟ್ಟಡ ದೇವಸ್ಥಾನದಿಂದ ಎತ್ತರಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆರೆಯ ಹೂಳೆತ್ತುವ ಕೆಲಸ ಆಗಬೇಕು:
ಸುದರ್ಶನ್ ಮುರ ಅವರು ಮಾತನಾಡಿ, ಬ್ರಹ್ಮಕಲಶ ನಡೆಯುವ ಮೊದಲು ಕೆರೆಯ ಹೂಳೆತ್ತುವ ಕೆಲಸ ಆಗಬೇಕು.ಸಭಾ ಭವನದ ವಿಚಾರದಲ್ಲಿ ಅದರ ಎತ್ತರವನ್ನು ತಗ್ಗಿಸಿಕೊಳ್ಳಬಹುದು. ಸಭಾಭವನದ ಪ್ರವೇಶ ದ್ವಾರ ಬದಲಾಯಿಸಿ,ಪಂಚಾಕ್ಷರಿ ಮಂಟಪವನ್ನು ಸಭಾಭವನ ಮಾಡಿ.ಕಂಬಳದ ಗ್ಯಾಲರಿಯನ್ನು ರಥ ಬೀದಿಯಲ್ಲಿ ಬ್ರಹ್ಮರಥವನ್ನೂ ನೋಡುವಂತೆ ಮಾಡಿ.ಅಂಚೆ ಕಚೇರಿ ಟಿಲಿಫೋನ್ ಕಚೇರಿಯ ಬಳಿಯಿಂದ ಬರುವ ದೇವಸ್ಥಾನದ ರಸ್ತೆ ಅಗಲೀಕರಣ ಮಾಡಿ ಎಂದು ಸಲಹೆ ನೀಡಿದರು.
ಅಯ್ಯಪ್ಪ ವೃತಧಾರಿಗಳಿಗೆ, ಸ್ವಾಮೀಜಿಯವರಿಗೆ ಕೊಠಡಿ:
ಅಯ್ಯಪ್ಪ ಭಕ್ತರಿಗೆ ಸ್ನಾನಕ್ಕೆ ಸೌಲಭ್ಯ, ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಆಗುವಂತೆ ಬಾಲಚಂದ್ರ ಸೊರಕೆ ಪ್ರಸ್ತಾಪಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ ಅಯ್ಯಪ್ಪ ವೃತಧಾರಿಗಳಿಗೆ ಶರಣು ಕರೆಯಲು ಮತ್ತು ಇರುಮುಡಿ ಕಟ್ಟಲು ಸೂಕ್ತ ಸ್ಥಳ ನೀಡಬೇಕೆಂದು ಪ್ರಸ್ತಾಪಿಸಿದರು.ಉತ್ತರಿಸಿದ ಶಾಸಕರು,ತಂತ್ರಿಗಳಿಗೆ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಇತರ ಯತಿಗಳು ಬಂದಾಗ ಅವರಿಗೂ ಅದೇ ಕೊಠಡಿ ಉಪಯೋಗಿಸಬಹುದು.ಅಯ್ಯಪ್ಪ ವೃತಧಾರಿಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರಶ್ನೆ ಚಿಂತನೆಗೆ ಮೊದಲು ದೇವರ ಮುಂದೆ ಹೂವಿನ ಪ್ರಸಾದ ಪಡೆಯುವ:
ದಿನೇಶ್ ಅವರು ಮಾತನಾಡಿ ಪ್ರಶ್ನೆ ಚಿಂತನೆಯಲ್ಲಿ ಒಂದೊಂದು ರೀತಿಯ ವಿಚಾರ ಬರುತ್ತದೆ.ಅದರ ಬದಲು ದೇವರ ಮುಂದೆ ಹೂವಿನ ಪ್ರಸಾದದ ಮೂಲಕ ಅನುಗ್ರಹ ಪಡೆಯುವ ಎಂದರು.
