ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ಪುತ್ತೂರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಬೊಳ್ವಾರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಪುತ್ತೂರು, ಹಾಸ್ಪಿಟಲ್ ಅಸೋಸಿಯೇಷನ್, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ಇನ್ನರ್ವೀಲ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು, ಡಾಕ್ಟರ್ಸ್ ಫೋರಂ ಪುತ್ತೂರು ಹಾಗೂ ಸರಕಾರಿ ಆಸ್ಪತ್ರೆ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ನ.11 ರಂದು ಆಚರಿಸಲಿರುವ ವಿಶ್ವ ಮಧುಮೇಹ ದಿನಾಚರಣೆ ಇದರ ಪ್ರಯುಕ್ತ ವಾಕಥಾನ್-ಜಾಗೃತಿ ಜಾಥಾವು ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ನಡೆಯಲಿದೆ.
ಮಧುಮೇಹ ನಿಯಂತ್ರಣ, ತಡೆಗಟ್ಟುವಿಕೆ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಜಾಥಾವು ಪುತ್ತೂರು ಬಸ್ ನಿಲ್ದಾಣದಿಂದ ಆರಂಭಗೊಂಡು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಮಾಪನಗೊಳ್ಳಲಿದ್ದು, ಅಲ್ಲಿ ಸಾರ್ವಜನಿಕರಿಗೆ ಉಚಿತ ರಕ್ತದ ಸಕ್ಕರೆ (ಬ್ಲಡ್ ಶುಗರ್) ತಪಾಸಣಾ ಶಿಬಿರ ನಡೆಯಲಿದೆ.
ಈ ಸಾಲಿನ ವಿಶ್ವ ಮಧುಮೇಹ ದಿನದ ಧ್ಯೇಯ “Diabetes and Well-being – ಮಧುಮೇಹ ಮತ್ತು ಸಮಗ್ರ ಆರೋಗ್ಯ” ಆಗಿದ್ದು, ಇದರ ಅರಿವನ್ನು ಜನತೆಗಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ಜಾಥಾ ಉದ್ಘಾಟನೆ, ವಿಶೇಷ ಉಪಸ್ಥಿತಿ:
ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 8 ಗಂಟೆಗೆ ಜಾಥಾಕ್ಕೆ ಚಾಲನೆ ದೊರೆಯಲಿದ್ದು, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ.ರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರಲಿದ್ದಾರೆ. ತಾಲೂಕು ವೈದ್ಯಾಧಿಕಾರಿ ಹಾಗೂ ಐಎಂಎ ಪುತ್ತೂರು ಉಪಾಧ್ಯಕ್ಷ ಡಾ. ದೀಪಕ್ ರೈ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮಧುಮೇಹ ಮುಕ್ತ ಸಮಾಜದ ನಿರ್ಮಾಣದ ಗುರಿಯೊಂದಿಗೆ ನಡೆಯುವ ಈ ಮಹತ್ವದ ಜನಾಂದೋಲನದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ವಿಶೇಷ..
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಡಾ. ನಝೀರ್ ಡಯಾಬಿಟಿಸ್ ಸೆಂಟರ್ 2020ರಲ್ಲಿ ಆರಂಭಿಸಿದ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಯೋಜನೆ “ಪ್ರಾಜೆಕ್ಟ್ ಸ್ವೀಟ್ ಚೈಲ್ಡ್” ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಇದು ಬೆಂಗಳೂರಿನ ಡಾ. ಪ್ರಸನ್ನ ಕುಮಾರ್ ನೇತೃತ್ವದ ಎನ್ಜಿಒ ಸಹಯೋಗದೊಂದಿಗೆ, ಟೈಪ್-1 ಮಧುಮೇಹದಿಂದ ಬಳಲುವ ಸುಮಾರು 15 ಬಡ ಮಕ್ಕಳಿಗೆ ಉಚಿತ ಇನ್ಸುಲಿನ್, ಗ್ಲುಕೋಮೀಟರ್ ಹಾಗೂ ಟೆಸ್ಟ್ ಸ್ಟ್ರಿಪ್ಗಳನ್ನು ನಿರಂತರವಾಗಿ ಒದಗಿಸುವ ಮಾನವೀಯ ಸೇವಾ ಯೋಜನೆಯಾಗಿದೆ.
ಡಾ. ನಝೀರ್ ಅಹಮದ್ ರವರ ಸಂದೇಶ..
ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಎಂಡಿ, ಡಿಎಫ್ಐಡಿ ತಜ್ಞ ವೈದ್ಯ ಡಾ. ನಝೀರ್ ಅಹಮದ್ ಮಾತನಾಡಿ, ವಿಶ್ವ ಮಧುಮೇಹ ದಿನ ಕೇವಲ ಒಂದು ಜಾಗೃತಿ ಅಭಿಯಾನವಲ್ಲ, ಇದು ಒಗ್ಗಟ್ಟಿನ ಶಕ್ತಿ ಹಾಗೂ ಸಹಬಾಳ್ವೆಯ ಸಂಕೇತ. ಮಧುಮೇಹದೊಂದಿಗೆ ಬದುಕುವವರ ಜೊತೆ ಸಮುದಾಯವಾಗಿ ನಿಲ್ಲುವುದು, ಆರೋಗ್ಯಕರ ಜೀವನದ ಕುರಿತು ಅರಿವು ಬೆಳೆಸುವುದು ಮತ್ತು ನಮ್ಮ ‘ಸ್ವೀಟ್ ಚೈಲ್ಡ್’ ಮಕ್ಕಳಿಗೆ ಬೆಂಬಲ ನೀಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ನೋಂದಣಿಗೆ ಉಚಿತ ಟಿ-ಶರ್ಟ್, ಕ್ಯಾಪ್..
ವಾಕಥಾನ್ಗೆ ಮುಂಚಿತವಾಗಿ ನೋಂದಣಿ ಮಾಡಿಸುವವರಿಗೆ ಉಚಿತ ಟಿ-ಶರ್ಟ್ ಹಾಗೂ ಕ್ಯಾಪ್ ನೀಡಲಾಗಲಿದ್ದು, ಜತೆಗೆ ಲಘು ಉಪಾಹಾರ ವ್ಯವಸ್ಥೆಯೂ ಇರಲಿದೆ. ನೋಂದಣಿಗೆ ವಾಟ್ಸ್ಆಪ್ 94814 51929 ನಂಬರಿಗೆ ಸಂಪರ್ಕಿಸಬಹುದು.