ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಎಳ್ಳೆಣ್ಣೆ ಸಮರ್ಪಣೆ
ಸಾನಿಧ್ಯವೃದ್ಧಿಗಾಗಿ ಎಲ್ಲಾ ಪೂಜೆ ಪುರಸ್ಕಾರ ನಿರಂತರ – ಅಶೋಕ್ ಕುಮಾರ್ ರೈ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಇತ್ತೀಚೆಗೆ ನಡೆದ ಶುದ್ಧ ಎಳ್ಳೆಣ್ಣೆ ಅಭಿಷೇಕದ ಪ್ರಸಾದವನ್ನು ಪಡೆದ ಭಕ್ತರಲ್ಲಿ ಬಹಳಷ್ಟು ಉತ್ತಮ ಪರಿಣಾಮ ಭೀರಿರುವ ಹಿನ್ನೆಲೆಯಲ್ಲಿ ಭಕ್ತರ ಬೇಡಿಕೆಯಂತೆ ಪ್ರತಿ ತಿಂಗಳು ಮಹಾಲಿಗೇಶ್ವರ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವ ಸಲುವಾಗಿ ನ.10ರಂದು ಬೆಳಗ್ಗೆ ಶಾಸಕ ಅಶೋಕ್ ಕುಮಾರ್ ರೈ ಎಳ್ಳೆಣ್ಣೆ ಸಂಗ್ರಹ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ಅಶೋಕ್ ಕುಮಾರ್ ರೈ ಅವರು ತುಪ್ಪದ ದೀಪ ಬೆಳಗಿಸಿ, ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಬಳಿಕ ದೇವಳದ ಸೇವಾ ವಿಭಾಗದಿಂದ ರೂ. 500 ದರದ ಎಳ್ಳೆಣ್ಣೆ ಖರೀದಿಸಿ ಎಳ್ಳೆಣ್ಣೆ ಸಂಗ್ರಹಕ್ಕೆ ಸಮರ್ಪಣೆ ಮಾಡಿದರು. ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಮಾಡಿದರು.
ಸಾನಿಧ್ಯವೃದ್ಧಿಗಾಗಿ ಎಲ್ಲಾ ಪೂಜೆ ಪುರಸ್ಕಾರ ನಿರಂತರ
ಎಳ್ಳೆಣ್ಣೆ ಸಮರ್ಪಣೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾಧ್ಯಮದ ಜೊತೆ ಮಾತನಾಡಿದರು. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಶುದ್ಧ ಎಳ್ಳೆಣ್ಣೆ ದೇವರಿಗೆ ಅಭಿಷೇಕ ಮಾಡುವುದು ಮತ್ತು ಅಭಿಷೇಕದ ಎಣ್ಣೆಯನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸುವುದು. ಈ ಪ್ರಸಾದ ಎಣ್ಣೆಯು ಚರ್ಮ ರೋಗ ಸಹಿತ ಇತರ ಎಲ್ಲಾ ರೋಗಳಿಗೆ ಔಷಧಿಯಾಗಲಿದೆ ಎಂದ ಅವರು ದೇವಸ್ಥಾನದಲ್ಲಿ ಸಾನಿಧ್ಯವೃದ್ಧಿಗಾಗಿ ಎಲ್ಲಾ ಪೂಜೆ ಪುರಸ್ಕಾರ ನಿರಂತರ ಮಾಡಲಾಗುತ್ತದೆ ಎಂದರು.
ಪ್ರತಿ ತಿಂಗಳು ಎಳ್ಳೆಣ್ಣೆ ಸಮರ್ಪಿಸಲು 29 ದಿವಸ ಅವಕಾಶ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಪ್ರಶ್ನಾಚಿಂತನೆಯಲ್ಲಿ ದೈವಜ್ಞರು ಈ ಹಿಂದೆ ಉಲ್ಲೇಖಿಸಿದಂತೆ ಮಹಾಲಿಂಗೇಶ್ವರ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿದ್ದೆವು. ಬಳಿಕದ ದಿನ ಭಕ್ತರ ಬೇಡಿಕೆಯಂತೆ ಇದೀಗ ಪ್ರತಿ ತಿಂಗಳು ಎಳ್ಳೆಣ್ಣೆ ಅಭಿಷೇಕ ಮಾಡುವ ನಿರ್ಧಾರವನ್ನು ಶಾಸಕರ ಸೂಚನೆಯಂತೆ ಮಾಡಿದ್ದೇವೆ. ಭಕ್ತರು ತಿಂಗಳ 29 ದಿವಸ ಎಳ್ಳೆಣ್ಣೆ ಸಮರ್ಪಣೆ ಮಾಡಬೇಕು. 30ನೇ ದಿನ ಶುದ್ಧ ಎಳ್ಳೆಣ್ಣೆಯನ್ನು ಶ್ರೀ ದೇವರಿಗೆ ಅಭಿಷೇಕ ಮಾಡಲಾಗುವುದು. ಅಭಿಷೇಕದ ಎಳ್ಳೆಣ್ಣೆಯನ್ನು ಸೇವಾರಶೀದಿ ಮಾಡಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು. ಇದು ನಿರಂತರ ಪ್ರತಿ ತಿಂಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ, ಈಶ್ವರ ಬೆಡೇಕರ್, ನಳಿನಿ ಪಿ ಶೆಟ್ಟಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶಿವರಾಮ ಆಳ್ವ, ಲೋಕೇಶ್ ಪಡ್ಡಾಯೂರು, ಪುತ್ತೂರು ನಗರಾಭಿವೃದ್ದಿ ಯೋಜನೆ ಪ್ರಾಧಿಕಾರ ಸದಸ್ಯ ನಿಹಾಲ್ ಪಿ ಶೆಟ್ಟಿ, ದಿವಾಕರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