ಹೊರಾಂಗಣದಲ್ಲಿ ಚಪ್ಪಲಿ ನಿಷೇಧಿಸಿ:
ಶಿವಶ್ರೀರಂಜನ್ ರೈ ದೇರ್ಲ ಅವರು ಮಾತನಾಡಿ, ದೇವಸ್ಥಾನದ ಹೊರಾಂಗಣದಲ್ಲಿ ಚಪ್ಪಲಿ ಹಾಕಿ ಹೋಗುತ್ತಾರೆ.ಅದನ್ನು ನಿಷೇಧಿಸುವಂತೆ ಮನವಿ ಮಾಡಿದರು.ಧ್ವನಿಗೂಡಿಸಿದ ಹರಿಪ್ರಸಾದ್ ಅವರು, ರಕ್ತೇಶ್ವರಿ ವಠಾರ ಇರುವುದರಿಂದ ಚಪ್ಪಲಿ ನಿಷಧಿಸಬೇಕು ಎಂದರು.ಉತ್ತರಿಸಿದ ಶಾಸಕರು ಕಚೇರಿ ಬಳಿಯಿಂದ ಪ್ರತ್ಯೇಕ ರಸ್ತೆ ಮಾಡುವ ಸಂದರ್ಭ ಅಲ್ಲೊಂದು ಪಾತ್ ವೇ ಮಾಡಿ ಆತ್ತಿಂದಿತ್ತ ಹೋಗಲು ವ್ಯವಸ್ಥೆ ಕಲ್ಪಿಸುವ ಎಂದರು.
ವಸಸಂಹಿತೆ ಕಟ್ಟು ನಿಟ್ಟಾಗಿ ಪಾಲಿಸಿ:
ಹರಿಪ್ರಸಾದ್ ನೆಲ್ಲಿಕಟ್ಟೆ ಅವರು ಮಾತನಾಡಿ ದೇವಳದಲ್ಲಿ ವಸ ಸಂಹಿತೆ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.ಕೇವಲ ಪತ್ರಿಕೆಯಲ್ಲಿ ಕೊಟ್ಟರೆ ಸಾಲದು.ಅಲ್ಲಿ ನಿಂತು ವ್ಯವಸ್ಥೆ ಮಾಡಬೇಕು.ಕೇರಳ ಮಾದರಿಯಲ್ಲಿ ಮಾಡಬೇಕೆಂದು ಹೇಳುವುದಿಲ್ಲ.ಕನಿಷ್ಠ ಸಂಸ್ಕಾರಯುತವಾಗಿ ದೇವಸ್ಥಾನಕ್ಕೆ ಬರುವಂತಾಗಲಿ ಎಂದರು.ಬ್ಲಾಕ್ ಕಾಂಗ್ರೆಸ್ ಮಹಿಳಾ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಅವರು ಧ್ವನಿಗೂಡಿಸಿದರು.
ಪ್ರಸಾದದ ಜೊತೆ ಹೂವು ಕೊಡಿ:
ದೇವಸ್ಥಾನದಲ್ಲಿ ಅರ್ಚಕರು ಶ್ರೀಗಂಧ ಪ್ರಸಾದದ ಜೊತೆ ಹೂವಿನ ಎಸಳನ್ನಾದರೂ ಕೊಡುವಂತೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಅವರು ಪ್ರಸ್ತಾಪಿಸಿದರು.ಉತ್ತರಿಸಿದ ಶಾಸಕರು,ಇದನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ದೇವಳದ ಅಧ್ಯಕ್ಷರು ತಿಳಿಸಿದ್ದಾರೆ ಎಂದರು.
ವ್ಯವಸ್ಥಾಪನಾ, ಜೀರ್ಣೋದ್ಧಾರ ಸಮಿತಿ ದೇವರ ಸೇವೆಗಿರುವುದು:
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ, ನಿವೃತ್ತ ಎಸ್ಪಿ ರಾಮದಾಸ ಗೌಡ ಅವರು ಮಾತನಾಡಿ ದೇವಳದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿ ಇರುವುದು ದೇವರ ಸೇವೆ ಮಾಡಲು.ಇಲ್ಲಿ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಸಂದರ್ಭದಲ್ಲೇ ತಂತ್ರಿಗಳು ತೊಂದರೆ ಇರುವುದನ್ನು ತಿಳಿಸಿದ್ದಾರೆಂಬ ಮಾಹಿತಿ ಕೇಳಿ ಬಂದಿದೆ.ಹಾಗಾಗಿ ಪ್ರಶ್ನಾ ಚಿಂತನೆಯ ಮೂಲಕ ಸಲಹೆ ಪಡೆಯುವುದು ಉತ್ತಮ ಮತ್ತು ಸಾನಿಧ್ಯಕ್ಕೆ ತೊಂದರೆ ಆಗಬಾರದು ಎಂದರು.
