





ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಆಳಂತಡ್ಕದ ಶೀಲಾವತಿ ಅವರ ಸ್ಮರಣಾರ್ಥವಾಗಿ, ವಿದೇಶದಲ್ಲಿ ವಾಸಿಸುತ್ತಿರುವ ಅವರ ಪುತ್ರ ವಿನೋದ್ ಕುಮಾರ್ ಅವರ ದೇಣಿಗೆಯಿಂದ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿಗೆ ನೀರು ಶುದ್ಧೀಕರಣ ಯಂತ್ರವನ್ನು ವಿತರಿಸಲಾಯಿತು.



ಕಾರ್ಯಕ್ರಮದ ಉದ್ಘಾಟನೆಯನ್ನು ಶೀಲಾವತಿಯವರ ಪುತ್ರ ಸಂತೋಷ್ ಕುಮಾರ್ ರೈ ಅವರು ನೆರವೇರಿಸಿದರು.





ಅತಿಥಿಗಳಾದ ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಮಾತನಾಡಿ, ರೋಟರಿ ಕ್ಲಬ್ ಸದಾ ಸಮಾಜದ ಹಿತದೃಷ್ಟಿಯಿಂದ ಅನೇಕ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ಶಾಲೆಗೆ ನೀಡಲಾದ ಈ ನೀರು ಶುದ್ಧೀಕರಣ ಯಂತ್ರವು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕ್ಲಬ್‌ನ ಪೂರ್ವಾಧ್ಯಕ್ಷ ಕೆ. ವಿಶ್ವಾಸ್ ಶೆಣೈ ಮಾತನಾಡಿ, ಇಂತಹ ಮಾನವೀಯ ಕಾರ್ಯಗಳು ಸಮಾಜದಲ್ಲಿ ಸೇವಾ ಮನೋಭಾವವನ್ನು ಬೆಳೆಸುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಸಹಾಯಗಳು ಅತ್ಯಂತ ಪ್ರಶಂಸನೀಯ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ನಮ್ಮ ರೋಟರಿ ಕ್ಲಬ್ ಸದಾ ಶಿಕ್ಷಣ, ಆರೋಗ್ಯ ಮತ್ತು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುತ್ತದೆ. ಇಂದು ಶೀಲಾವತಿಯವರ ಸ್ಮರಣಾರ್ಥವಾಗಿ ಶಾಲೆಗೆ ನೀಡಿದ ಈ ಯಂತ್ರವು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಲಿದೆ. ದೇಣಿಗೆಯ ಮೂಲಕ ಮಾನವೀಯ ಸೇವೆಗೆ ಬೆಂಬಲ ನೀಡಿದ ವಿನೋದ್ ಕುಮಾರ್ ಅವರಿಗೆ ನಮ್ಮ ಕ್ಲಬ್‌ನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶಾಲಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ನವೀನ್ ರೈ ಪಂಜಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಮುಖ್ಯಗುರು ಹೇಮಾರವರು ವಂದಿಸಿ ಮಾತನಾಡಿ, ನಮ್ಮ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಇದು ಮಕ್ಕಳ ಆರೋಗ್ಯ ಕಾಪಾಡುವತ್ತ ಹಾಗೂ ಸ್ವಚ್ಛತಾ ಜಾಗೃತಿಯನ್ನು ಬೆಳೆಸುವತ್ತ ಒಂದು ಪ್ರೇರಣಾದಾಯಕ ಹೆಜ್ಜೆಯಾಗಿದೆ. ಇಂತಹ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಗಳು ಎಲ್ಲ ಶಾಲೆಗಳಿಗೂ ಮಾದರಿಯಾಗಲಿ ಎಂದು ಹೇಳಿ ಕೃತಜ್ಞತೆ ವ್ಯಕ್ತಪಡಿಸಿದರು.
ಸನ್ಮಾನ
ಶಾಲೆಯ ವತಿಯಿಂದ ಶೀಲಾವತಿಯವರ ಪುತ್ರ ಸಂತೋಷ್ ಕುಮಾರ್ ರೈ ಹಾಗೂ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷರಾದ ಶಶಿಧರ್ ಕಿನ್ನಿಮಜಲುರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.










