ಆಲಂಕಾರು: ಉಚಿತ ನೇತ್ರ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ

0

ಆಲಂಕಾರು: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಮತ್ತು ಗ್ರಾ.ಪಂ.ಆಲಂಕಾರು ಇವರ ಆಶ್ರಯದಲ್ಲಿ ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ ಯೋಗ ಕ್ಷೇಮ ಸಂಕೀರ್ಣ ಕಡಬ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಇವರ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಕಡಬ ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ ವತಿಯಿಂದ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನ.9ರಂದು ಆಲಂಕಾರು ದುರ್ಗಾಂಬಾ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಉದ್ಘಾಟಿಸಿದ ಆಲಂಕಾರು ದುರ್ಗಾಂಬಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಪಂಚೇಂದ್ರಿಯಗಳಲ್ಲಿ ಕಣ್ಣು ನಮಗೆ ಅತ್ಯಂತ ಪ್ರಾಮುಖ್ಯವಾದ ಅಂಗವಾಗಿದೆ. ಅದನ್ನು ಸಂರಕ್ಷಿಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಂತಹ ಶಿಬಿರಗಳು ವರದಾನವಾಗಿದೆ. ಈ ನಿಟ್ಟಿನಲ್ಲಿ ಶಿಬಿರ ಆಯೋಜಿಸಿರುವ ಆಲಂಕಾರು ಲಯನ್ಸ್ ಕ್ಲಬ್, ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆರವರ ಸೇವೆ ಶ್ಲಾಘನೀಯವಾಗಿದೆ. ಈ ಶಿಬಿರ ಎಲ್ಲರಿಗೂ ಬೆಳಕನ್ನು ನೀಡಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಅಶ್ವಿನ್ ಕಣ್ಣಿನ ಚಿಕಿತ್ಸಾಲಯದ ಖ್ಯಾತ ನೇತ್ರ ತಜ್ಞರಾದ ಡಾ.ಅಶ್ವಿನ್ ಸಾಗರ್ ಮಾತನಾಡಿ, ಈಗಿನ ಜನರಲ್ಲಿ ಶೇ.50ರಷ್ಟು ಮಂದಿಗೆ ಕಣ್ಣಿನ ಸಮಸ್ಯೆ ಇದೆ. ವಿಪರೀತ ಧೂಳು ಮತ್ತು ಅತಿಯಾದ ಮೊಬೈಲ್ ಬಳಕೆ ಕಣ್ಣಿಗೆ ಸಮಸ್ಯೆ ತರುತ್ತಿದೆ. ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆಯಿಂದ ಬಳಲುತ್ತಿರುವವರು ಶೀಘ್ರವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಲೆನ್ಸ್ ಅಳವಡಿಸದೆ ಹೋದಲ್ಲಿ ಶಾಶ್ವತವಾಗಿ ಕಣ್ಣಿನ ಬೆಳಕನ್ನು ಕಳೆದುಕೊಳ್ಳಬೇಕಾಗುತ್ತದೆ. ಕಣ್ಣಿನ ಪೊರೆಯಿಂದ ಬಳಲುತ್ತಿರುವವರು ಯಾವುದೇ ಮುಜುಗರ ಇಲ್ಲದೆ ಶೀಘ್ರವಾಗಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕು. ಈ ಶಿಬಿರದಲ್ಲಿ ಸಮೀಪ ದೃಷ್ಟಿಯ ದೋಷ ಇರುವವರಿಗೆ ಅಶ್ವಿನ್ ಕಣ್ಣಿನ ಚಿಕಿತ್ಸಾಲಯದಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಲಂಕಾರು ಲಯನ್ಸ್ ಕ್ಲಬ್ ಉಪಾಧ್ಯಕ್ಷರಾದ ಹರಿದಾಸ ಭಟ್ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ನಡೆಸಿದ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳು, ವೈದ್ಯಕೀಯ ಶಿಬಿರಗಳು ಮತ್ತು ಕಣ್ಣಿನ ಶಿಬಿರಗಳ ಬಗ್ಗೆ ಮಾಹಿತಿಯನ್ನು ನೀಡಿ ಸಾಮಾಜಿಕ ಕಳಕಳಿಯುಳ್ಳ ನಮ್ಮ ಸಂಸ್ಥೆ ಇಂತಹ ಸೇವೆಗಳಿಗೆ ಸದಾ ಸಿದ್ಧ ಎಂದರು.

ಆಲಂಕಾರು ದುರ್ಗಾಂಬಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ, ಆಡಳಿತಾಧಿಕಾರಿ ಶ್ರೀಪತಿ ರಾವ್, ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಕೊಂಡಾಡಿ ಸಂದರ್ಭೋಚಿತವಾಗಿ ಮಾತನಾಡಿದರು. ಆಲಂಕಾರು ಶ್ರೀದೇವಿ ಅರ್ಥ್‌ಮೂವರ್ಸ್ ಮಾಲಕ ವಿನೋದ್ ಕುಮಾರ್ ರೈ ಮನವಳಿಕೆಗುತ್ತು, ಖ್ಯಾತ ನೇತ್ರ ತಜ್ಞ ವಿಕಾಸ್ ಎಸ್.ಎಂ. ಉಪಸ್ಥಿತರಿದ್ದರು.
೬೦ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲಂಕಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಿಂಗಪ್ಪ ಪೂಜಾರಿ ವಂದಿಸಿದರು. ಪುತ್ತೂರು ರಾಮಕೃಷ್ಣ ವಿದ್ಯಾಸಂಸ್ಥೆಯ ನಿರ್ದೇಶಕ, ಆಲಂಕಾರು ಲಯನ್ಸ್ ಕ್ಲಬ್ ಪದಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು ಕಾರ್ಯಕ್ರಮ ನಿರೂಪಿಸಿದರು.

120ಕ್ಕೂ ಹೆಚ್ಚುಮಂದಿ ತಪಾಸಣೆ:
ಶಿಬಿರದಲ್ಲಿ 120ಕ್ಕೂ ಹೆಚ್ಚು ಸಾರ್ವಜನಿಕರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 80 ಮಂದಿಗೆ ಕನ್ನಡಕಗಳನ್ನು ಉಚಿತವಾಗಿ ಅಶ್ವಿನ್ ಕಣ್ಣಿನ ಚಿಕಿತ್ಸಾಲಯದ ವತಿಯಿಂದ ನೀಡಲಾಯಿತು. 15 ಮಂದಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ಶಿಫಾರಸುಗೊಂಡರು.

LEAVE A REPLY

Please enter your comment!
Please enter your name here