ಕಟ್ಟೆ ಪುನರ್ನಿರ್ಮಾಣಕ್ಕೆ ರೂ.೨25 ಲಕ್ಷ ವಾಗ್ದಾನ
ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಸಂಬಂಽಸಿ ದೇವಳದ ಹೊರಾಂಗಣ ಸುತ್ತು ಇರುವ ಕಟ್ಟೆಗಳ ಪುನರ್ನಿರ್ಮಾಣ ಮಾಡುವ ಕಾರ್ಯದ ಕುರಿತು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ವೃಕ್ಷಾ ಪ್ಲೈ ಆಂಡ್ ಇಂಟೀರಿಯರ್ ಸಂಸ್ಥೆಯ ಕೆ.ನಾಗೇಶ್ ರಾವ್ ಅವರು ಒಂದು ಕಟ್ಟೆಯ ಪುನರ್ನಿರ್ಮಾಣಕ್ಕೆ ರೂ.೨೫ ಲಕ್ಷ ದೇಣಿಗೆ ಕೊಡುವುದಾಗಿ ವಾಗ್ದಾನ ಮಾಡಿದರು.ಶಾಸಕರು ನಾಗೇಶ್ ರಾವ್ ಅವರನ್ನು ಅಭಿನಂದಿಸಿದರು.
ಎಲ್ಇಡಿ ಮೂಲಕ ಮಾಸ್ಟರ್ ಪ್ಲ್ಯಾನ್ ಪ್ರದರ್ಶನ ಮಾಹಿತಿ
ಇಂಜಿನಿಯರ್ ವೆಂಕಟ್ರಾಜ್ ಅವರು ಮಾಸ್ಟರ್ ಪ್ಲ್ಯಾನ್ ಅನ್ನು ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಿ ವಿವರಿಸಿದರು.ದೇವಳದ ಜಾಗದಲ್ಲಿ ಬರುವ ವೇದವನ, ನವಗ್ರಹ, ದೇವಳದ ಚರಿತ್ರೆ ಕಟ್ಟಡ, ಕಂಬಳಕರೆ, ಗ್ಯಾಲರಿ, ನಾಗವನ,ಪಾರ್ಕಿಂಗ್, ಶೌಚಾಲಯ, 8 ಫೀಟ್ನ ಪಾತ್, ಬೆಡಿ ಪ್ರದರ್ಶನ ಜಾಗ,ಕಂಬಳ ಪರ್ಫಮೆನ್ಸ್ ಸ್ಟೇಜ್, ರಥಬೀದಿ, ವೇಸ್ಟ್ ಮ್ಯಾನೇಜ್ಮೆಂಟ್ ಯುನಿಟ್,ಟ್ರೀ ಪ್ಲಾಜಾ ಕಿಯೊಸ್ಕ್, ಬ್ರಹ್ಮರಥದ ರಂಗಸ್ಥಳ, ಬ್ರಹ್ಮರಥ ಮಂಟಪ, ಗೋಶಾಲೆ, ಪ್ರಸಾದ ಕೌಂಟರ್, ಫ್ಲವರ್ ಸ್ಟಾಲ್, ಕೆರೆಯ ಬಳಿ ಕಮ್ಯೂನಿಟಿ ಹಾಲ್, ಎಸ್ಟಿಪಿ ಘಟಕದ ಮಾಹಿತಿಯನ್ನು 3ಡಿ ಮೂಲಕ ಪ್ರದರ್ಶಿಸಿದರು.
