ಪುತ್ತೂರು: ಕುಂಬ್ರ ವರ್ತಕರ ಸಂಘದ ವತಿಯಿಂದ ಪುತ್ತೂರು ಅಗ್ನಿ ಶಾಮಕ ದಳದವರಿಂದ ಕುಂಬ್ರ ಪೇಟೆಯಲ್ಲಿ ಅಗ್ನಿ ಅವಘಡಗಳಿಂದ ಪಾರಾಗುವ ಬಗೆ ಹಾಗೂ ಅಗ್ನಿ ಶಾಮಕ ದಳದವು ಬೆಂಕಿ ನಂದಿಸುವಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬಿತ್ಯಾದಿಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನ.10 ರಂದು ಕುಂಬ್ರ ಜಂಕ್ಷನ್‌ನಲ್ಲಿ ನಡೆಯಿತು.
ಪುತ್ತೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಲೀಲಾಧರ್‌ರವರು ಮಾಹಿತಿ ನೀಡುತ್ತಾ, ಆಕಸ್ಮಿಕವಾಗಿ ಬೆಂಕಿ ಬಿದ್ದಾಗ ಅದನ್ನು ಯಾವ ರೀತಿಯಲ್ಲಿ ನಂದಿಸಬಹುದು ಎಂಬ ಬಗ್ಗೆ ಹಾಗೆ ಅಗ್ನಿ ಶಾಮಕ ದಳದಿಂದ ಬೆಂಕಿಯನ್ನು ಯಾವ ರೀತಿಯಲ್ಲಿ ನಂದಿಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿದರು. ಇದಲ್ಲದೆ ಕುಂಬ್ರದ ಆಕರ್ಷಣ್ ಗ್ರೌಂಡ್‌ನಲ್ಲಿ ಬೆಂಕಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಶಂಕರ್, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಸಂಘದ ಗೌರವ ಸಲಹೆಗಾರ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಉಪಾಧ್ಯಕ್ಷ ಸದಾಶಿವ ಕುಂಬ್ರ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಕಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ
ಪುತ್ತೂರು ಅಗ್ನಿ ಶಾಮಕ ದಳದವರಿಗೆ ವಿಶೇಷವಾಗಿ ಬೆಂಕಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.ಆಕಸ್ಮಿಕವಾಗಿ ಬೆಂಕಿ ಹಿಡಿದಾಗ ಯಾವ ರೀತಿಯಲ್ಲಿ ನಂದಿಸಬಹುದು ಎಂಬುದನ್ನು ತೋರಿಸಿದರು. ಚಿಕ್ಕಪುಟ್ಟ ಬೆಂಕಿ ಹಿಡಿದಾಗ ಗೋಣಿ ಚೀಲವನ್ನು ನೀರಲ್ಲಿ ಅದ್ದಿ ಯಾವ ರೀತಿ ಬೆಂಕಿ ನಂದಿಸಬಹುದು ಹಾಗೇ ದೊಡ್ಡ ಮಟ್ಟದ ಬೆಂಕಿ ಹಿಡಿದಾಗ ಅಗ್ನಿ ಶಾಮಕ ದಳದವರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತೋರಿಸಿದರು. ಅಗ್ನಿ ಶಾಮಕ ದಳದ ಠಾಣಾಧಿಕಾರಿ ಶಂಕರ್, ಸಿಬ್ಬಂದಿಗಳು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
3 ನಿಮಿಷ ಆಮೂಲ್ಯ
ಎಲ್ಲಿಯೇ ಆದರೂ ಬೆಂಕಿ ಹಿಡಿದಾಗ ಪ್ರಾರಂಭದ 3 ನಿಮಿಷ ಬಹಳ ಅಮೂಲ್ಯವಾಗಿರುತ್ತದೆ. 3 ನಿಮಿಷದ ಅವಧಿಯಲ್ಲಿ ಬೆಂಕಿ ಹೆಚ್ಚು ಪ್ರಮಾಣದಲ್ಲಿ ಆವರಿಸಿರುವುದಿಲ್ಲ ಈ ಸಮಯದಲ್ಲಿ ಬೆಂಕಿಯನ್ನು ನಂದಿಸಬಹುದಾಗಿದೆ. 3 ನಿಮಿಷ ಕಳೆದರೆ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸುತ್ತದೆ. ಆದ್ದರಿಂದ ಈ 3 ನಿಮಿಷದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದ ಇದ್ದರೆ ಬೆಂಕಿಯನ್ನು ನಂದಿಸಬಹುದು ಹೆಚ್ಚಿನ ಅವಘಡವನ್ನು ತಪ್ಪಿಸಬಹುದು ಎಂದು ಲೀಲಾಧರ್‌ರವರು ತಿಳಿಸಿದರು.
‘ ಆಪತ್ಕಾಲದಲ್ಲಿ ಅಗ್ನಿ ಶಾಮಕ ದಳದವರ ಸೇವೆ ಅತ್ಯಮೂಲ್ಯವಾದದ್ದು ಆಗಿದೆ. ಬೆಂಕಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಬಗೆ ಹಾಗೇ ಬೆಂಕಿ ನಂದಿಸುವ ಬಗ್ಗೆ ಮಾಹಿತಿ ಮುಟ್ಟಿಸುವ ಕೆಲಸವನ್ನು ವರ್ತಕರ ಸಂಘದಿಂದ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರಿಗೆ ಇದರ ಪ್ರಾಯೋಜನ ಸಿಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ.’
ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ವರ್ತಕರ ಸಂಘದ ಕುಂಬ್ರ