ಸುಬ್ರಹ್ಮಣ್ಯ : ಅರಣ್ಯ ಇಲಾಖೆಯಿಂದ ರೈತರು, ಕೃಷಿಕರು, ಅರಣ್ಯದಂಚಿನ ನಿವಾಸಿಗಳಿಗೆ ಆಗುತ್ತಿರುವ ತೊಂದರೆ ವಿರುದ್ಧ ಕಡಬದಲ್ಲಿ ನಡೆಯಲಿರುವ ಬೃಹತ್ ಹಕ್ಕೊತ್ತಾಯ ಸಮಾವೇಶದ ಪೂರ್ವಭಾವಿಯಾಗಿ ಮಂಗಳವಾರ ಸುಬ್ರಹ್ಮಣ್ಯದಿಂದ ಕಡಬದ ಬಲ್ಯದವರೆಗೆ ರೈತ ಜಾಗೃತಿ ಜಾಥ ನಡೆಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ ಬಳಿ ರೈತ ಜಾಗೃತಿ ಜಾಥಕ್ಕೆ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ ರುದ್ರಪಾದ ಚಾಲನೆ ನೀಡಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರ ಸಹಯೋಗದೊಂದಿಗೆ ಜಾಗೃತಿ ಜಾಥ ನಡೆಯಿತು.

ಹೋರಾಟಗಾರ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅರಣ್ಯ ಇಲಾಖೆ ರೈತರು,ಕೃಷಿಕರು, ಅರಣ್ಯದಂಚಿನ ಗ್ರಾಮಸ್ಥರನ್ನು ಅರಣ್ಯ ಅತಿಕ್ರಮಿಸಿದ ಜಾಗದಲ್ಲಿ ಕೃಷಿ ಮಾಡಿದ್ದೀರಿ ಎಂದು ಆರೋಪಿಸಿ, ಅಲ್ಲಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕು. ಇಲಾಖೆಗಳು ಮಾಡಿದ ತಪ್ಪನ್ನು ಇಲಾಖೆಗಳೇ ಸರಿ ಮಾಡಬೇಕು, ಜಂಟಿ ಸರ್ವೇ ಮಾಡಿ, ಗಡಿಗುರುತು ಮಾಡಬೇಕು, ಹಕ್ಕುಪತ್ರಗಳನ್ನು ಅಧಿಕೃತ ಮಾಡಬೇಕು ಮುಂತಾದ ಬೇಡಿಕೆಗಳನ್ನು ಸರಕಾರದ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದ ಅವರು, ನ.15ರಂದು ಕಡಬದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ಮಾಡಿ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲಿದ್ದೇವೆ ಎಂದರು.
ಸುಬ್ರಹ್ಮಣ್ಯದಿಂದ ಹೊರಟ ರೈತ ಜಾಗೃತಿ ವಾಹನ ಜಾಥ ಕುಲ್ಕುಂದ, ಕೈಕಂಬ, ಬಿಳಿನೆಲೆ, ನೆಟ್ಟಣ, ಸುಂಕದಕಟ್ಟೆ, ಮರ್ಧಾಳ, ಕಡಬ, ಹೊಸಮಠ ಮೂಲಕ ಬಲ್ಯಕ್ಕೆ ಸಾಗಿತು. ಜಾಥ ಸಾಗುವ ದಾರಿ ಮಧ್ಯೆ ಸಿಗುವ ಗ್ರಾ.ಪಂ., ಪೇಟೆಗಳಲ್ಲಿ ಹಕ್ಕೊತ್ತಾಯ ಸಮಾವೇಶದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಪ್ರಮುಖರಾದ ಕಿಶೋರ್ ಶಿರಾಡಿ, ರಮಾನಂದ ಎಣ್ಣೆಮಜಲು, ಮನೀಷ್ ಪದೇಲ, ಅಶೋಕ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ವೆಂಕಟ್ ವಳಲಂಬೆ, ಅಚ್ಚುತ ಗೌಡ, ದಿನೇಶ್ ಸಂಪ್ಯಾಡಿ, ಗಿರೀಶ್ ಆಚಾರ್ಯ, ಚಂದ್ರಶೇಖರ ಕೋಡಿಬೈಲ್, ಹರಿಪ್ರಸಾದ್ ಎನ್ಕಾಜೆ, ಜೋಸ್, ಹರ್ಷಿತ್, ಮತ್ತಿತರರು ಭಾಗವಹಿಸಿದ್ದರು. ಗ್ರಾಮದ ವಿವಿಧ ಭಾಗಗಳ ಮೂಲಕವೂ ರೈತರು ಜಾಗೃತಿ ಜಾಥಕ್ಕೆ ಸೇರಿಕೊಂಡರು.