ಸಭಾಭವನ ತೆರವಿಗೆ ಬಹುತೇಕರ ಬೆಂಬಲ
ನಾವು ಮನುಷ್ಯರು, ನಮ್ಮ ಶ್ರದ್ಧಾಕೇಂದ್ರವಾಗಿರುವ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಕನಸನ್ನು ಕಂಡಿದ್ದೇವೆ.ಬೇರೆಯವರ ಸ್ವಾಽನದಲ್ಲಿದ್ದ ದೇವಸ್ಥಾನದ ಜಾಗವನ್ನು ಪುನಃ ಪಡೆಯುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿದ್ದೇವೆ.ಇನ್ನೂ ಒಂದಷ್ಟು ಜಾಗ ಬೇರೆ ಬೇರೆಯವರ ಕೈಯಲ್ಲಿದೆ.ದೇವಳದ ಜಾಗದಿಂದ ಅವರಷ್ಟಕ್ಕೆ ಬಿಟ್ಟು ಹೋದವರಿಗೆ ನಾನು ಮತ್ತು ಈಶ್ವರ ಭಟ್ ನಮ್ಮ ಸ್ವಂತ ದುಡ್ಡಿನಿಂದ ಸುಮಾರು 26 ಲಕ್ಷ ರೂಪಾಯಿ ಹಣ ಕೊಟ್ಟಿದ್ದೇವೆ.ಬಿಟ್ಟು ಕೊಡದವರ ಮನೆಗಳನ್ನು ಭಕ್ತಾದಿಗಳೇ ತೆರವು ಮಾಡಿದ್ದಾರೆ.ಒಂದೆರಡು ಮನೆಗಳಿಗೆ ಮರ ಬಿದ್ದು ಹೋಗಿದೆ.ಎಲ್ಲವೂ ಮಹಾಲಿಂಗೇಶ್ವರನ ಇಚ್ಚೆಯಂತೆ ಆಗಿದೆ.ಎಲ್ಲವನ್ನು ಅನುಮತಿ ಪಡೆದು ತೆರವು ಮಾಡಲು ಆಗುವುದಿಲ್ಲ.ಸಭಾಭವನಕ್ಕೆ ಸರಕಾರದ ಅನುಮತಿ ಪಡೆಯಲು ಹೊರಟರೆ ಇನ್ನೂ ಮೂರು ವರ್ಷ ಬೇಕಾದೀತು.ದೇವರು ಒಪ್ಪಿಗೆ ಕೊಟ್ಟರೆ ಬೇರೆ ಯಾರನ್ನೂ ಕೇಳಬೇಕಾಗಿಲ್ಲ.ಮಾಸ್ಟರ್ ಪ್ಲ್ಯಾನ್ ಮಾಡಿದ ಉದ್ದೇಶ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ.ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬರುವ ಭಕ್ತರು ಇಲ್ಲಿಗೂ ಬರಬೇಕು.ಅದಕ್ಕಾಗಿ ಇಲ್ಲಿ ವ್ಯವಸ್ಥೆ ಸರಿಯಾಗಿರಬೇಕು.ಸರಿಯಾದ ಊಟದ ವ್ಯವಸ್ಥೆ, ರಾತ್ರಿಯೂ ಊಟದ ವ್ಯವಸ್ಥೆ ಆಗಬೇಕು.ಆಗ ಜನ ಬರುತ್ತಾರೆ.ಜನ ಬಂದ ಕೂಡಲೇ ಅಭಿವೃದ್ಧಿ ಆಗುತ್ತದೆ.ಇದಕ್ಕೆ ಒಂದಷ್ಟು ಸಮಯ ಬೇಕು.ಈಗ ಸಭಾಭವನ ತೆರವಿಗೆ ಅಕ್ಷೇಪ ಇಲ್ಲದವರು ಕೈ ಎತ್ತಿ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದಾಗ,ಸಭೆಯಲ್ಲಿದ್ದ ಬಹುತೇಕ ಮಂದಿ ಕೈ ಎತ್ತುವ ಮೂಲಕ ಸಭಾಭವನ ಕಟ್ಟಡ ತೆರವಿಗೆ ಸಮ್ಮತಿ ಸೂಚಿಸಿದರು.
ಯಾವ ಚಿಂತನೆ ಬೇಕಾದರೂ ಮಾಡೋಣ
ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಮೊನ್ನೆ ರೂ.13.75 ಕೋಟಿ ದೇಣಿಗೆ ವಾಗ್ದಾನ ಮಾಡಿದ್ದಾರೆ.ಸರಕಾರದಿಂದ 11 ಕೋಟಿ ರೂಪಾಯಿ ಸ್ಯಾಂಕ್ಷನ್ ಆಗಿದೆ.ಇನ್ನು ರೂ.20 ಕೋಟಿಯ ನಿರೀಕ್ಷೆಯಲ್ಲಿ ಇದ್ದೇವೆ.ನೆಲ್ಲಿಕಟ್ಟೆ ಕಮರ್ಷಿಯಲ್ ಜಾಗದಲ್ಲಿ ಕಾಂಪ್ಲೆಕ್ಸ್ ಬರಲಿದೆ.ಅಲ್ಲಿ 2 ಮತ್ತು 3ನೇ ಅಂತಸ್ತಿನಲ್ಲಿ ರೂಮ್ಗಳನ್ನು ಮಾಡುತ್ತೇವೆ.ಛತ್ರವೂ ಬರಲಿದೆ.ಕೆಳಗಡೆ ಕಮರ್ಷಿಯಲ್ ಆಗಿರುತ್ತದೆ.ಒಟ್ಟು ದೇವಸ್ಥಾನಕ್ಕೆ ತಿಂಗಳಿಗೆ ರೂ.10 ರಿಂದ 20 ಲಕ್ಷ ಬಾಡಿಗೆ ಬರಬೇಕು.ಇಷ್ಟೆಲ್ಲ ಅಭಿವೃದ್ಧಿ ಮಾಡಿ ದೇವರಿಗೆ ಸಮಾಧಾನ ಇಲ್ಲದಿದ್ದರೆ ಏನು ಪ್ರಯೋಜನ.ಹಾಗಾಗಿ ನನ್ನ ಆಲೋಚನೆಯಲ್ಲಿ, ಈ ಸಭಾಭವನ ತೆಗೆಯಬೇಕಾ ಬೇಡವಾ ಎಂದು ತಿಳಿದುಕೊಳ್ಳುವ ನಿಟ್ಟಿನಲ್ಲಿ ಯಾವ ಚಿಂತನೆ ಬೇಕಾದರೂ ಮಾಡೋಣ
