ಕಾಂಗ್ರೆಸ್ ಸರಕಾರದ ಬಡವರ ಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ: ಶಾಸಕ ಅಶೋಕ್ ರೈ
ಪುತ್ತೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದ ಜನತೆ ನೆಮ್ಮದಿಯಲ್ಲಿದ್ದಾರೆ ಇದಕ್ಕೆ ಕಾರಣ ಸರಕಾರದ ಗ್ಯಾರಂಟಿ ಯೋಜನೆಯಾಗಿದ್ದು, ಈ ವಿಚಾರವನ್ನು ಕಾರ್ಯಕರ್ತರು ಪ್ರತೀ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಉಪ್ಪಿನಂಗಡಿ ರೋಟರೀ ಸಭಾಭವನದಲ್ಲಿ ನಡೆದ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಹತ್ತು ವರ್ಷದಲ್ಲಿ ಜನರ ಮೇಲೆ ಜಿಎಸ್ಟಿ ಬರೆ ಎಳೆದಿದ್ದರು. ಜಿಎಸ್ಟಿ ಹೊರೆಯನ್ನು ದೇಶದ ಪ್ರತೀಯೊಂದು ಪ್ರಜೆಯ ತಲೆಗೂ ಹಾಕಿದ್ದರು. ಹತ್ತು ವರ್ಷದ ಬಳಿಕ ನಾಲ್ಕು ವಸ್ತುಗಳಿಗೆ ಜಿಎಸ್ಟಿ ತೆರಿಗೆ ಇಳಿಸಿದ್ದು, ಅದನ್ನೇ ದೀಪಾವಳಿ ಕೊಡುಗೆ ಎಂದು ಹೇಳಿ ಜನರನ್ನು ಮಂಗ ಮಾಡುವ ಕೆಲಸ ಮಾಡುತ್ತಿದೆ. ಶಾಸಕರು ಕೇಂದ್ರ ಬಿಜೆಪಿ ಸರಕಾರದ ಒಂದೇ ಒಂದು ಜನಪರ ಕೆಲಸವನ್ನು ತೋರಿಸಿ ಎಂದರು. ವರ್ಷಕ್ಕೆ ಎರಡು ಸಾವಿರ ಕೊಡುವ ಕಿಸಾನ್ ಸಮ್ಮಾನ್ ಯೋಜನೆಯನ್ನೇ ದೊಡ್ಡ ವಿಚಾರವಾಗಿ ಪ್ರಚಾರ ಮಾಡುವ ಬಿಜೆಪಿಯವರಿಗೆ ಸಿದ್ದರಾಮಯ್ಯ ಸರಕಾರ ಕೊಡುವ ಗ್ಯಾರಂಟಿ ಯೋಜನೆಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯನ್ನು ಪ್ರಚಾರ ಮಾಡಿ
ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ಕಾರ್ಯಕರ್ತರು ಪ್ರಚಾರ ಮಾಡಬೇಕು. ಈ ಯೋಜನೆಯ ಲಾಭವನ್ನು ಪ್ರತೀಯೊಂದು ಕುಟುಂಬ ಪಡೆಯುತ್ತಿದೆ. ಇದುವರೆಗೂ ಯಾವುದೇ ಸರಕಾರದ ನೀಡದ ಬಡವರ ಪರ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿ ಮಾಡಿದೆ ಇದನ್ನು ನಾವು ಎಂದಿಗೂ ಮರೆಯಬಾರದು. ಇದರ ಲಾಭ ಪಡೆದ ಪ್ರತೀಯೊಬ್ಬರೂ ಪಕ್ಷಕ್ಕೆ ಕೃತಜ್ಞರಾಗಿರಬೇಕು ಎಂದು ಶಾಸಕರು ಹೇಳಿದರು.