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು
ತಹಸೀಲ್ದಾರ್ ಕೋಚಣ್ಣ ರೈ ಹೆಸರನ್ನು ಶಾಶ್ವತವಾಗಿ ಉಳಿಸಲು ಮನವಿ
ದೇವಸ್ಥಾನಕ್ಕೆ ಜಾಗ ಸಿಗಬೇಕಾದರೆ ತಹಸೀಲ್ದಾರ್ ಕೋಚಣ್ಣ ರೈ ಅವರ ಶ್ರಮ ಇದೆ.ಅವರ ಹೆಸರನ್ನು ಯಾವುದರಲ್ಲಾದರೂ ಉಲ್ಲೇಖ ಮಾಡಬೇಕಾಗಿದೆ ಎಂದು ಬಾಲಚಂದ್ರ ಸೊರಕೆ ಪ್ರಸ್ತಾಪಿಸಿದರು.ನಿವೃತ್ತ ಪ್ರಾಂಶುಪಾಲ ಪ್ರೊ|ಎ.ವಿ.ನಾರಾಯಣ ಅವರು ಮಾತನಾಡಿ, 14 ಎಕ್ರೆ ಸ್ಥಳವನ್ನು ದೇವಸ್ಥಾನಕ್ಕೆ ಕೊಡಿಸುವಲ್ಲಿ ಕೋಚಣ್ಣ ರೈ ಅವರು ಬಹಳ ಶ್ರಮ ಪಟ್ಟಿದ್ದಾರೆ.ಅವರ ಹೆಸರನ್ನು ಇಲ್ಲಿ ಶಾಶ್ವತವಾಗಿ ಉಳಿಸಬೇಕು.ಎಲ್ಲಿ ಜೋಡಿಸಲು ಆಗುತ್ತದೆ ಎಂಬುದನ್ನು ನಿರ್ಣಯ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.ಈ ಕುರಿತು ಮನವಿ ನೀಡುವ ಸಂದರ್ಭ ಎ.ಜೆ ರೈ,ನಿತಿನ್ ಪಕ್ಕಳ ಜೊತೆಗಿದ್ದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ, ನಳಿನಿ ಪಿ ಶೆಟ್ಟಿ, ಈಶ್ವರ ಬೆಡೇಕರ್, ವಿನಯ ಸುವರ್ಣ,ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಶಿವಪ್ರಸಾದ್ ಶೆಟ್ಟಿ, ಪ್ರಸಾದ್ಕೌಶಲ್ ಶೆಟ್ಟಿ, ಶಿವರಾಮ್ ಆಳ್ವ, ಅಮರನಾಥ ಗೌಡ ಬಪ್ಪಳಿಗೆ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಮುರಳಿಧರ ರೈ ಮಠಂತಬೆಟ್ಟು, ನಿರಂಜನ ರೈ ಮಠಂತಬೆಟ್ಟು, ಸುರೇಶ್ ಕಲ್ಲಾರೆ, ಸಂತೋಷ್ ಭಂಡಾರಿ, ಉಲ್ಲಾಸ್ ಕೋಟ್ಯಾನ್, ಲೋಕೇಶ್ ಪಡ್ಡಾಯೂರು ಸಹಿತ ನೂರಾರು ಮಂದಿ ಭಕ್ತರು, ವಿವಿಧ ಗ್ರಾಮ ಸಮಿತಿ ಪದಾಧಿಕಾರಿಗಳು, ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರು ಭಕ್ತರ ಸಲಹೆ ಸೂಚನೆಗಳನ್ನು ದಾಖಲಿಸಿದರು. ಭಕ್ತರ ಸಲಹೆ ಸೂಚನೆಗಳಿಗೆ ಸಂಬಂಧಿಸಿ ಶಾಸಕರು ತಕ್ಷಣ ಉತ್ತರವನ್ನೂ ನೀಡುತ್ತಿದ್ದರು.ಸಭೆಯ ಆರಂಭದಲ್ಲಿ ಮಹಾಲಿಂಗೇಶ್ವರ ದೇವರು ಮತ್ತು ಪ್ರಾಕಾರ ಗುಡಿಗಳ ಉಲ್ಲೇಖದೊಂದಿಗೆ ವಿಶೇಷ ಪ್ರಾರ್ಥನೆಯನ್ನು ವೈಷ್ಣವಿ ಎಮ್.ಆರ್ ಮಾಡಿದರು.ವರುಣ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕೃಷ್ಣವೇಣಿ ವಂದಿಸಿದರು.