ಶಾಸಕರ ಶಕ್ತಿ ಎನೆಂಬುದನ್ನು ಸಿದ್ದರಾಮಯ್ಯ ಹೇಳಿದ್ದಾರೆ; ಎಂ ಎಸ್ ಮಹಮ್ಮದ್
ಪುತ್ತೂರು ಶಾಸಕ ಅಶೋಕ್ ರೈ ಅವರ ಶಕ್ತಿ ಹೇಗಿದೆ ಎಂಬುದನ್ನು ಪುತ್ತೂರಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಮುಂದೆ ಹೇಳಿ ಹೋಗಿದ್ದಾರೆ. ಯಾವ ಶಾಸಕರೂ ಪುತ್ತೂರಿನಲ್ಲಿ ಮಾಡದ ಅಭಿವೃದ್ದಿ ಕೆಲಸವನ್ನು ಅಶೋಕ್ ರೈ ಮಾಡಿದ್ದಾರೆ. ಇಲ್ಲಿನವರೇ ಮುಖ್ಯಮಂತ್ರಿಗಳಾಗಿದ್ದರು, ಸಚಿವರಾಗಿದ್ದರು, ಸಂಸದರಾಗಿದ್ದರೂ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲು ಸಾಧ್ಯವಾಗಿಲ್ಲ. ಯಾವುದೇ ಅಭಿವೃದ್ದಿ ಕೆಲಸ ಮಾಡಬೇಕಾದರೂ ಇಚ್ಚಾಶಕ್ತಿ ಬೇಕಾಗುತ್ತದೆ ಇದು ಅಶೋಕ್ ರೈ ಅವರಲ್ಲಿದೆ. ಇದೇ ಕಾರಣಕ್ಕೆ ಪುತ್ತೂರಿಗೆ ಕೋಟಿಗಟ್ಟಲೆ ಅನುದಾನ ಹರಿದು ಬರುತ್ತಿದೆ. ಬಡವರ ಕೆಲಸಗಳು ಆಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಟಂತಬೆಟ್ಟು, ಕೆಪಿಸಿಸಿ ಸಂಯೋಜಕರಾದ ಚಂದ್ರಹಾಸ ಶೆಟ್ಟಿ, ಪುತ್ತೂರು ವಿಧಾನಸಬಾ ಕ್ಷೆತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ವಿಕ್ರಂ ಶೆಟ್ಟಿ, ಪಕ್ಷದ ಮುಖಂಡರಾದ ಸೋಮನಾಥ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ವಲಯ ಅಧ್ಯಕ್ಷರುಗಳಾದಪ್ರವೀಣ್ ಶೆಟ್ಟಿ ಕೆದಿಲ, ಅನಿಮಿನೆಜಸ್ ನೆಕ್ಕಿಲಾಡಿ, ಮೋನಪ್ಪ ಗೌಡ ಕೋಡಿಮಬಾಡಿ, ಅಬ್ದುಲ್ಲ ಪೆರ್ನೆ, ಆದಂ ಕೊಪ್ಪಳ, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್, ಉದ್ಯಮಿ ರಾಧಾಕೃಷ್ಣ ನಾಯ್ಕ್, ಫಾರೂಕ್ ಬಾಯಬ್ಬೆ, ಜಗನ್ನಾಥ ರೈ ನಡುಮನೆ, ಡಾ. ರಮ್ಯಾರಾಜಾರಾಂ, ಶಬೀರ್ ಕೆಂಪಿ, ಅಬ್ದುಲ್ ರಹಿಮಾನ್ ಯುನಿಕ್, ಸತೀಶ್ ಪಟ್ಟಾರ್ಥಿ, ಗೀತಾ ದಾಸರಮೂಲೆ, ಶೌಕತ್ ಕೆಮ್ಮಾರ, ಮತ್ತಿತರರು ಉಪಸ್ಥಿತರಿದ್ದರು. ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ನಝೀರ್ ಮಠ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಬ್ಲಾಕ್ ಗೆ ನೇಮಕವಾದ ವಿವಿಧ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಶಾಸಕರು ವಿತರಿಸಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉಪ್ಪಿನಂಗಡಿ ಉಬಾರ್ ಸ್ಪೋರ್ಟಿಂಗ್ ಆಂಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷರಾದ ಶಬೀರ್ ಕೆಂಪಿಯವರನ್ನು ಶಾಸಕರು ಸನ್ಮಾನಿಸಿದರು.