ದೊಡ್ಡ ಕಾರ್ಯಕ್ರಮಕ್ಕೆ ಚಿಕ್ಕ ವ್ಯತ್ಯಾಸ ಬಂದೇ ಬರುತ್ತದೆ
ದೊಡ್ಡ ಕಾರ್ಯಕ್ರಮ ಮಾಡುವಾಗ ಚಿಕ್ಕ ವ್ಯತ್ಯಾಸ ಬಂದೇ ಬರುತ್ತದೆ.ಅಶೋಕ್ ರೈಗೆ ಬೇಕಾಗಿ ವೈಯುಕ್ತಿಕವಾಗಿ ಈ ಕಾರ್ಯ ಮಾಡುವುದಲ್ಲ.ಇಲ್ಲಿ ಯಾರು ಕೂಡಾ ಆ ಪಕ್ಷ ಈ ಪಕ್ಷ ಇಲ್ಲ.ಎಲ್ಲರನ್ನೂ ಸೇರಿಸಿಕೊಂಡು ಮಾಡಲು ಆದಷ್ಟು ಪ್ರಯತ್ನ ಮಾಡುತ್ತೇವೆ.ಸಮಸ್ಯೆ ಇದ್ದಾಗ ನೇರವಾಗಿ ತಿಳಿಸಿ.ಅದರ ಬದಲು ವಾಟ್ಸಪ್ನಲ್ಲಿ ಹಾಕುವ ವಿಚಾರ ಮಾಡಬೇಡಿ.ಭಕ್ತರ ಸಹಕಾರ ಅಗತ್ಯವಾಗಿ ಬೇಕು
-ಅಶೋಕ್ ಕುಮಾರ್ ರೈ,ಶಾಸಕರು ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು
ಟೀಕೆ ಮಾಡುವುದು ಮೂರ್ನಾಲ್ಕು ಜನ ಬೆನ್ನು ತಟ್ಟುವವರು ಸಾವಿರ ಸಾವಿರ
ಮಹಾಲಿಂಗೇಶ್ವರ ದೇವಸ್ಥಾನ ಈಶ್ವರ ಭಟ್ ಸಮಿತಿಯದ್ದು ಅಲ್ಲ. ಭಕ್ತರ ದೇವಸ್ಥಾನ.ದೇವಸ್ಥಾನದ ವಿಚಾರದಲ್ಲಿ ಪ್ರತಿಯೊಂದು ವಿಷಯದಲ್ಲಿ ಭಕ್ತರ ಸಲಹೆಗೆ ಗೌರವ ಕೊಟ್ಟಿದ್ದೇವೆ. ಜೀರ್ಣೋದ್ದಾರ ಮಾಡುವುದು ನಮ್ಮ ಗುರಿ.ಯಾರ ಮೇಲೂ ಹಗೆ ಕಟ್ಟಿಕೊಳ್ಳುವುದಿಲ್ಲ.ಟೀಕೆ ಮಾಡುವುದು ಮೂರು ನಾಲ್ಕು ಜನ.ಆದರೆ ನಮ್ಮ ಬೆನ್ನು ತಟ್ಟುವವರು ಸಾವಿರ ಸಾವಿರ ಸಂಖ್ಯೆಯಲ್ಲಿದ್ದಾರೆ-
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು







